ಕೈಗಾರಿಕೆಗೆ 600 ಎಕರೆ ಮೀಸಲಿಡಿ

ಹಾವೇರಿ: ಜಿಲ್ಲೆಯಲ್ಲಿ ಕೈಗಾರಿಕೆಗಳ ಅಭಿವೃದ್ಧಿಗಾಗಿ 600 ಎಕರೆ ಭೂಮಿ ಮೀಸಲಿಡುವಂತೆ ಒತ್ತಾಯಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ರಾಜ್ಯಾಧ್ಯಕ್ಷ ಸುಧಾಕರ ಶೆಟ್ಟಿ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾವೇರಿ ತಾಲೂಕು ಕೊಳೂರು ಬಳಿ ಈಗಾಗಲೇ 400 ಎಕರೆ ಜಮೀನು ಗುರುತಿಸಲಾಗಿದೆ. ಅದಕ್ಕೆ ಸರ್ಕಾರದಿಂದ ಮಂಜೂರಾತಿ ಸಿಗಬೇಕಿದೆ. ಇದರ ಜೊತೆಗೆ ಇನ್ನೂ 200 ಎಕರೆ ಭೂಮಿ ಗುರುತಿಸಿ ಕೈಗಾರಿಕೆಗಳಿಗೆ ನೀಡಬೇಕು. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಹಾವೇರಿ ಜಿಲ್ಲೆಯು ಕೈಗಾರಿಕಾ ಬೆಳವಣಿಗೆಯಲ್ಲಿ ತೀರಾ ಹಿಂದುಳಿದಿದೆ. ಅದಕ್ಕಾಗಿ ಸರ್ಕಾರ ಇಲ್ಲಿ ಹೆಚ್ಚಿನ ಅನುದಾನ ನೀಡುವ ಜೊತೆಗೆ ಯೋಜನೆಗಳನ್ನು ರೂಪಿಸಬೇಕಿದೆ. ಜಿಲ್ಲೆಯಲ್ಲಿ ಮಾನವ ಶಕ್ತಿ, ಉತ್ತಮ ಸಂಪರ್ಕ ವ್ಯವಸ್ಥೆ ಸೇರಿ ಮೂಲಸೌಕರ್ಯವಿದೆ. ಈಗಾಗಲೇ ಜಿಲ್ಲೆಯಲ್ಲಿರುವ ಕೈಗಾರಿಕೆಗಳ ಪ್ರಚಾರ ಆಗಿಲ್ಲ. ಹೀಗಾಗಿ ಬಂಡವಾಳಶಾಹಿಗಳು ಇಲ್ಲಿಗೆ ಸಾಕಷ್ಟು ಪ್ರಮಾಣದಲ್ಲಿ ಬರುತ್ತಿಲ್ಲ ಎಂದರು.

ಜಿಲ್ಲೆಯಲ್ಲಿ 17 ವರ್ಷಗಳಿಂದ ಹೊಸ ಕೈಗಾರಿಕೆಗಳು ಬಂದಿಲ್ಲ. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಕೊರತೆಯೇ ಕಾರಣವಾಗಿದೆ. ಜಿಲ್ಲೆಯ ರಾಜಕಾರಣಿಗಳು ಜನಪ್ರತಿನಿಧಿಗಳಾಗಿ ಆಯ್ಕೆಯಾದ ಮೇಲೆ ಬೆಂಗಳೂರಿಗೆ ಹೋಗಿ ವಾಸ ಮಾಡುವ ಬದಲು ಕ್ಷೇತ್ರದಲ್ಲಿದ್ದು ಕ್ಷೇತ್ರದ ಸಮಸ್ಯೆ, ಬೇಡಿಕೆಗಳಿಗೆ, ಅಭಿವೃದ್ಧಿಗೆ ಚಿಂತನೆ ನಡೆಸಬೇಕು ಎಂದರು.

ಬ್ಯಾಂಕ್​ಗಳ ಮನಸ್ಥಿತಿ ಬದಲಾಗಬೇಕು: ಬ್ಯಾಂಕ್​ಗಳು ಹಳೇ ಉದ್ಯಮಿಗಳಿಗೆ ಸಾಲ ಕೊಡಲು ತೋರುವ ಆಸಕ್ತಿಯನ್ನು ಹೊಸ ಉದ್ಯಮಿಗಳಿಗೆ ತೋರುತ್ತಿಲ್ಲ. ಬ್ಯಾಂಕ್ ಅಧಿಕಾರಿಗಳ ಇಂಥ ಮನಸ್ಥಿತಿ ಬದಲಾಗಬೇಕು. ಹೊಸ ಉದ್ಯಮಿಗಳನ್ನು ಪ್ರೋತ್ಸಾಹಿಸಬೇಕು ಎಂದರು.

