ಕೈಲಾಂಚ ಹೋಬಳೀಲಿ ಆನೆ ದಾಳಿಗೆ ಫಸಲು ನಾಶ

ಕೈಲಾಂಚ: ರಾಮನಗರ ತಾಲೂಕು ಕೈಲಾಂಚ ಹೋಬಳಿಯ ಹೊಸದೊಡ್ಡಿ ಹಾಗೂ ಕಾಡನಕುಪ್ಪೆಯಲ್ಲಿ ಮೂರು ಆನೆಗಳ ಗುಂಪು ಸೋಮವಾರ ರಾತ್ರಿ ದಾಂಧಲೆ ನಡೆಸಿ ರೈತರ ಫಸಲು, ನೀರಾವರಿ ಪೈಪ್​ಗಳನ್ನು ನಾಶಪಡಿಸಿವೆ. ಕಬ್ಬಾಳು ಅರಣ್ಯದಿಂದ ಬಿ.ವಿ. ಹಳ್ಳಿ ಮಾರ್ಗವಾಗಿ ತೆಂಗಿನಕಲ್ಲು ಅರಣ್ಯ ಸೇರುವಾಗ ಹೊಸದೊಡ್ಡಿಯ ಚಿಕ್ಕೇಗೌಡ, ಗೋವಿಂದೇಗೌಡ, ನರಸಿಂಹಯ್ಯ ಎಂಬುವರ ತೆಂಗಿನಮರಗಳು ಚಂದ್ರು, ಅಪ್ಪಾಜಿಗೌಡ, ನಾಗರಾಜು ಎಂಬುವರ ಮಾವಿನ ಮರ, ನೀರಿನ ಪೈಪ್​ಗಳು, ಕಾಡನಕುಪ್ಪೆ ಗ್ರಾಮದ ನಾಗರಾಜು, ಶಂಭುಲಿಂಗಯ್ಯ ಅವರಿಗೆ ಸೇರಿದ ಸೀಮೆಹುಲ್ಲು ತಿಂದು, ತುಳಿದು ನಾಶಪಡಿಸಿ ಹೋಗಿವೆ.

ಅರಣ್ಯಾಧಿಕಾರಿಗಳ ಭೇಟಿ: ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಚನ್ನಪಟ್ಟಣ ತಾಲೂಕು ವಲಯ ಅರಣ್ಯಾಧಿಕಾರಿ ಮಹಮದ್ ಮನ್ಸೂರ್, ತೆಂಗಿನಕಲ್ಲು ಉಪವಲಯ ಅರಣ್ಯಾಧಿಕಾರಿ ಚಂದ್ರಾನಾಯಕ್ ಮತ್ತು ಸಿಬ್ಬಂದಿ, ನಷ್ಟದ ಬಗ್ಗೆ ಮಾಹಿತಿ ಕಲೆಹಾಕಿ ರೈತರಿಗೆ ಪರಿಹಾರ ಕೊಡಿಸುವ ಭರವಸೆ ನೀಡಿದರು.

ಕ್ರಮಕ್ಕೆ ಆಗ್ರಹ: ಕನಕಪುರ ತಾಲೂಕಿನ ಬಾಣಂತ ಮಾರಮ್ಮನ ಬೆಟ್ಟದಿಂದ ಆಗಿಂದಾಗ್ಗೆ ಆನೆಗಳು ತೆಂಗಿನಕಲ್ಲು ಅರಣ್ಯಕ್ಕೆ ಬಂದು ಬೆಳೆ, ಬೋರ್​ವೆಲ್ ಪರಿಕರ, ತೆಂಗು, ಮಾವಿನ ಮರಗಳನ್ನು ನಾಶ ಪಡಿಸಿ ಹೋಗುತ್ತಿವೆ. ಇದರಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದೇವೆ. ಆನೆ ದಾಳಿಗೆ ಕಡಿವಾಣ ಹಾಕುವ ಜತೆಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಅರಣ್ಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಪದೇಪದೆ ಆನೆಗಳು ತೆಂಗಿನಕಲ್ಲು ಅರಣ್ಯಕ್ಕೆ ಬಂದು ಹೋಗುತ್ತಿವೆ. ಈ ವೇಳೆ ರೈತರ ಫಸಲು ನಷ್ಟ ಮಾಡುತ್ತಿವೆ. ಆನೆ ದಾಳಿ ತಡೆಯಲು ಅರಣ್ಯಾಧಿಕಾರಿಗಳಿಂದ ಸಾಧ್ಯವಾಗಿಲ್ಲ. ಈ ಭಾಗದ ರೈತರು ಆನೆಗಳ ಭಯದಲ್ಲಿ ಜೀವ ಕೈಯಲ್ಲಿ ಹಿಡಿದು ಜಮೀನುಗಳಲ್ಲಿ ಕೆಲಸ ಮಾಡಬೇಕಾಗಿದೆ.

| ಯೋಗೇಶ್, ರೈತ, ಹೊಸದೊಡ್ಡಿ

 

ಮೂರು ಆನೆಗಳ ತಂಡ ಕಬ್ಬಾಳು ಅರಣ್ಯದಿಂದ ಸೋಮವಾರ ರಾತ್ರಿ ತೆಂಗಿನಕಲ್ಲು ಅರಣ್ಯ ಸೇರಿಕೊಂಡಿವೆ. ತೆಂಗಿನಕಲ್ಲು ಅರಣ್ಯದ ಯಾವ ಸ್ಥಳದಲ್ಲಿ ಆನೆಗಳು ಬೀಡು ಬಿಟ್ಟಿವೆ ಎಂಬುದನ್ನು ಪತ್ತೆಹಚ್ಚಿ ಮಂಗಳವಾರ ಮಧ್ಯಾಹ್ನದಿಂದಲೇ ಕಾರ್ಯಾಚರಣೆ ನಡೆಸಿ ಅವುಗಳ ಸ್ವಸ್ಥಾನಕ್ಕೆ ಸೇರಿಸಲಾಗುವುದು.

| ಮಹಮದ್ ಮನ್ಸೂರ್ವ, ಲಯ ಅರಣ್ಯಾಧಿಕಾರಿ, ಚನ್ನಪಟ್ಟಣ