ಕೈಮಗ್ಗ ಅಭಿವೃದ್ಧಿ ನಿಗಮ ನಮಗೇ ಕೊಡಿ

ಹುಬ್ಬಳ್ಳಿ: ಕೈಮಗ್ಗ ಅಭಿವೃದ್ಧಿ ನಿಗಮ ಮತ್ತು ಅದರ ಆಸ್ತಿಯನ್ನು ನೇಕಾರರಿಗೆ ಬಿಟ್ಟುಕೊಟ್ಟರೆ 3 ವರ್ಷಗಳಲ್ಲೇ ಅಭಿವೃದ್ಧಿಪಡಿಸಿ ತೋರಿಸುವುದಾಗಿ ರಂಗಕರ್ವಿು, ದೇಸಿ ಹೋರಾಟಗಾರ ಪ್ರಸನ್ನ ಹೆಗ್ಗೋಡು ಪ್ರಕಟಿಸಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಪ್ರತಿ ಸಲವೂ ನಿಗಮ ನಷ್ಟದಲ್ಲಿದೆ ಎಂದು ಹೇಳುತ್ತಿದೆ. ಅದಕ್ಕೆ ಕಾರಣ ಅಧಿಕಾರಿಗಳು. ನಿಗಮವನ್ನು ಬಿಳಿಯಾನೆಯಂತೆ ಮಾಡಲಾಗಿದೆ. ನೇಕಾರರಿಗೆ ಕೊಡುವುದಕ್ಕಿಂತ ಅಧಿಕಾರಿಗಳು ಹಾಗೂ ನಿಗಮಕ್ಕೆ ಖರ್ಚು ಮಾಡುವುದೇ ಹೆಚ್ಚು. ಹಾಗಾಗಿ ನಷ್ಟದಲ್ಲಿದೆ ಎಂದು ದೂರಿದರು. ನಿಗಮ ಹಾಗೂ ನೇಕಾರರನ್ನು ಸರ್ಕಾರ ನಿರ್ಲಕ್ಷಿಸಿದೆ. ಸರ್ಕಾರದ ನಿಷ್ಕಾಳಜಿಯಿಂದ ಕೈಮಗ್ಗ ನೇಕಾರರು ಕಂಗಾಲಾಗಿದ್ದಾರೆ. ರಾಜ್ಯದಲ್ಲಿ ಕೇವಲ ಹತ್ತು ಸಾವಿರ ನೇಕಾರ ಕುಟುಂಬ ಹಾಗೂ 8 ಸಾವಿರ ಕೈಮಗ್ಗಗಳು ಮಾತ್ರ ಉಳಿದಿವೆ ಎಂದರು.