ಕೈ- ಕಮಲಕ್ಕೆ ಬಂಡಾಯ ಬಿಸಿ

ಶಿಗ್ಗಾಂವಿ: ಸ್ಥಳೀಯ ಪುರಸಭೆ ಚುನಾವಣೆಯಲ್ಲಿ ಗೆಲುವಿಗೆ ಅಡ್ಡಿಯುಂಟು ಮಾಡುವ ಪಕ್ಷೇತರ ಅಭ್ಯರ್ಥಿಗಳ ಮನವೊಲಿಸಿ ನಾಮಪತ್ರ ವಾಪಸು ಪಡೆಸಲು ಪಕ್ಷದ ಅಧಿಕೃತ ಅಭ್ಯರ್ಥಿಗಳು ನಾನಾ ಕಸರತ್ತು ನಡೆಸಿದ್ದಾರೆ. ಆದರೆ, ಕಣಕ್ಕಿಳಿದಿರುವವರು ಮಾತ್ರ ನಾನಾ ಬೇಡಿಕೆಗಳನ್ನಿಟ್ಟು ಅಭ್ಯರ್ಥಿಗಳಿಗೆ ಚಳ್ಳೆಹಣ್ಣು ತಿನ್ನಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಪುರಸಭೆ ಚುನಾವಣೆಗೆ ನಾಮಪತ್ರಗಳ ಸಲ್ಲಿಕೆ, ನಾಮಪತ್ರಗಳ ಪರಿಶೀಲನೆ ಮುಕ್ತಾಯಗೊಂಡಿದೆ. ಮೇ 20ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಹೀಗಾಗಿ, ಪಕ್ಷೇತರರ ಮನವೊಲಿಕೆಗೆ ಕೊನೆಕ್ಷಣದ ಕಸರತ್ತನ್ನು ಅಭ್ಯರ್ಥಿಗಳು, ಮುಖಂಡರು ಬಿರುಸಿನಿಂದ ನಡೆಸಿದ್ದಾರೆ.

ಕಾರ್ಯಕರ್ತರ ಚುನಾವಣೆ ಎಂದೇ ಬಿಂಬಿತವಾಗಿರುವ ಪುರಸಭೆಯಲ್ಲಿ ಹಾಲಿ, ಮಾಜಿ ಶಾಸಕರ ಹಿಂಬಾಲಕರೇ ಹೆಚ್ಚಿನ ಸಂಖ್ಯೆಯಲ್ಲಿ ಅಖಾಡಕ್ಕಿಳಿದಿದ್ದಾರೆ. ತಮ್ಮ ನೆಚ್ಚಿನ ಕಾರ್ಯಕರ್ತರನ್ನು ಗೆಲ್ಲಿಸುವುದು ನಾಯಕರಿಗೆ ಪ್ರತಿಷ್ಠೆಯಾಗಿದೆ. ಹೀಗಾಗಿ, ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಮುಳುವಾಗುವವರ ನಾಮಪತ್ರ ವಾಪಸು ತೆಗೆಸಲು ಖುದ್ದು ನಾಯಕರೂ ಅಖಾಡಕ್ಕಿಳಿದಿದ್ದಾರೆ.

