ಬೆಳಗಾವಿ: ದೇಶದಲ್ಲಿ ಅಧಿಕಾರದ ಸ್ವಾರ್ಥಕ್ಕಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಹೊಂದಾಣಿಕೆ ರಾಜಕೀಯ ಮಾಡಿಕೊಂಡು ಬರುತ್ತಿವೆ. ಅಧಿಕಾರಕ್ಕೇರಿದ ಕೂಡಲೆ ಅವರವರ ಅಕ್ರಮ, ಭ್ರಷ್ಟಾಚಾರಗಳನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕುತ್ತಿವೆ ಎಂದು ಪಂಜಾಬ ಮುಖ್ಯಮಂತ್ರಿ ಭಗವಂತ ಮಾನ್ ಆರೋಪಿಸಿದರು.
ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೂ ಮುನ್ನ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು. ಮೇಲ್ನೋಟಕ್ಕೆ ಆರೋಪ, ಪ್ರತ್ಯಾರೋಪ ಮಾಡುತ್ತಿವೆ. ಆದರೆ, ಅಧಿಕಾರಕ್ಕಾಗಿ ಚುನಾವಣೆಗಳಲ್ಲಿ ಹೊಂದಾಣಿಕೆ ಮಾಡಿಕೊಂಡು ಬರುತ್ತಿವೆ ಎಂದು ಟೀಕಿಸಿದರು.
ಕರ್ನಾಟಕದಲ್ಲಿ ಬಿಜೆಪಿ, ಕಾಂಗ್ರೆಸ್ ಆಡಳಿತದಿಂದ ಜನರು ಬೇಸತ್ತು ಹೋಗಿದ್ದು, ಪರ್ಯಾಯ ಪಕ್ಷದ ಸರ್ಕಾರದತ್ತ ಮುಖ ಮಾಡಿದ್ದಾರೆ. ಆಮ್ ಆದ್ಮಿ ಪರವಾಗಿ ಉತ್ತಮ ವಾತಾವರಣ ನಿರ್ಮಾಣವಾಗಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕ್ರೇಜಿವಾಲ್ ಅವರು ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಲಿದ್ದಾರೆ ಎಂದರು. ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರಡ್ಡಿ, ಜಿಲ್ಲಾಧ್ಯಕ್ಷ ಶಂಕರ ಹೆಗಡೆ, ರಾಜಕುಮಾರ ಟೋಪಣ್ಣವರ, ಬಸನಗೌಡ ಚಿಕ್ಕನಗೌಡರ ಇತರರಿದ್ದರು.
ಪಕ್ಷ ಬೇರೆಯಾದರೂ ಸಿದ್ಧಾಂತ ಒಂದೇ: ಉತ್ತರ ಕರ್ನಾಟಕ ಭಾಗದಲ್ಲಿನ ರಾಜಕಾರಣಿಗಳೇ ಸಕ್ಕರೆ ಉದ್ಯಮಿಗಳಾಗಿರುವುದರಿಂದ ಕಬ್ಬು ಬೆಳೆಗಾರರಿಗೆ ಬೆಂಬಲ ಬೆಲೆ, ಕನಿಷ್ಠ ಬೆಲೆ ಸಿಗುತ್ತಿಲ್ಲ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಉದ್ಯಮಿಗಳ ರಕ್ಷಣೆ ಮಾಡುತ್ತಿವೆ ವಿನಃ ರೈತರನ್ನು ಅಲ್ಲ. ಪಂಜಾಬದಲ್ಲಿ ಆಮ್ ಆದ್ಮಿ ಸರ್ಕಾರ ರಚನೆಯಾದ ಬಳಿಕ ರೈತರ ಕಬ್ಬಿನ ಬಾಕಿ ಬಿಲ್ ಪಾವತಿಯಾಗಿದೆ. ನಿಗದಿತ ಸಮಯದಲ್ಲಿ ಕಬ್ಬಿನ ಬಿಲ್ ಪಾವತಿಯಾಗುತ್ತಿದೆ. ಇಲ್ಲಿನ ರಾಜಕಾರಣಿಗಳು ಸ್ಪರ್ಧಿಸುವ ಪಕ್ಷ ಬೇರೆ ಬೇರೆ ಇರಬಹುದು. ಆದರೆ, ಎಲ್ಲರದು ಒಂದೇ ಸಿದ್ಧಾಂತ ಮತ್ತು ಹೊಂದಾಣಿಕೆ ರಾಜಕಾರಣ. ಹಾಗಾಗಿ ಮತದಾರರು ಆಮ್ ಆದ್ಮಿ ಪಕ್ಷಕ್ಕೆ ಮತ ನೀಡಬೇಕು ಎಂದು ಪಂಜಾಬ ಮುಖ್ಯಮಂತ್ರಿ ಭಗವಂತ ಮಾನ್ ಮನವಿ ಮಾಡಿದರು.