ಕೈಗೆ ಕಗ್ಗಂಟಾದ ಅಭ್ಯರ್ಥಿ ಆಯ್ಕೆ

ಕೋಲಾರ: ಮೇ 25ರಂದು ನಡೆಯಲಿರುವ ಕೋಚಿಮುಲ್ ಅಧ್ಯಕ್ಷ ಚುನಾವಣೆಯಲ್ಲಿ ಆಡಳಿತವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಕಾಂಗ್ರೆಸ್​ನಲ್ಲಿ ತೀವ್ರ ಪೈಪೋಟಿ ಕಂಡುಬಂದಿದೆ.

ಕೋಚಿಮುಲ್​ನ 13 ನಿರ್ದೇಶಕರಲ್ಲಿ 11 ಮಂದಿ ಕಾಂಗ್ರೆಸ್ಸಿಗರಾಗಿದ್ದರೂ ಕೆ.ಎಚ್.ಮುನಿಯಪ್ಪ ಮತ್ತು ವಿರೋಧಿ ಬಣದೊಂದಿಗೆ ನಿರ್ದೇಶಕರು ಹರಿದು ಹಂಚಿಹೋಗಿದ್ದಾರೆ. ಮಾಲೂರು ಶಾಸಕ ಕೆ.ವೈ.ನಂಜೇಗೌಡ ಕೋಚಿಮುಲ್​ಗೆ ಮತ್ತೊಮ್ಮೆ ಅಧ್ಯಕ್ಷರಾಗಲು ಇಚ್ಛಿಸಿದ್ದು, ಮುನಿಯಪ್ಪ ಸೋತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಮೂಲಕ ಗದ್ದುಗೆ ಹಿಡಿಯಲು ಲಾಬಿ ನಡೆಸುತ್ತಿದ್ದಾರೆ.

ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಬೆಂಗಳೂರಿನ ಕಾವೇರಿ ಅತಿಥಿ ಗೃಹದಲ್ಲಿ ಸೇರಿದ್ದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಅಧ್ಯಕ್ಷ ಸ್ಥಾನಕ್ಕೆ ಒಮ್ಮತದ ಅಭ್ಯರ್ಥಿ ಆಯ್ಕೆ ಸಲುವಾಗಿ ನಿರ್ದೇಶಕರ ಅಭಿಪ್ರಾಯ ಸಂಗ್ರಹಿಸಿದರಾದರೂ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ.

ಗೆದ್ದಿರುವ 13 ನಿರ್ದೇಶಕರಲ್ಲಿ ನಂಜೇಗೌಡರ ಪರ ಕಾಂತಮ್ಮ ವಕಾಲತ್ತು ವಹಿಸಿದ್ದಾರೆ. ಇನ್ನುಳಿದಂತೆ ಕಾಂಗ್ರೆಸ್​ನ 9 ನಿರ್ದೇಶಕರು ತಮಗೆ ಅವಕಾಶ ನೀಡುವಂತೆ ಬೇಡಿಕೆ ಇಟ್ಟಿರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರಿಗೆ ಪೀಕಲಾಟ ಎದುರಾಗಿದೆ.

ಕೋಲಾರ ಜಿಲ್ಲೆಯಿಂದ ನಂಜೇಗೌಡ, ಜಯಸಿಂಹ ಕೃಷ್ಣಪ್ಪ, ಇದೇ ಮೊದಲ ಬಾರಿಗೆ ಆಯ್ಕೆಯಾಗಿರುವ ವಡಗೂರು ಡಿ.ವಿ.ಹರೀಶ್, ಎನ್.ಹನುಮೇಶ್ ಅಭ್ಯರ್ಥಿಯಾಗಲು ಗಾಡ್​ಫಾದರ್​ಗಳ ಮೂಲಕ ಪ್ರಯತ್ನಿಸುತ್ತಿದ್ದರೆ, ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂತರಾಜು, ಮಂಜುನಾಥರೆಡ್ಡಿ, ವೈ.ಬಿ.ಅಶ್ವತ್ಥನಾರಾಯಣ ಹಾಗೂ ಶ್ರೀನಿವಾಸ್ ಸಹ ಹಕ್ಕು ಚಲಾಯಿಸಿರುವುದರಿಂದ ಒಮ್ಮತ ಮೂಡಿಸಲು ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಶಂಕರರೆಡ್ಡಿ ಮತ್ತು ಕೃಷ್ಣಬೈರೇಗೌಡ ಪ್ರಯತ್ನ ಮುಂದುವರಿಸಿದ್ದಾರೆ.

