ಬಾಗಲಕೋಟೆ: ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಲ್ಲಿ ತಲ್ಲಣ ಸೃಷ್ಟಿಯಾಗಿದೆ. ಅದರಲ್ಲೂ 2004 ರಿಂದ ಈವರೆಗೆ ವಿಧಾನ ಸಭೆ ಚುನಾವಣೆಯಲ್ಲಿ ಜಿಲ್ಲೆಯ ಮುಧೋಳ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿನ ಸರಣಿ ಕಂಡಿದೆ. ಶತಾಯಗತಾಯ ಜಲ ಸಂಪನ್ಮೂಲ ಸಚಿವ, ಕ್ಷೇತ್ರದ ಶಾಸಕ ಗೋವಿಂದ ಸೋಲಿಸಲು ಕಾಂಗ್ರೆಸ್ ನಾಯಕರು ಪಣ ತೊಟ್ಟಿದ್ದಾರೆ.
ಇದರ ಭಾಗವಾಗಿ ಮುಧೋಳ ಮತಕ್ಷೇತ್ರದ ಲೋಕಾಪುರ ಪಟ್ಟಣದ ಆರಾಧ್ಯ ದೈವ ಲೋಕೇಶ್ವರ ಹಾಗೂ ದುರ್ಗಾದೇವಿ ಸಾಕ್ಷಿಯಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಶ್ರಮಿಸುವೆಂದು ಪ್ರಮಾಣವಚನ ತೆಗೆದುಕೊಂಡಿದ್ದಾರೆ ಕಾಂಗ್ರೆಸ್ ಮುಖಂಡರು.
ಆಕಾಂಕ್ಷಿಗಳಾದ ಮಾಜಿ ಸಚಿವ ಆರ್.ವಿ.ತಿಮ್ಮಾಪುರ, ಕಳೆದ ವಿಧಾನ ಸಭೆಯ ಕಾಂಗ್ರೆಸ್ ಪರಾರ್ಜಿತ ಅಭ್ಯರ್ಥಿ ಸತೀಶ ಬಂಡಿವಡ್ಡರ ನುಡುವಿನ ಪೈಪೋಟಿ ಬಿಜೆಪಿಗೆ ಪ್ರತಿ ಚುನಾವಣೆ ವರವಾಗುತ್ತಲೆ ಬಂದಿತ್ತು.
ಇದೀಗ ನಾಯಕರು ಲೋಕಾಪುರ ಪಟ್ಟಣದ ಶ್ರೀ ಲೋಕೇಶ್ವರ ದೇವಸ್ಥಾನದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ದೇವರ ಸಾಕ್ಷಿ ಯಾಗಿ ಪಕ್ಷದ ಯಾರೇ ಟಿಕೆಟ್ ಪಡೆದು ಅಭ್ಯರ್ಥಿಯಾದರೂ ಗೆಲವಿ ಗೆ ಶ್ರಮಿಸುವುದಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಒಗ್ಗಟಿನ ಮಂತ್ರ ಜಪಿಸಿದ್ದಾರೆ.
ಮಾಜಿ ಸಚಿವ ಆರ್.ಬಿ.ತಿಮ್ಮಾಪುರ, ಮುಖಂಡ ಸತೀಶ್ ಬಂಡ್ಡಿವಡ್ಡರ್, ಧರೇಪ್ಪ ಸಾಂಗ್ಲಿಕರ್, ಶಿವಾನಂದ ಉದುಪಡಿ, ಗುರುರಾಜ ಉದಪುಡಿ ಗೋವಿಂದ ಕೌಲಗಿ, ರಪೀಕ್ ಬೈರೆಕದ ದಾರ, ಸೈಯ್ಯದ ಗುದಗಿ ,ರೆಹಮಾನ್ ತೊರಗಲ್, ಶ್ರೀನಿವಾಸ್ ಅಡೇಕರ್ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.
ಈ ಮೂಲಕ ಮುಧೋಳ ಬಿಜೆಪಿ ಪಾಳಯದಲ್ಲಿ ಆತಂಕಕ್ಕೆ ಕಾರಣವಾಗಿದೆ. ಇದೀಗ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳು ಒಟ್ಟಾಗಿ ಕಾಂಗ್ರೆಸ್ ಗೆಲ್ಲಿಸಲು ಪ್ರಮಾಣ ಮಾಡಿರುವುದು ಎದುರಾಳಿಗಳಿಗೆ ನಡುಕ ಶುರುವಾಗಿದೆ ಅಂತ ಹೇಳಲಾಗುತ್ತಿದೆ. ಇದಕ್ಕೆ ಹಾಲಿ ಶಾಸಕ ಸಚಿವ ಗೋವಿಂದ ಕಾರಜೋಳ ಯಾವ ರೀತಿ ರಾಜಕೀಯ ಚದುರಂಗದಾಟ ಆಡುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.