ಕೈಗಾರಿಕೆಗಳ ರಕ್ಷಣೆಗೆ ಕೇಂದ್ರ ಮುಂದಾಗಲಿ

ಮೈಸೂರು: ಸಂಕಷ್ಟಕ್ಕೆ ಸಿಲುಕಿರುವ ಕೈಗಾರಿಕೆಗಳ ರಕ್ಷಣೆಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮೈಸೂರು ಕೈಗಾರಿಕೆಗಳ ಸಂಘ ದ ಪದಾಧಿಕಾರಿಗಳು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಸಲ್ಲಿಸಿದರು.

ನಗರದ ಅತಿಥಿಗೃಹದಲ್ಲಿ ಗುರುವಾರ ಸಚಿವರನ್ನು ಭೇಟಿ ಮಾಡಿ, ಕೈಗಾರಿಕಾ ಕ್ಷೇತ್ರದ ಹಿನ್ನಡೆ ಮತ್ತು ಆಟೋಮೊಬೈಲ್ ಉದ್ಯಮದ ಸಮಸ್ಯೆಯನ್ನು ವಿವರಿಸಿದರು.

ಆಟೋಮೊಬೈಲ್ ವಾಹನ ತಯಾರಿಕೆ ಕುಂಠಿತಗೊಂಡಿದ್ದು, ಕೈಗಾರಿಕಾ ವಲಯ 10 ವರ್ಷಗಳ ಅಂತರದಲ್ಲಿ ಮತ್ತೊಂದು ಕೈಗಾರಿಕಾ ಹಿನ್ನಡೆಯ ಸವಾಲು ಎದುರಿಸಬೇಕಾಗಿದೆ. ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳು ಸಾಲ ಮರುಪಾವತಿಸಲಾಗದ ಹಂತ ತಲುಪಿವೆ. ಇದೇ ಸ್ಥಿತಿ ಮುಂದುವರಿದರೆ ದೇಶದಲ್ಲಿ 10 ಲಕ್ಷ ಉದ್ಯೋಗ ಕಡಿತಗೊಳಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರ ತಯಾರಿಕಾ ವಲಯದ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಪೂರಕವಾಗಿ ಆದಾಯ ತೆರಿಗೆಯ ಟಿಡಿಎಸ್ ವಿಳಂಬ ಪಾವತಿಗೆ ವಿಧಿಸುವ ದಂಡವನ್ನು ರದ್ದು ಪಡಿಸಬೇಕು. ಜಿಎಸ್‌ಟಿ ಬಡ್ಡಿ ಕಡಿಮೆಗೊಳಿಸಬೇಕು. ಜಿಎಸ್‌ಟಿ ವಿಳಂಬ ಪಾವತಿ ಮತ್ತು ನೋಂದಣಿ ರದ್ದು ಕ್ರಮವನ್ನೂ ಹಿಂಪಡೆಯಬೇಕು. ಸಣ್ಣ ಉದ್ಯಮಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಭದ್ರತೆ ರಹಿತ ಸಾಲವನ್ನು ಸುಲಲಿತವಾಗಿ ದೊರೆಯುವಂತಾಗಬೇಕು. ಸಣ್ಣ ಕೈಗಾರಿಕೆಗಳು ಮತ್ತು ವ್ಯಾಪಾರಸ್ಥರಿಗೆ ಶೇ.10ರಷ್ಟು ಮಾತ್ರ ಬ್ಯಾಂಕ್‌ಗಳಿಂದ ಸಾಲ ದೊರೆಯುತ್ತಿದೆ. ಹೀಗಾಗಿ, ಉದ್ಯಮಿಗಳು ಖಾಸಗಿ ಲೇವಾದೇವಿದಾರರಿಂದ ದುಬಾರಿ ಬಡ್ಡಿ(ಮೀಟರ್ ಬಡ್ಡಿ) ಸಾಲದಿಂದ ವ್ಯಾಪಾರ ನಡೆಸಲಾಗುತ್ತಿದೆ. ಆದ್ದರಿಂದ ಬ್ಯಾಂಕ್‌ನಿಂದ ಹೆಚ್ಚಿನ ಸಾಲ ಸೌಲಭ್ಯ ದೊರೆಯಬೇಕು ಎಂದು ಆಗ್ರಹಿಸಿದರು.

ಸಂಘದ ಪದಾಧಿಕಾರಿಗಳಾದ ಒ.ಡಿ. ಸತ್ಯೇಂದ್ರ , ಸುರೇಶ್‌ಕುಮಾರ್ ಜೈನ್ ಈ ಸಂದರ್ಭದಲ್ಲಿದ್ದರು.

Leave a Reply

Your email address will not be published. Required fields are marked *