ಲೋಕಸಮರದ ಫಲಿತಾಂಶದಲ್ಲಿ ಭಾರಿ ಹಿನ್ನಡೆ ಅನುಭವಿಸಿರುವುದರಿಂದ ಮುಜುಗರಕ್ಕೆ ಒಳಗಾಗಿರುವ ಸಿಎಂ. ಎಚ್.ಡಿ.ಕುಮಾರಸ್ವಾಮಿ ಕೋಚಿಮುಲ್ ಅಧ್ಯಕ್ಷರ ಚುನಾವಣೆ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಲು ಇಚ್ಛಿಸದೆ ಉಸ್ತುವಾರಿ ಸಚಿವರುಗಳು ಜವಾಬ್ದಾರಿ ತೆಗೆದುಕೊಂಡು ಸೂಕ್ತ ಅಭ್ಯರ್ಥಿಯನ್ನು ಅವಿರೋಧ ಆಯ್ಕೆ ಮಾಡಲು ಸೂಚಿಸಿದ್ದಾರೆ ಎನ್ನಲಾಗಿದೆ.

ಕೋಚಿಮುಲ್ ಅಧ್ಯಕ್ಷ ಚುನಾವಣೆ ವಿಚಾರದಲ್ಲಿ ಇಲ್ಲಿಯವರೆಗೂ ತಟಸ್ಥರಾಗಿರುವ ಸ್ಪೀಕರ್ ಕೆ.ಆರ್.ರಮೇಶ್​ಕುಮಾರ್ ಅಭಿಪ್ರಾಯ ಪಡೆದ ನಂತರ ಅಭ್ಯರ್ಥಿ ಆಯ್ಕೆ ಅಂತಿಮಗೊಳಿಸಲು ಬೆಂಗಳೂರಿನಲ್ಲೇ ಸಭೆ ಮುಂದುವರಿಸಿರುವ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಅಂತಿಮ ನಿರ್ಧಾರಕ್ಕೆ ಬಂದು ಮೇ 25ರ ಬೆಳಗ್ಗೆ 10.30ರೊಳಗೆ ಅಭ್ಯರ್ಥಿ ಹೆಸರು ಪ್ರಕಟಿಸಬಹುದೆಂದು ತಿಳಿದುಬಂದಿದೆ.

ಕೊತ್ತೂರು ಪರ ಲಾಬಿ?:ಕೋಚಿಮುಲ್​ಗೆ ಈ ಹಿಂದೆ ನಾಮನಿರ್ದೇಶಕರಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಸುಬ್ಬಾರೆಡ್ಡಿ ಸರ್ಕಾರದ  ಮುಂದಿನ ಆದೇಶದವರೆಗೂ ಮುಂದುವರಿಯುವ ಸಾಧ್ಯತೆ ಇದೆಯಾದರೂ ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಅವರನ್ನು ನಾಮನಿರ್ದೇಶಕರನ್ನಾಗಿಸಲು ಕೆಎಚ್ ವಿರೋಧಿ ಬಣದ ಮುಖಂಡರು ಲಾಬಿ ನಡೆಸುತ್ತಿದ್ದಾರೆನ್ನಲಾಗಿದೆ. ಒಕ್ಕೂಟಕ್ಕೆ ಜೆಡಿಎಸ್​ನ ಕೇವಲ ಇಬ್ಬರು ನಿರ್ದೇಶಕರಾಗಿ ಆಯ್ಕೆಯಾಗಿರುವುದರಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಿರಾಸಕ್ತಿ ವ್ಯಕ್ತವಾಗಿದೆ.

ವೇಳಾಪಟ್ಟಿ: ನಾಮಪತ್ರ ಸಲ್ಲಿಕೆ ಬೆಳಗ್ಗೆ 9ರಿಂದ 11ರವರೆಗೆ. ಪರಿಶೀಲನೆ ಬೆಳಗ್ಗೆ 11ರಿಂದ 11. 30ಕ್ಕೆ ಕ್ರಮಬದ್ಧ ಅಭ್ಯರ್ಥಿಗಳ ಪಟ್ಟಿ ಪ್ರಕಟಣೆ, 11.30ರ ನಂತರ ಉಮೇದುವಾರಿಕೆ ವಾಪಸ್ ಪಡೆಯಲು ಕಾಲಾವಕಾಶವಿದೆ. ಅವಶ್ಯವಿದ್ದತೆ ಮಧ್ಯಾಹ್ನ 1ರಿಂದ 1.30ರವರೆಗೆ ಮತದಾನ ನಡೆಯಲಿದ್ದು, ಚುನಾವಣಾಧಿಕಾರಿಯಾಗಿ ಕೋಲಾರ ಉಪವಿಭಾಗಾಧಿಕಾರಿ ವಿ.ಸೋಮಶೇಖರ್ ಕಾರ್ಯನಿರ್ವಹಿಸುವರು.

Leave a Reply

Your email address will not be published. Required fields are marked *