ಕೇವಲ ಆನಂದ ಏಕರಸಮಯವಸ್ತು

| ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ

ಪರಮಾರ್ಥಸಿದ್ಧಿಗಾಗಿ ಹೊರಡುವ ಪ್ರತಿಯೊಬ್ಬ ಸಾಧಕನೂ ಅನನ್ಯವಾಗಿ ಸಾಧಕನಾಗಿಯೇ ಇರಬೇಕು. ಅವನು ಶ್ರದ್ಧೆಯಿಂದ ಪರಮಾರ್ಥದ ಗತಿ ಹಿಡಿಯಬೇಕು. ಲಕ್ಷ್ಯ ಒಂದೇ ಆಗಿರಬೇಕು! ‘ಲಕ್ಷಣಾವೃತ್ತಿ’ ಎಂದು ಹಲವೆಡೆ ಬಂದಿದೆಯಷ್ಟೆ. ವಾಚ್ಯಾರ್ಥಕ್ಕಿಂತ ಮೀರಿದ್ದು ಲಕ್ಷ್ಯಾರ್ಥ. ಅದರ ವೃತ್ತಿಯೇ ಲಕ್ಷಣೆ. ಇದು ‘ಮಧ್ಯಮಕಾವ್ಯ’ಕ್ಕೆ ನಿಬದ್ಧವಾದುದು. ಮಹಲಿಂಗರಂಗ ಅನೇಕ ಕಡೆ ‘ಲಕ್ಷಣಾವೃತ್ತಿ’ಯ ಪ್ರಸ್ತಾಪ ಮಾಡಿದ್ದಾನೆ. ದೈವವು ವಾಚ್ಯಕ್ಕೆ ಸಿಗುವುದಿಲ್ಲ; ಅದು ವಾಚ್ಯಾತೀತ. ಹೀಗಾಗಿ ಲಕ್ಷಣೆಯನ್ನು ಗಣಿಸಬೇಕಾಗುತ್ತದೆ! ಬ್ರಹ್ಮವಸ್ತು ಅನಿರ್ವಚನೀಯ ಎಂಬುದು ಪ್ರಸಿದ್ಧ.

ಮಹಲಿಂಗರಂಗನು ‘ಅಸಿ’ಪದದ ಸ್ವರೂಪವನ್ನು ಇಲ್ಲಿಯವರೆಗೆ ತಿಳಿಸಿದ್ದು ಸರಿಯಷ್ಟೆ. ಈಗ ತತ್ತ್ವವು ಗಟ್ಟಿಯಾಗಿ ಕುಳಿತುಕೊಳ್ಳಬೇಕಾದ ದೃಷ್ಟಿಯಿಂದ ಈಶ್ವರ-ಜೀವರ ಬಗೆಗೆ ಹೇಳುತ್ತಿದ್ದಾನೆ. ಸಾಧಕನಿಗೆ ‘ಈಶ್ವರ’ಸ್ವರೂಪ ಮೊದಲು ತಿಳಿಯಬೇಕು. ನಾವು ಈಶ್ವರಸ್ವರೂಪವನ್ನು ತಿಳಿದರೆ, ಜೀವಸ್ವರೂಪವನ್ನು ತಿಳಿಯಲು ಸಾಧ್ಯವಾಗುತ್ತದೆ. ಈಶ್ವರ ಪದಸ್ವರೂಪವು ಲಕ್ಷಣೆಯಿಂದ ಅದರ ವೃತ್ತಿಯಿಂದ ನಮಗೆ ವ್ಯಂಜಿತವಾಗುತ್ತದೆ. ನಿರ್ಗಣ ಪರಬ್ರಹ್ಮನ ಸಗುಣ ಸವಿಶೇಷರೂಪವೇ ಅಪರಬ್ರಹ್ಮ. ಇದು ಈಶ್ವರನೆಂದು ವೇದಾಂತದಲ್ಲಿ ವ್ಯವಹಾರ. ನಿರುಪಾಧಿಕ ಪರಬ್ರಹ್ಮನು ಮಾಯೆಯ ಉಪಾಧಿಕಾರಣವಾಗಿ ಈಶ್ವರನ ರೂಪದಲ್ಲಿ ಭಾಸವಾಗುತ್ತಾನೆ. ಪರಬ್ರಹ್ಮವು ಬುದ್ಧಿಗೆ ಅಗ್ರಾಹ್ಯವೆಂಬುದು ಎಲ್ಲರಿಗೂ ತಿಳಿದಿರುವ ಸಂಗತಿ! ಸಾಪೇಕ್ಷಬುದ್ಧಿಗೆ ಈಶ್ವರನೇ ಸವೋಚ್ಚನಾಗಿದ್ದಾನೆ. ಮಾಯೆಯ ಕಾರಣದಿಂದ ಬ್ರಹ್ಮನು ಈಶ್ವರ, ಜೀವ ಮತ್ತು ಜಗತ್ತಿನ ರೂಪದಲ್ಲಿ ಪ್ರತೀತನಾಗುತ್ತಾನೆ ಮತ್ತು ಮಾಯೆಯು ನಿವೃತ್ತಿಯಾದ ಮೇಲೆ ಶುದ್ಧಪರಬ್ರಹ್ಮನೇ ಪ್ರಕಟಗೊಳ್ಳುತ್ತಾನೆ. ಈಶ್ವರ, ಜೀವ ಮತ್ತು ಜಗತ್ತು ಈ ಮೂರಕ್ಕೂ ವ್ಯಾವಹಾರಿಕ ಅಸ್ತಿತ್ವ ಉಂಟು. ಇವು ಏಕಕಾಲಕ್ಕೆ ಪ್ರತೀತವಾಗುತ್ತವೆ ಮತ್ತು ಇವು ಏಕಕಾಲಕ್ಕೆ ನಿವೃತ್ತವಾಗುತ್ತವೆ. ಜೀವನ ದೃಷ್ಟಿಯಲ್ಲಿ ಈಶ್ವರನೇ ಸರ್ವಸ್ವ. ಈ ಸಂಗತಿಯನ್ನು ಸ್ವಲ್ಪ ವಿಸ್ತರಿಸಿ ಹೇಳಬಹುದಾದರೆ: ಮಾಯೆಯ ಕಾರಣ ಪರಬ್ರಹ್ಮನು ಈಶ್ವರರೂಪದಲ್ಲಿ ಪ್ರತೀತನಾಗುತ್ತಾನೆ ಮತ್ತು ಈಶ್ವರನು ಜೀವ, ಜಗತ್ತಿನ ರೂಪದಲ್ಲಿ ಪ್ರತೀತನಾಗುತ್ತಾನೆ. ಯಾವಾಗ ಮಾಯೆಯು ದೂರವಾಗುವುದೋ ಆಗ ಈಶ್ವರ, ಜೀವ ಮತ್ತು ಜಗತ್ತು ಈ ಮೂರೂ ಆಭಾಸಗಳು ಅಥವಾ ತೋರಿಕೆಗಳು ಏಕಕಾಲಕ್ಕೆ ನಿವಾರಣೆಯಾಗುತ್ತವೆ. ಇದು ಸ್ಥೂಲವಾಗಿ ಈಶ್ವರ-ಜೀವ-ಜಗತ್ ಮೂರರ ಸ್ವರೂಪ.