ಪಕ್ಷೇತರರು ಅತಿಹೆಚ್ಚು: ಪುರಸಭೆಯ 23 ಸ್ಥಾನಗಳಿಗೆ 161ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ, ಕಾಂಗ್ರೆಸ್​ನಿಂದ ತಲಾ 23, ಜೆಡಿಎಸ್​ನಿಂದ 15 ಅಭ್ಯರ್ಥಿಗಳು ಕಣದಲ್ಲಿದ್ದರೆ, 100 ಪಕ್ಷೇತರ ಅಭ್ಯರ್ಥಿಗಳಿದ್ದಾರೆ. ಪಕ್ಷೇತರರಲ್ಲಿ ಅರ್ಧಕ್ಕೂ ಅಧಿಕ ಅಭ್ಯರ್ಥಿಗಳು ಕೈ, ಕಮಲ ಪಕ್ಷದವರು. ಇವರನ್ನು ಅಖಾಡದಿಂದ ಹೊರ ತರದೇ ಹೋದಲ್ಲಿ ಪಕ್ಷಗಳ ಮತಗಳಿಗೆ ಪೆಟ್ಟು ಬೀಳುವುದು ನಿಶ್ಚಿತವಾಗಿದೆ. ಹೀಗಾಗಿ, ಪಕ್ಷಗಳ ನಾಯಕರೇ ಅಖಾಡಕ್ಕಿಳಿದು ಪಕ್ಷೇತರರ ಮನವೊಲಿಕೆ ನಡೆಸಿದ್ದಾರೆ. ಪಕ್ಷೇತರರು ಹೇಳಿಕೆ ಮಾತುಗಳಿಗೆ ಬಗ್ಗುವುದಿಲ್ಲ ಎಂಬುದನ್ನು ಅರಿತಿರುವ ಪಕ್ಷದ ಅಧಿಕೃತ ಅಭ್ಯರ್ಥಿಗಳು ಝುಣಝುಣ ಕಾಂಚಾಣದ ಆಮಿಷವನ್ನು ಭರ್ಜರಿಯಾಗಿಯೇ ಒಡ್ಡುತ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಶಿಗ್ಗಾಂವಿ ಪುರಸಭೆಯಲ್ಲಿ ಪಕ್ಷದಿಂದ ಬಂಡಾಯವೆದ್ದಿರುವವರ ನಾಮಪತ್ರ ವಾಪಸ್ಸಾತಿಗೆ 1ರಿಂದ 2 ಲಕ್ಷ ರೂ. ಆಮಿಷ ಒಡ್ಡಲಾಗುತ್ತಿದೆ ಎನ್ನಲಾಗುತ್ತಿದೆ.

ಬಿಜೆಪಿಯಲ್ಲಿಯೇ ಹೆಚ್ಚು ಬಂಡಾಯ: 23 ವಾರ್ಡ್​ಗಳಲ್ಲಿಯೂ ಪಕ್ಷೇತರರು ಕಣಕ್ಕಿಳಿದಿದ್ದಾರೆ. ಅದರಲ್ಲಿಯೂ ಬಿಜೆಪಿಯಲ್ಲಿ ಬಹುದೊಡ್ಡ ಬಂಡಾಯವೆದ್ದಿದೆ. ಕೈ ಪಾಳಯದಲ್ಲಿಯೂ ಬಂಡಾಯ ಅಭ್ಯರ್ಥಿಗಳು ಉಳಿದಿದ್ದು, ಬಿಜೆಪಿಗೆ ಹೋಲಿಸಿದರೆ ಅವರ ಸಂಖ್ಯೆ ಸ್ವಲ್ಪ ಕಡಿಮೆಯಿದೆ. ಬಿಜೆಪಿಯಲ್ಲಿ ನಿಷ್ಠೆಯುಳ್ಳವರಿಗೆ ಟಿಕೆಟ್ ಕೊಡುವಲ್ಲಿ ಕಡೆಗಣಿಸಿರುವ ಆರೋಪವೂ ವ್ಯಾಪಕವಾಗಿದ್ದು, ಕಣದಿಂದ ಹಿಂದೆ ಸರಿಯುವ ಲಕ್ಷಣಗಳು ಸದ್ಯಕ್ಕೆ ಕಾಣುತ್ತಿಲ್ಲ.

