Tuesday, 11th December 2018  

Vijayavani

Breaking News

ಕೈಗೆ ಕರ್ನಾಟಕದಲ್ಲೂ ಕಪಾಳಮೋಕ್ಷ ನಿಶ್ಚಿತ

Friday, 22.12.2017, 3:01 AM       No Comments

ಹುಬ್ಬಳ್ಳಿ: ಜಾತಿ, ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ವಿಭಜನಕಾರಿ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್ ಪಕ್ಷವನ್ನು ಕರ್ನಾಟಕದಲ್ಲಿ ಅಧಿಕಾರದಿಂದ ಕಿತ್ತೊಗೆಯುವ ಸಮಯ ಸನ್ನಿಹಿತವಾಗಿದೆ. ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಆದಂತೆ ಕರ್ನಾಟಕದಲ್ಲೂ ಕಾಂಗ್ರೆಸ್​ಗೆ ಕಪಾಳಮೋಕ್ಷ ನಿಶ್ಚಿತ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದರು.

ಬಿಜೆಪಿ ಹಮ್ಮಿಕೊಂಡಿದ್ದ ಪರಿವರ್ತನಾ ಯಾತ್ರೆಯನ್ನು ತುಳಸಿ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದ ಅವರು, ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. 1947ರಲ್ಲಿ ದೇಶವನ್ನು ವಿಭಜನೆ ಮಾಡಿದ ಕಾಂಗ್ರೆಸ್ ಇಂದು ಜಾತಿ ಆಧಾರದಲ್ಲಿ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ ಎಂದು ಹೇಳುವ ಮೂಲಕ ರಾಜ್ಯದಲ್ಲಿ ನಡೆಯುತ್ತಿರುವ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ ಹಾಗೂ ಜಾತಿ ಸಮೀಕ್ಷೆ ಬಗ್ಗೆ ಪರೋಕ್ಷವಾಗಿ ತಿವಿದರು.

ವಿಕಾಸವಾದದ ಮೂಲಕ ಬಿಜೆಪಿ 19 ರಾಜ್ಯಗಳಲ್ಲಿ ಅಧಿಕಾರ ಹಿಡಿದಿದೆ. ಗುಜರಾತ್​ನಲ್ಲಿ 6ನೇ ಬಾರಿ ಸರ್ಕಾರ ರಚಿಸಿದೆ. ಅಮೆರಿಕ ಅಧ್ಯಕ್ಷರ ಚುನಾವಣೆಯಲ್ಲಿ ವಿಕಾಸವಾದವೇ ಮುಖ್ಯ ವಿಷಯವಾಗಿತ್ತು. ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅನುಸರಿಸುತ್ತಿರುವ ವಿಕಾಸವಾದದಂತೆ ಅಮೆರಿಕವನ್ನು ಪ್ರಗತಿಪಥದಲ್ಲಿ ಕೊಂಡೊಯ್ಯುವುದಾಗಿ ಹೇಳಿಯೇ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದಿದ್ದು ಎಂದು ಹೇಳಿದರು. ಕಾಂಗ್ರೆಸ್ 55-60 ವರ್ಷ ಅಧಿಕಾರ ನಡೆಸಿದರೂ 30 ಕೋಟಿ ಜನ ಬ್ಯಾಂಕ್ ಖಾತೆ ಹೊಂದಿರಲಿಲ್ಲ. 2004ರಿಂದ 2014ರವರೆಗೆ ಅಧಿಕಾರ ನಡೆಸಿದ ಯುಪಿಎ ಸರ್ಕಾರ ಕರ್ನಾಟಕ ರಾಜ್ಯವನ್ನು ಉಪೇಕ್ಷೆ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಕಳೆದ ಮೂರೂವರೆ ವರ್ಷಗಳಲ್ಲಿ ಮೋದಿ ನೇತೃತ್ವದ ಸರ್ಕಾರ ರಾಜ್ಯಕ್ಕೆ ಯುಪಿಎ ಸರ್ಕಾರದ ಅವಧಿಗಿಂತ ಹೆಚ್ಚು ಹಣ ನೀಡಿದೆ ಎಂದರು.

