ಕೈವಾರದಲ್ಲಿ ಶ್ರೀರಾಮನಾಮ ಜಲಾಭಿಷೇಕ ಯಜ್ಞ

ಚಿಂತಾಮಣಿ: ಮಳೆಗೆ ಪ್ರಾರ್ಥಿಸಿ ಕೈವಾರದ ಭೀಮಲಿಂಗೇಶ್ವರ ದೇವಾಲಯದಲ್ಲಿ ಶ್ರೀರಾಮನಾಮ ಜಲಾಭಿಷೇಕ ಯಜ್ಞ ಸೋಮವಾರ ಪ್ರಾರಂಭವಾಯಿತು. ಯಜ್ಞವು 168 ಗಂಟೆ ನಡೆಯಲಿದೆ.

ಯಜ್ಞದ ಪ್ರಯುಕ್ತ ಯೋಗಿನಾರೇಯಣ ಮಠದಲ್ಲಿ ಘಂಟಾನಾದ, ಸುಪ್ರಭಾತ, ಗೋಪೂಜೆಯೊಂದಿಗೆ ತಾತಯ್ಯನವರ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಮಂಗಳವಾದ್ಯ, ಸಾಮೂಹಿಕ ಭಜನೆಯೊಂದಿಗೆ ಶ್ರೀದೇವಿ, ಭೂದೇವಿ ಸಮೇತ ಅಮರನಾರಾಯಣ ಸ್ವಾಮಿ ಹಾಗೂ ಯೋಗಿನಾರೇಯಣ ಯತೀಂದ್ರರ ಉತ್ಸವ ಮೂರ್ತಿಗಳ ಪ್ರತ್ಯೇಕ ಪಲ್ಲಕ್ಕಿ ಉತ್ಸವ ನಡೆಸಲಾಯಿತು. ಮೆರವಣಿಗೆಯು ಪ್ರಮುಖ ರಸ್ತೆಗಳಲ್ಲಿ ಸಾಗಿ ಭೀಮಲಿಂಗೇಶ್ವರ ದೇವಾಲಯಕ್ಕೆ ತಲುಪಿತು.

ಈ ಉತ್ಸವ ಮೂರ್ತಿಗಳ ಜತೆಗೆ ಪಾರ್ವತಿ ಸಮೇತ ಭೀಮಲಿಂಗೇಶ್ವರಸ್ವಾಮಿ ಉತ್ಸವ ಮೂರ್ತಿಯನ್ನು ವಿಶೇಷ ವೇದಿಕೆಯಲ್ಲಿ ಪ್ರತಿಷ್ಠಾಪಿಸಿ, ಮಹಾ ಸಂಕಲ್ಪ, ಅಷ್ಟೋತ್ತರ ಸೇವೆ, ಮಹಾ ಮಂಗಳಾರತಿ ನೆರವೇರಿಸಲಾಯಿತು. ನಂತರ ಭೀಮಲಿಂಗೇಶ್ವರ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಿ ಹಲವು ನದಿಗಳಿಂದ ತಂದಿದ್ದ ಜಲದಿಂದ ಜಲಾಭಿಷೇಕ ಪ್ರಾರಂಭಿಸಲಾಯಿತು. ಪಾರ್ವತಿ ದೇವಾಲಯದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.

ದೇವಾಲಯದ ಪ್ರಾಂಗಣದಲ್ಲಿ ನಿರ್ವಿುಸಿರುವ ಮತ್ತೊಂದು ವೇದಿಕೆಯಲ್ಲಿ ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ. ಎಂ.ಆರ್.ಜಯರಾಂ ಶ್ರೀರಾಮನಾಮ ಜಪಕ್ಕೆ ಚಾಲನೆ ನೀಡಿದರು.