ಬೊಮ್ಮಾಯಿ ಅಖಾಡಕ್ಕೆ: ಸದ್ಯ ಬಿಜೆಪಿಯಲ್ಲಿ ಎದ್ದಿರುವ ಬಂಡಾಯ ಶಮನಕ್ಕೆ ಶಾಸಕ ಬಸವರಾಜ ಬೊಮ್ಮಾಯಿ ಅನುಪಸ್ಥಿತಿಯೂ ಕಾರಣ ಎನ್ನಲಾಗುತ್ತಿದೆ. ಈವರೆಗೂ ಶಾಸಕ ಬೊಮ್ಮಾಯಿ ಅವರು ಕುಂದಗೋಳ ಉಪಚುನಾವಣೆ ಪ್ರಚಾರದಲ್ಲಿ ತೊಡಗಿದ್ದರು. ಹೀಗಾಗಿ, ಪುರಸಭೆ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ, ಬಂಡಾಯ ಶಮನ ಸೇರಿ ಇನ್ನಿತರ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಮೇ 19ರಂದು ಕುಂದಗೋಳ ಉಪಚುನಾವಣೆಯೂ ಮುಗಿದಿದ್ದು, ಮೇ 20ರಿಂದ ಬೊಮ್ಮಾಯಿಯವರು ಶಿಗ್ಗಾಂವಿಗೆ ಆಗಮಿಸಿ ಪಕ್ಷದಲ್ಲಿ ಎದ್ದಿರುವ ಬಂಡಾಯ ಶಮನಕ್ಕೆ ಮುಂದಾಗುವರು ಎಂಬ ಆಶಾಭಾವನೆ ಪಕ್ಷದ ಅಧಿಕೃತ ಅಭ್ಯರ್ಥಿಗಳಲ್ಲಿ ಮೂಡಿದೆ.

ಬ್ಯಾಡಗಿಯಲ್ಲೂ ಮುಖಂಡರ ಕಸರತ್ತು

ಸ್ಥಳೀಯ ಪುರಸಭೆ ಚುನಾವಣೆಯಲ್ಲಿ ಟಿಕೆಟ್ ವಂಚಿತರು ಬಂಡಾಯವೆದ್ದಿದ್ದು ಶಮನಕ್ಕೆ ಮುಖಂಡರು ಹೆಣಗಾಡುತ್ತಿದ್ದಾರೆ.

ಪುರಸಭೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬಂಡಾಯಗಾರರು ಸಮಬಲದ ಪೈಪೋಟಿ ನೀಡುವಷ್ಟು ಸಮರ್ಥರಿದ್ದಾರೆ. ಹೀಗಾಗಿ ಆಸೆ, ಆಮಿಷ ತೋರಿ ಬಂಡಾಯಗಾರರು ನಾಮಪತ್ರ ವಾಪಸ್ ಪಡೆಯುವಂತೆ ಮಾಡಲು ಕಸರತ್ತು ನಡೆಸಿದ್ದಾರೆ.

ತಮ್ಮ ಪಕ್ಷದ ಬಂಡಾಯ ಹಾಗೂ ಕೆಲ ಪಕ್ಷೇತರ ಅಭ್ಯರ್ಥಿಗಳನ್ನು ಕಣದಿಂದ ಹಿಂದೆ ಸರಿಸಲು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹಾಗೂ ಕಾಂಗ್ರೆಸ್ ಮುಖಂಡ ಎಸ್.ಆರ್. ಪಾಟೀಲ ಗುಪ್ತ ಸಭೆ ನಡೆಸಿದ್ದಾರೆ. ಬಂಡಾಯ ಸ್ಪರ್ಧಿಗಳಿಗೆ ಪಕ್ಷಗಳಲ್ಲಿ ವಿವಿಧ ಹುದ್ದೆ, ನಾಮನಿರ್ದೇಶಿತ ಸದಸ್ಯ, ನಿಗಮ ಮಂಡಳಿ ಸದಸ್ಯ ಸ್ಥಾನ ಸೇರಿ ಇತ್ಯಾದಿ ಭರವಸೆ ನೀಡುತ್ತಿದ್ದಾರೆ. ಆದರೆ, ಕೆಲ ಅಭ್ಯರ್ಥಿಗಳು ಯಾರ ಕೈಗೂ ಸಿಗದೆ, ಫೋನ್ ಸ್ವಿಚ್ ಆಫ್ ಮಾಡಿಕೊಂಡು ಗೌಪ್ಯ ಸ್ಥಳದಲ್ಲಿ ತಮ್ಮ ಗೆಲುವಿಗೆ ರಣತಂತ್ರ ಹೆಣೆಯುತ್ತಿದ್ದಾರೆ.

Leave a Reply

Your email address will not be published. Required fields are marked *