ಟಿಪ್ಪು ಜಯಂತಿ ಆಚರಣೆ ನಡೆಯಲ್ಲ: ಭಗವಾನ್ ಶ್ರೀರಾಮ, ಹನುಮಾನ್ ಜಯಂತಿ ಆಚರಿಸುವ, ಸಾಧು ಸಂತರನ್ನು ಪೂಜಿಸುವ ಪರಂಪರೆ ನಮ್ಮದು. ಅಂಥ ನಾಡಿನಲ್ಲಿ ಟಿಪ್ಪು ಜಯಂತಿ ಆಚರಿಸಿದ್ದು ಅಕ್ಷಮ್ಯ. ಇದು ಕಾಂಗ್ರೆಸ್ ಪಕ್ಷದ ಮಾನಸಿಕ ಸ್ಥಿತಿ ಸೂಚಿಸುತ್ತದೆ. ಕಾಂಗ್ರೆಸ್ ಆಡಳಿತ ಹೋದ ಮೇಲೆ ಇನ್ನೆಂದೂ ಕರ್ನಾಟಕದಲ್ಲಿ ಟಿಪ್ಪು ಜಯಂತಿ ಆಚರಣೆ ನಡೆಯಲ್ಲ ಎಂದು ಯೋಗಿ ಆದಿತ್ಯನಾಥ ಹೇಳಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕೊಲೆ, ಸುಲಿಗೆ, ಅತ್ಯಾಚಾರ ಪ್ರಕರಣಗಳು ಹೆಚ್ಚಿವೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಜನರ ತೆರಿಗೆ ಹಣವನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿರುವ ಕಾಂಗ್ರೆಸ್ ಸರ್ಕಾರಕ್ಕೆ ರೈತರ ಸಾಲ (ರಾಷ್ಟ್ರೀಕೃತ ಬ್ಯಾಂಕ್) ಮನ್ನಾ ಮಾಡಲು ಆಗುತ್ತಿಲ್ಲ. ರಾಜ್ಯದಲ್ಲಿ ಒಟ್ಟಾರೆ ಅರಾಜಕತೆ ಸೃಷ್ಟಿಯಾಗಿದೆ ಎಂದು ಆರೋಪಿಸಿದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರುಳೀಧರ ರಾವ್, ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ವಿಧಾನಸಭೆ ವಿಪಕ್ಷ ನಾಯಕ ಜಗದೀಶ ಶೆಟ್ಟರ್, ಮಾಜಿ ಡಿಸಿಎಂಗಳಾದ ಆರ್. ಅಶೋಕ್, ಕೆ.ಎಸ್. ಈಶ್ವರಪ್ಪ, ಮಾಜಿ ಸಚಿವರಾದ ಗೋವಿಂದ ಕಾರಜೋಳ, ಮುರುಗೇಶ ನಿರಾಣಿ, ಲಕ್ಷ್ಮಣ ಸವಡಿ, ಸಂಸದರಾದ ಪ್ರಲ್ಹಾದ ಜೋಶಿ, ಜಿ.ಎಂ. ಸಿದ್ದೇಶ್ವರ, ಅರವಿಂದ ಬೆಲ್ಲದ, ಸಿ.ಟಿ. ರವಿ, ಅರವಿಂದ ಲಿಂಬಾವಳಿ, ಹು-ಧಾ ಮೇಯರ್ ಡಿ.ಕೆ. ಚವ್ಹಾಣ ಇತರರು ಇದ್ದರು.

ಕನ್ನಡದಲ್ಲಿ ಭಾಷಣ ಆರಂಭ

ಉ.ಪ್ರ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕನ್ನಡದಲ್ಲಿ ಭಾಷಣ ಆರಂಭಿಸುವ ಮೂಲಕ ಅಪಾರ ಸಂಖ್ಯೆಯಲ್ಲಿ ಸೇರಿದ ಜನರನ್ನು ಪುಳಕಿತ ಗೊಳಿಸಿದರು. ಉತ್ತರ ಕರ್ನಾಟಕದ ಜನತೆಗೆ ನನ್ನ ಶ್ರದ್ಧಾಪೂರ್ವಕ ಅಭಿನಂದನೆಗಳು. ಕಿತ್ತೂರು ಚನ್ನಮ್ಮ ನಾಡು, ಗಂಡು ಮೆಟ್ಟಿದ ನಾಡು ಎಂದು ಕನ್ನಡದಲ್ಲಿ ಹೇಳಿದ ಅವರು ಬಳಿಕ ಹಿಂದಿಯಲ್ಲಿ ಭಾಷಣ ಮುಂದುವರಿಸಿದರು.

