ಕೈಯೋ, ಕಮಲವೋ ಮದನ್ ಗೊಂದಲ

ಶಿವಮೊಗ್ಗ: ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಅವರೊಂದಿಗೆ ಮುನಿಸಿಕೊಂಡು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಆರ್.ಮದನ್ ಮುಂದಿನ ರಾಜಕೀಯ ಭವಿಷ್ಯ ಗೊಂದಲಕ್ಕೆ ಸಿಲುಕಿದೆ. ಯಾವ ಪಕ್ಷ ಸೇರಲಿ ಎಂಬ ಇಕ್ಕಟ್ಟಿಗೆ ಮದನ್ ಸಿಲುಕಿದ್ದರೆ, ಇತ್ತ ಅವರನ್ನು ಪಕ್ಷಕ್ಕೆ ಸೆಳೆಯಲು ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಕಸರತ್ತು ನಡೆಸಿವೆ ಎಂಬ ಊಹಾಪೋಹಗಳು ತೀರ್ಥಹಳ್ಳಿಯಲ್ಲಿ ಹರಿದಾಡುತ್ತಿದೆ.

ಲೋಕಸಭೆ ಚುನಾವಣಾ ಹೊಸ್ತಿಲಲ್ಲಿ ಜೆಡಿಎಸ್​ಗೆ ಮದನ್ ರಾಜೀನಾಮೆ ನೀಡಿದ್ದು, ಯಾವುದೇ ಪಕ್ಷದೊಂದಿಗೂ ಗುರುತಿಸಿಕೊಳ್ಳದೇ ತಟಸ್ಥವಾಗಿ ಉಳಿದಿದ್ದಾರೆ. ಅಸ್ಥಿತ್ವವೇ ಇಲ್ಲದ ಸಂದರ್ಭದಲ್ಲಿ ಜೆಡಿಎಸ್​ನ್ನು ತೀರ್ಥಹಳ್ಳಿಯಲ್ಲಿ ತಕ್ಕಮಟ್ಟಿಗೆ ಬಲಿಷ್ಠಗೊಳಿಸಿದ್ದ ಮದನ್ ಇದೀಗ ಏಕಾಂಗಿಯಾಗಿದ್ದು, ರಾಜಕೀಯ ಭವಿಷ್ಯಕ್ಕೆ ಹುಡುಕಾಟ ಆರಂಭಿಸಿದ್ದಾರೆ. ಜೆಡಿಎಸ್​ನಿಂದ ಹೊರಬಂದಿರುವ ಹಿನ್ನೆಲೆಯಲ್ಲಿ ಮದನ್​ರನ್ನು ಸೆಳೆಯಲು ತೀರ್ಥಹಳ್ಳಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಮನವೊಲಿಸಿ ಪಕ್ಷಕ್ಕೆ ಬರಮಾಡಿಕೊಳ್ಳಲು ಎರಡೂ ಪಕ್ಷಗಳ ಮುಖಂಡರು ನಿರ್ಧರಿಸಿದ್ದು, ಹಲವು ಸುತ್ತಿನ ಮಾತುಕತೆಯನ್ನೂ ಮದನ್ ಜತೆ ನಡೆಸಿದ್ದಾರೆ ಎನ್ನಲಾಗಿದೆ.

ಮದನ್ ನಿರ್ಧಾರ ನಾಳೆ ಬಹಿರಂಗ: ಜೆಡಿಎಸ್​ನಿಂದ ಹೊರಬಂದ ಬಳಿಕ ರಾಜಕೀಯ ಅಸ್ಥಿತ್ವಕ್ಕೆ ಹುಡುಕಾಟ ನಡೆಸಿರುವ ಮದನ್ ಕೂಡ ಗೊಂದಲಕ್ಕೆ ಸಿಲುಕಿದ್ದಾರೆ. ಕಾಂಗ್ರೆಸ್ ಅಥವಾ ಬಿಜೆಪಿ ಸೇರ್ಪಡೆಯಾದರೆ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಬೆಂಬಲಿಗರೊಂದಿಗೆ ಸುದೀರ್ಘ ಚರ್ಚೆಯನ್ನೂ ನಡೆಸಿದ್ದು, ಅಂತಿಮ ನಿರ್ಧಾರವನ್ನು ಏ.7ರಂದು ಬಹಿರಂಗಗೊಳಿಸಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ ಅವರೊಂದಿಗೆ ಕಾಣಿಸಿಕೊಳ್ಳುತ್ತಿರುವ ಮದನ್ ಕಾಂಗ್ರೆಸ್ ಸೇರ್ಪಡೆಗೊಳ್ಳುವ ಅನುಮಾನ ವ್ಯಕ್ತವಾಗಿದೆ. ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ಬೈಂದೂರಿನ ಮಾಜಿ ಶಾಸಕ ಗೋಪಾಲ ಪೂಜಾರಿ ಕೂಡ ಕಾಂಗ್ರೆಸ್ ಸೇರುವಂತೆ ಒತ್ತಾಯಿಸಿದ್ದಾರೆ. ಈ ಎಲ್ಲ ನಾಯಕರ ಜತೆ ಮುಕ್ತವಾಗಿ ರ್ಚಚಿಸಿರುವ ಮದನ್ ಅವರು ಯಾವ ಪಕ್ಷ ಸೇರಬೇಕು ಎಂಬ ಅಂತಿಮ ತೀರ್ವನಕ್ಕೆ ಬಂದಿಲ್ಲ.

ಆರಗ ಮೂಲಕ ಬಿಎಸ್​ವೈ ಸಂಪರ್ಕ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕ ಆರಗ ಜ್ಞಾನೇಂದ್ರ ಮುಖಾಂತರ ಮದನ್​ಗೆ ಪಕ್ಷಕ್ಕೆ ಬರಲು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕೂಡ ಆಹ್ವಾನ ನೀಡಿದ್ದಾರೆ. ರಾಜೀನಾಮೆ ನೀಡಿದ್ದ ದಿನವೇ ಮದನ್​ರನ್ನು ಭೇಟಿ ಮಾಡಿದ್ದ ಆರಗ ಜ್ಞಾನೇಂದ್ರ ಅವರು ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ.