ಕೈನಿಂದ ಭೂ ಕಬಳಿಕೆ?

ಬೆಂಗಳೂರು: ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ 12 ಕೋಟಿ ರೂ. ಮೌಲ್ಯದ ಬಿಬಿಎಂಪಿ ಜಾಗವನ್ನು ಅಕ್ರಮವಾಗಿ ಕಬಳಿಸಿದೆ. ಈ ಸಂಬಂಧ ಬಿಎಂಟಿಎಫ್ ಮತ್ತು ಲೋಕಾಯುಕ್ತದಲ್ಲಿ ದೂರು ದಾಖಲಿಸಲಾಗಿದೆ ಎಂದು ಬಿಜೆಪಿ ನಗರ ವಕ್ತಾರ ಎನ್.ಆರ್. ರಮೇಶ್ ತಿಳಿಸಿದ್ದಾರೆ.

ಕ್ವಿನ್ಸ್ ರಸ್ತೆಯಲ್ಲಿರುವ ಮಿಲ್ಲರ್ ಟ್ಯಾಂಕ್ ಬಂಡ್ ಪ್ರದೇಶದಲ್ಲಿ ಕೆಪಿಸಿಸಿ ಕಚೇರಿಗೆ ಬಿಬಿಎಂಪಿ ವತಿಯಿಂದ ಎರಡು ಹಂತದಲ್ಲಿ ಜಾಗವನ್ನು ಭೋಗ್ಯಕ್ಕೆ ನೀಡಲಾಗಿದೆ. 1993ರಲ್ಲಿ 17,037 ಚದರಡಿ ಹಾಗೂ 2004ರಲ್ಲಿ 19,420 ಚದರಡಿ ಜಾಗ ಕೊಡಲಾಗಿದೆ. ಅವುಗಳನ್ನು ನಿಯಮದ ಪ್ರಕಾರವೇ ಕಾಂಗ್ರೆಸ್ ಪಡೆದಿದೆ. ಆ ಎರಡೂ ಸ್ವತ್ತಿಗೆ ಹೊಂದಿಕೊಂಡಂತೆ ಎಸ್​ಸಿ-ಎಸ್​ಟಿ ಪದವೀಧರರ ಸಂಘಕ್ಕೆ 1977ರಲ್ಲಿ 12,024 ಚದರಡಿ ಜಾಗವನ್ನು 99 ವರ್ಷಗಳ ಅವಧಿಗೆ ಭೋಗ್ಯಕ್ಕೆ ನೀಡಲಾಗಿದೆ. ಆ ಜಾಗದಲ್ಲಿ 12 ಕೋಟಿ ರೂ. ಮೌಲ್ಯದ 4 ಸಾವಿರ ಚದರಡಿ ಜಾಗವನ್ನು ಕಾಂಗ್ರೆಸ್ ಅಕ್ರಮವಾಗಿ ತನ್ನ ವಶಕ್ಕೆ ಪಡೆದಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಿಲ್ಲರ್ ಕೆರೆ ಅನುಪಯುಕ್ತವಾದಾಗ ಆ ಜಾಗ ಬಿಬಿಎಂಪಿ ವಶಕ್ಕೆ ಬಂದಿದೆ. 41 ಎಕರೆ ಪೈಕಿ 24 ಎಕರೆಯನ್ನು ಅಂಬೇಡ್ಕರ್ ಭವನ, ದೇವರಾಜ ಅರಸು ಭವನ, ಜಸ್ಮಾ ಭವನ, ಖಾದಿ ಗ್ರಾಮೋದ್ಯೋಗ, ಟೆನಿಸ್ ಅಸೋಸಿಯೇಷನ್, ಕೆಎಸ್​ಎಫ್​ಸಿ ಸೇರಿ 28 ಸಂಸ್ಥೆಗಳಿಗೆ 30ರಿಂದ 99 ವರ್ಷಗಳವರೆಗೆ ಭೋಗ್ಯಕ್ಕೆ ನೀಡಲಾಗಿದೆ. ಅದೇ ರೀತಿ ಕಾಂಗ್ರೆಸ್ ಕಚೇರಿಗೂ ನೀಡಲಾಗಿದೆ. ಅದಕ್ಕೆ ಯಾರದೇ ತಕರಾರಿಲ್ಲ. ಆದರೆ, ಜಮೀನು ಕಬಳಿಕೆ ಮಾಡದಂತೆ ಸಲಹೆ ನೀಡಬೇಕಾದ ರಾಜಕೀಯ ಪಕ್ಷವೇ ಬೇರೆಯವರಿಗೆ ನೀಡಲಾದ ಜಾಗದಲ್ಲಿ 4 ಸಾವಿರ ಚದರಡಿ ಕಬಳಿಸಿ ಅಕ್ರಮ ಎಸಗಿದೆ ಎಂದರು.