ಹಾವೇರಿಯಲ್ಲಿ ಮಂಗಳವಾರ ನಡೆದ ಕಾರ್ಯಾಗಾರದಲ್ಲಿ ಸರಕು ಸೇವಾ ತೆರಿಗೆ, ಕೃಷಿ ಉತ್ಪನ್ನ ಮಾರುಕಟ್ಟೆ, ಬ್ಯಾಂಕಿಂಗ್ ಮತ್ತು ಹಣಕಾಸು, ಕೈಗಾರಿಕೆ ಕುರಿತ ನಾಲ್ಕು ಗೋಷ್ಠಿಗಳು ನಡೆದಿವೆ. ವ್ಯಾಪಾರ ಪರವಾನಗಿ ನವೀಕರಣ ಅವಧಿ ವಿಸ್ತರಣೆಯಾಗಬೇಕು. ಎಪಿಎಂಸಿಯ 0.5 ಆವರ್ತನಿಧಿ ತೆರಿಗೆ ರದ್ದುಪಡಿಸಬೇಕು. ಅನವಶ್ಯಕ ಹಾಗೂ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಇಂಬು ನೀಡುವ ಎಪಿಎಂಸಿ 35-ಬಿ(35-ಎ ಇದರಲ್ಲಿ ತೆರಿಗೆ ಸೇರಿದಂತೆ ಇತರ ಎಲ್ಲ ದೃಢೀಕರಣ ಮಾಡಿದ್ದರೂ 35-ಬಿಯಲ್ಲಿ ಎಪಿಎಂಸಿ ಕಾರ್ಯದರ್ಶಿ ಸಹಿ ಹಾಕಿಸುವುದು) ರದ್ದು ಮಾಡಬೇಕು. ಜಿಎಸ್​ಟಿ ಅನುಷ್ಠಾನದಲ್ಲಿರುವ ನೆಟ್​ವರ್ಕ್ ಸಮಸ್ಯೆ ಸರಿಪಡಿಸಬೇಕು ಎಂಬ ಪ್ರಸ್ತಾವನೆಯನ್ನು ಸರ್ಕಾರಗಳಿಗೆ ಕಳುಹಿಸಲು ನಿರ್ಧರಿಸಲಾಗಿದೆ ಎಂದರು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹಾಗೂ ಜಿಲ್ಲಾ ಘಟಕದ ಸಿ.ಆರ್. ಜನಾರ್ದನ, ಸುಂದರ, ಎನ್. ಯಶವಂತರಾಜ, ಆರ್.ಎಸ್. ಮಾಗನೂರ, ಪಿ.ಡಿ. ಶಿರೂರ, ಜಿ.ವಿ. ಹಿರೇಗೌಡ್ರ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.

ಸ್ಥಿರ ಸರ್ಕಾರ ಬೇಕು

ಸರ್ಕಾರದ ಅಸ್ಥಿರತೆ ಎಲ್ಲ ರಂಗದಲ್ಲಿಯೂ ಪರಿಣಾಮ ಬೀರುವಂತೆ ಕೈಗಾರಿಕೆ, ವಾಣಿಜ್ಯ ರಂಗದ ಮೇಲೆಯೂ ಬೀಳುತ್ತದೆ. ಸರ್ಕಾರ ಯಾವಾಗ ಏನಾಗುತ್ತೋ ಎಂಬ ಭಾವನೆಯಿಂದ ಅಧಿಕಾರ ವರ್ಗ ತಟಸ್ಥವಾಗುತ್ತದೆ. ಅಧಿಕಾರ ವರ್ಗ ತಟಸ್ಥವಾದರೆ ಯೋಜನೆ, ಕಾರ್ಯಕ್ರಮ ಎಲ್ಲವೂ ಕುಂಠಿತಗೊಳ್ಳುತ್ತವೆ. ಹೀಗಾಗಿ ಸರ್ಕಾರದಲ್ಲಿ ಸ್ಥಿರತೆ ಇರಬೇಕು. ಆಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಸುಧಾಕರ ಶೆಟ್ಟಿ ತಿಳಿಸಿದರು.

Leave a Reply

Your email address will not be published. Required fields are marked *