ಮಹದಾಯಿ ಪ್ರಸ್ತಾಪವಿಲ್ಲ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಭಾಷಣದಲ್ಲಿ ಮಹದಾಯಿ, ಕಳಸಾ-ಬಂಡೂರಿ ವಿಷಯವಾಗಿ ಒಂದೇ ಒಂದು ಶಬ್ದವನ್ನೂ ಪ್ರಸ್ತಾಪಿಸಲಿಲ್ಲ. ಮಹದಾಯಿ ಯೋಜನೆ ಚಿಂತೆ ಬಿಡಿ ನೀರು ಹರಿಸಲು ಲಕ್ಷ ಕೋಟಿ ರೂ. ಕೊಡುತ್ತೇನೆ

| ಯಡಿಯೂರಪ್ಪ ಅಭಯ

ಹುಬ್ಬಳ್ಳಿ: ಉತ್ತರ ಕರ್ನಾಟಕಕ್ಕೆ ಮಹದಾಯಿ ನದಿ ನೀರು ಹರಿಸಲು ಗೋವಾ ಸಿಎಂ ಸಮ್ಮತಿಸಿದ್ದು, ಈ ಬಗ್ಗೆ ಚಿಂತೆ ಬೇಡ. ಈ ಭಾಗದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದು ನಮ್ಮ ಜವಾಬ್ದಾರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅಭಯ ನೀಡಿದ್ದಾರೆ.

ಇಲ್ಲಿನ ನೆಹರು ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಬಿಜೆಪಿಯ ಪರಿವರ್ತನಾ ಯಾತ್ರೆ ಯಲ್ಲಿ ಮಾತನಾಡಿದ ಅವರು, ಮಹದಾಯಿ ಬಿಕ್ಕಟ್ಟಿಗೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಲು ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಬರೆದಿರುವ ಪತ್ರ ಓದಿದರು.

ಈ ಪತ್ರದ ಕುರಿತು ಗೊಂದಲ ಸೃಷ್ಟಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಆದರೆ, ಜನರು ಯಾವುದೇ ರೀತಿಯ ಗೊಂದಲಗಳಿಗೆ ಕಿವಿಗೊಡಬಾರದು ಎಂದು ಸಲಹೆ ನೀಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ. ನಾನು ಮುಖ್ಯಮಂತ್ರಿಯಾದ ನಂತರ ಈ ಭಾಗದ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸಲು 1 ಲಕ್ಷ ಕೋಟಿ ರೂ. ಮೀಸಲಿಡುತ್ತೇನೆ ಎಂದು ಘೋಷಿಸಿದರು.

ದೇಶದ ಜನತೆಗೆ ಕಾಂಗ್ರೆಸ್ ಮೇಲಿನ ವಿಶ್ವಾಸ ಕಡಿಮೆಯಾಗುತ್ತಿದ್ದು, ಆ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅಪಹಾಸ್ಯಕ್ಕೀಡಾಗುತ್ತಿದ್ದಾರೆ. ಒಂದರ ಮೇಲೊಂದರಂತೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುತ್ತಿದ್ದು, ಕರ್ನಾಟಕದಲ್ಲಿಯೂ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಇನ್ನಾದರೂ ಕಾಂಗ್ರೆಸ್ ಮುಖಂಡರು ಪ್ರಧಾನಿ ಹಾಗೂ ಬಿಜೆಪಿ ಬಗ್ಗೆ ಮಾತನಾಡುವಾಗ ನೈಜತೆ ಅರಿತುಕೊಳ್ಳಲಿ ಎಂದರು.

ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ಮಾತನಾಡಿ, ಪರಿವರ್ತನಾ ಯಾತ್ರೆ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಅಂತ್ಯ ಹಾಡಲಿದೆ. ರಾಜ್ಯದಲ್ಲಿ ಗೂಂಡಾಗಿರಿ, ಭ್ರಷ್ಟಾಚಾರ, ಕೊಲೆಗಳು ಹೆಚ್ಚಾಗಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಗೂಂಡಾಗಿರಿ-ಹಫ್ತಾ ವಸೂಲಿಗೆ ಕಡಿವಾಣ ಹಾಕಲಾಗುವುದು ಎಂದು ಭರವಸೆ ನೀಡಿದರು.

