ಕೈಕಚ್ಚಿದ ಕಳ್ಳತನ!

ಯೋಗ್ಯತೆಗೆ ಮೀರಿದ ಬಾಬತ್ತಿಗೆ ಕೈಹಾಕಲು ಹೋದರೆ, ಪಡಬಾರದ ಪಡಿಪಾಟಲು ಪಡಬೇಕಾಗುತ್ತದೆ ಎಂಬ ಮಾತಿಗೆ ಪುಷ್ಟಿನೀಡುವ ಘಟನೆಯೊಂದು ಅಮೆರಿಕದ ಮೆರಿಲ್ಯಾಂಡ್​ನಿಂದ ವರದಿಯಾಗಿದೆ.

ಆತನೊಬ್ಬ ದುರಾಸೆಯ ಕಳ್ಳ. ಸಣ್ಣಪುಟ್ಟ ಪರ್ಸ್ ಎಗರಿಸಿ ಸಿಕ್ಕಿಬಿದ್ದು ಕಂಬಿ ಎಣಿಸೋ ಬದಲು, ಹೊಡೆದರೆ ದೊಡ್ಡಗಂಟನ್ನೇ ಹೊಡೀಬೇಕು ಎಂಬ ಚಿಂತನೆಯುಳ್ಳವ. ಇದನ್ನು ಕಾರ್ಯರೂಪಕ್ಕೆ ತರಲೆಂದು ಕನ್ನಗಳ್ಳತನಕ್ಕೆ ಸ್ಕೆಚ್ ಹಾಕಿದ. ಮನೆಯೊಂದರ ಸದಸ್ಯರೆಲ್ಲ ಆಚೆಗೆ ತೆರಳಿದ್ದನ್ನು ದೃಢಪಡಿಸಿಕೊಂಡು ಅಲ್ಲಿಗೆ ಲಗ್ಗೆಹಾಕಿದ. ಅವನ ಅದೃಷ್ಟಕ್ಕೆಂಬಂತೆ ಬೃಹತ್ ಪರದೆಯ ಟಿವಿಯೊಂದನ್ನು ಮನೆಯವರು ಖರೀದಿಸಿದ್ದರು. ಅದರ ಪಾರ್ಸೆಲ್ಲು ಆಗಷ್ಟೇ ಬಂದಿತ್ತು, ಹೊರಗಡೆಯ ಕೆಲಸ ಮುಗಿಸಿಕೊಂಡು ಬಂದು ಸಂಜೆಹೊತ್ತಿಗೆ ಬಿಚ್ಚಿ ಹೊರತೆಗೆದರಾಯ್ತು ಅಂದ್ಕೊಂಡು ತೆರಳಿದ್ದರು. ಕಳ್ಳನ ಕಣ್ಣು ಅದರ ಮೇಲೆ ಬಿತ್ತು. ‘ಸಿಕ್ತು ಗಂಟು’ ಎನ್ನುತ್ತ ಅದನ್ನು ಉತ್ಸಾಹದಿಂದ ಎತ್ತಿಕೊಂಡು ಹೊರನಡೆದ.

ಆದರೆ ಉತ್ಸಾಹ ಅಲ್ಪಾಯುವಾಗಿತ್ತು. ಆಸೆ ಈಡೇರಿದ ಸಂಭ್ರಮದಲ್ಲಿ ಅದರ ಭಾರ ಮೊದಲಿಗೆ ಅರಿವಿಗೆ ಬಂದಿರಲಿಲ್ಲ. ಆದರದ್ದು ಯಮಭಾರ ಅಂತ ನಂತರ ಗೊತ್ತಾಯ್ತು. ಹೆಜ್ಜೆಹೆಜ್ಜೆಗೂ ಅಲ್ಲಲ್ಲಿ ಇಟ್ಟುಕೊಂಡು ತನ್ನ ಕಾರಿನವರೆಗೂ ಹೇಗೋ ಸಾಗಿಸಿ ‘ಉಸ್ಸಪ್ಪಾ…’ ಎಂದು ಉಸಿರುಬಿಟ್ಟ. ಅಷ್ಟಕ್ಕೇ ಮುಗಿಯಲಿಲ್ಲ. ಅದನ್ನು ತನ್ನ ‘ಪರಾರಿ’ ಕಾರಿನ ಡಿಕ್ಕಿಗೆ ತುಂಬಿಸಲು ಆತ ಇನ್ನಿಲ್ಲದಂತೆ ಬೆವರು ಸುರಿಸಬೇಕಾಗಿ ಬಂತು. ಇವಿಷ್ಟೂ ಸರ್ಕಸ್ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದ್ದು, ಈ ಕಳ್ಳನನ್ನು ಹಿಡಿಯಲು ಅಲ್ಲಿನ ಪೊಲೀಸರು ಬಲೆ ಬೀಸಿದ್ದಾರಂತೆ!

Leave a Reply

Your email address will not be published. Required fields are marked *