ಕೈಮಗ್ಗ ಕಚೇರಿ ಎದುರು ಪ್ರತಿಭಟನೆ

ಗದಗ: ನೇಕಾರರಿಗೆ ಸಂಬಂಧಿಸಿದ ಯೋಜನೆಗಳ ಅನುಷ್ಠಾನ ವಿಳಂಬ ನೀತಿ ಹಾಗೂ ಯೋಜನೆಗಳ ದುರುಪಯೋಗ ಖಂಡಿಸಿ ಜಿಲ್ಲಾ ಬಿಜೆಪಿ ನೇಕಾರ ಪ್ರಕೋಷ್ಠದ ಪದಾಧಿಕಾರಿಗಳು ನಗರದ ಕೈಮಗ್ಗ ಮತ್ತು ಜವಳಿ ಇಲಾಖೆ ಜಿಲ್ಲಾ ಕಚೇರಿ ಎದುರು ಗುರುವಾರ ಪ್ರತಿಭಟಿಸಿದರು.

ನೇಕಾರರ ವಿಶೇಷ ಘಟಕ ಯೋಜನೆಯಡಿ 2011-12ನೇ ಸಾಲಿನಿಂದ ಇಲ್ಲಿಯವರೆಗೆ ಅರ್ಹ ನೇಕಾರ ಫಲಾನುಭವಿಗಳಿಗೆ ಯಾವುದೇ ಅಗತ್ಯ ಮೂಲಸೌಕರ್ಯ ದೊರಕಿಲ್ಲ. ನೇಕಾರರಲ್ಲದೇ ಇರುವವರು ಯೋಜನೆ ಲಾಭ ಪಡೆಯುತ್ತಿರುವುದರಿಂದ ನೈಜ ಫಲಾನುಭವಿಗಳು ಯೋಜನೆಯಿಂದ ವಂಚಿತರಾಗುತ್ತಿದ್ದಾರೆ. ತಕ್ಷಣ ಅರ್ಹ ನೇಕಾರರಿಗೆ ಮೂಲಸೌಲಭ್ಯಗಳು ದೊರೆಯುವಂತಾಗಲು ಸೂಕ್ರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಕಳೆದ ಮೂರು ವರ್ಷಗಳಿಂದ ನೇಕಾರರ ಮಕ್ಕಳಿಗೆ ಬರಬೇಕಾದ ಶಿಷ್ಯವೇತನ ಬಂದಿಲ್ಲ. ಪ್ರಸಕ್ತ ಸಾಲಿನಲ್ಲಿ ಶಿಷ್ಯ ವೇತನ ರದ್ದುಗೊಳಿಸಲಾಗಿದೆ. ನೇಕಾರರ ವಸತಿ ಯೋಜನೆಯಡಿ ದೇವರಾಜು ಅರಸು ನಿಗಮದಿಂದ 1 ಲಕ್ಷ ರೂ., ರಾಜೀವಗಾಂಧಿ ವಸತಿ ನಿಗಮದಿಂದ 1.20 ಲಕ್ಷ ರೂ. ಹಾಗೂ ಫಲಾನುಭವಿ ವಂತಿಕೆಯಿಂದ 30 ಸಾವಿರ ರೂ. ಸೇರಿದಂತೆ ಒಟ್ಟು 2.50 ಲಕ್ಷ ರೂ. ಮಂಜೂರಾಗಿದ್ದು, ಕಳೆದ ಒಂದು ವರ್ಷದ ಹಿಂದೆ ನೂರು ಜನ ನೇಕಾರರಿಗೆ ತಿಳಿವಳಿಕೆ ಪತ್ರ ನೀಡಲಾಗಿದೆ. ಆದರೆ, ಇಲ್ಲಿಯವರೆಗೆ ಫಲಾನುಭವಳಿಗೆ ಅನುಕೂಲ ಕಲ್ಪಿಸಿಲ್ಲ. ಆದಷ್ಟು ಬೇಗ ಎಲ್ಲ ಯೋಜನೆಗಳನ್ನು ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಬಿಜೆಪಿ ನೇಕಾರ ಪ್ರಕೋಷ್ಠದ ಶಹರ ಅಧ್ಯಕ್ಷ ದೇವಪ್ಪ ಗೋಟೂರ, ಜಿಲ್ಲಾ ಸಹ ಸಂಚಾಲಕ ರವಿಕುಮಾರ ಗಂಜಿ, ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ, ಮುಖಂಡರಾದ ರಾಘವೇಂದ್ರ ಶಾವಿ, ಜಗದೀಶ ಬಿದರೂರ, ವಿಶ್ವನಾಥ ಕುದರಿ, ಸುರೇಶ ಕೊಳ್ಳಿ, ಮಲ್ಲೇಶ ಕರಕಿ, ಚಂದ್ರಶೇಖರ ಮಾಂತಗುಂಡ ಸೇರಿದಂತೆ ಮತ್ತಿತರರಿದ್ದರು.