ಬೆಳಗ್ಗೆಯಿಂದ ಚಡಪಡಿಕೆ

ಗೋವಾ ಮುಖ್ಯಮಂತ್ರಿಯಿಂದ ಬುಧವಾರ ಯಾವುದೇ ಭರವಸೆ ಸಿಕ್ಕಿರಲಿಲ್ಲ. ಆದರೆ, ಗುರುವಾರ ಉತ್ತರ ತಿಳಿಸುವುದಾಗಿ ಹೇಳಿದ್ದರಂತೆ. ಹೀಗಾಗಿ ಯಡಿಯೂರಪ್ಪ ಸೇರಿ ಬಿಜೆಪಿ ನಾಯಕರು ಗುರುವಾರ ಗೋವಾದ ಉತ್ತರಕ್ಕಾಗಿ ಕಾಯುತ್ತಿದ್ದರು. ಮಧ್ಯಾಹ್ನ 12 ಗಂಟೆಯಾದರೂ ಉತ್ತರ ಬಂದಿರಲಿಲ್ಲ. ಈ ಮಧ್ಯೆ ಗೋವಾದಲ್ಲಿ ವಿರೋಧ ವ್ಯಕ್ತವಾಗಿದ್ದು, ಪರಿಕ್ಕರ್ ಒಂದು ಹನಿ ನೀರನ್ನೂ ಕರ್ನಾಟಕಕ್ಕೆ ಬಿಡುವುದಿಲ್ಲವೆಂದು ಹೇಳಿದ್ದಾರೆಂಬ ಸುದ್ದಿ ಕೇಳಿ ಚಡಪಡಿಸಿದರು.

ಪ್ರತಿಭಟನೆ

ಹುಬ್ಬಳ್ಳಿಯಲ್ಲಿ ನೂರಾರು ರೈತರನ್ನು ಬಂಧಿಸಿದ ಮಾಹಿತಿ ತಿಳಿದು ಗದಗಿನ ನರಗುಂದದಲ್ಲಿ ರೈತ ಹೋರಾಟಗಾರರು ಸಂಜೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿದರು.

ಬಿಜೆಪಿ ಪರಿವರ್ತನಾ ಯಾತ್ರೆಯಿಂದ ಆತಂಕಗೊಂಡಿರುವ ಸಿದ್ದರಾಮಯ್ಯ ನವಕರ್ನಾಟಕ ಯಾತ್ರೆ ಪ್ರಾರಂಭಿಸಿದ್ದಾರೆ. ನಾಲ್ಕೂವರೆ ವರ್ಷದ ಬಳಿಕ ನವಕರ್ನಾಟಕದ ನಿರ್ಮಾಣ ನೆನಪಾಗಿದೆ.

| ಜಗದೀಶ ಶೆಟ್ಟರ್ ಪ್ರತಿಪಕ್ಷ ನಾಯಕ

ಕಾಂಗ್ರೆಸ್ ಕಾರಣ

ಮಹದಾಯಿ, ಕಳಸಾ- ಬಂಡೂರಿ ಸಮಸ್ಯೆ ಉಲ್ಬಣಕ್ಕೆ ಕಾಂಗ್ರೆಸ್ ಕಾರಣ. ಕೇಂದ್ರ, ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸರ್ಕಾರವೇ ಇದ್ದಾಗ ವಿವಾದ ಪರಿಹರಿಸಲಿಲ್ಲ. ಗೋವಾದ ಅಂದಿನ ಕಾಂಗ್ರೆಸ್ ಸರ್ಕಾರದ ಮಾತು ಕೇಳಿ ನ್ಯಾಯಾಧಿಕರಣ ರಚಿಸಿದ್ದು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ. ಕಳಸಾ ನಾಲಾ ತಿರುವು ಯೋಜನೆಗಾಗಿ ಬಿಜೆಪಿ ಸರ್ಕಾರ ಕಾಮಗಾರಿ ಮಾಡಿಸಿದೆ. ಒಂದು ಹನಿ ನೀರೂ ಇತ್ತ ಬಾರದಂತೆ ಅದಕ್ಕೆ ಅಡ್ಡಲಾಗಿ ಕಟ್ಟೆ ಕಟ್ಟಿರುವುದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಸಂಸದ ಪ್ರಲ್ಹಾದ ಜೋಶಿ, ಮಾಜಿ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಬಿಜೆಪಿಗೆ ನಿರಾಸೆ

ಬುಧವಾರ ದೆಹಲಿಯಲ್ಲಿ ಸಭೆ ನಡೆಸುವಾಗ ಆಶಾವಾದ ಇಟ್ಟುಕೊಂಡಿದ್ದ ಬಿಜೆಪಿ ಮುಖಂಡರು, ಗುರುವಾರ ಗೋವಾ ಸಿಎಂ ಕುಡಿಯುವ ನೀರಿಗೆ ಸಂಬಂಧಪಟ್ಟು ಮಾತ್ರ ನ್ಯಾಯಾಧಿಕರಣ ಈಗಾಗಲೇ ಹೇಳಿರುವಂತೆ ಮಾತುಕತೆಗೆ ಸಿದ್ಧ ಎಂದಷ್ಟೇ ಪತ್ರ ಕಳುಹಿಸಿ ರುವುದರಿಂದ ನಿರಾಶರಾದಂತೆ ಕಂಡುಬಂದಿತು.

Leave a Reply

Your email address will not be published. Required fields are marked *

Back To Top