ಶ್ರೀ ಶಂಕರಾಚಾರ್ಯರ ಅನಂತರ ಬಂದ ಅದ್ವೈತವೇದಾಂತಿಗಳು ಈಶ್ವರ ಮತ್ತು ಜೀವರ ವಿಷಯದಲ್ಲಿ ಪ್ರತಿಬಿಂಬವಾದ, ಅವಚ್ಛೇದವಾದ ಮತ್ತು ಅಭಾಸವಾದಗಳನ್ನು ಪ್ರತಿಪಾದಿಸಿದ್ದಾರೆ. ಈ ಮೂರು ಸಂಗತಿಗಳನ್ನು ಸ್ಥೂಲವಾಗಿ ಮೊದಲಿಗೆ ತಿಳಿಯೋಣ. ಪ್ರತಿಬಿಂಬವಾದದ ಪ್ರಕಾರ ಮಾಯೆಯಲ್ಲಿರುವ ಬ್ರಹ್ಮನ ಪ್ರತಿಬಿಂಬವೇ ಈಶ್ವರ ಮತ್ತು ಅವಿದ್ಯೆಯಲ್ಲಿರುವ ಪ್ರತಿಬಿಂಬವೇ ಜೀವವಾಗಿದೆ. ಬ್ರಹ್ಮ ಮತ್ತು ಮಾಯೆ ಇವೆರಡೂ ನಿರಾಕಾರವಾಗಿವೆ! ನಿರಾಕಾರದಲ್ಲಿ ನಿರಾಕಾರದ ಪ್ರತಿಬಿಂಬ ಉಂಟಾಗುವುದು ಹೇಗೆ? ಈ ಪ್ರಶ್ನೆಯನ್ನು ಕೆಲವರು ಹಾಕಿದ್ದುಂಟು. ಆಗ ಕೆಲವು ಅದ್ವೈತಿಗಳು ಈಶ್ವರನನ್ನು ಬಿಂಬವೆಂತಲೂ ಜೀವಗಳನ್ನು ಪ್ರತಿಬಿಂಬವೆಂತಲೂ ತಿಳಿಸಿದರು. ಮಹಲಿಂಗರಂಗನು ಪ್ರತಿಬಿಂಬವಾದದ ನೆಲೆಯ ಜಾಡನ್ನು ಹಿಡಿದು ನಡೆದಿದ್ದಾನೆಂದು ತೋರುತ್ತದೆ. ಅವಚ್ಛೇದದ ಪ್ರಕಾರ ಮಾಯೆಯಿಂದ ಆವೃತ (ಮಾಯಾವಚ್ಛಿನ್ನ)ವಾದ ಬ್ರಹ್ಮನು ಈಶ್ವರನಾಗಿದ್ದರೆ; ಅವಿದ್ಯೆ ಅಥವ ಅಂತಃಕರಣಾವಚ್ಛಿನ್ನ ಬ್ರಹ್ಮನು ಜೀವನಾಗಿದ್ದಾನೆ. ಇನ್ನು ಆಭಾಸವಾದದ ಪ್ರಕಾರ ಮಾಯೆಯಲ್ಲಿ ಬ್ರಹ್ಮನ ಆಭಾಸವು ಜೀವವಾಗಿದೆ. ಆಚಾರ್ಯ ಶಂಕರ ಭಗವತ್ಪಾದರು ಪ್ರತಿಬಿಂಬ ಮತ್ತು ಅವಚ್ಛೇದಗಳ ಉಪಮೆ ಮತ್ತು ದೃಷ್ಟಾಂತಗಳನ್ನು ಕೊಟ್ಟಿದ್ದಾರೇನೋ ಸರಿ. ಪ್ರತಿಬಿಂಬ ಮತ್ತು ಅವಚ್ಛೇದಗಳನ್ನು ಅವರು ‘ವಾದ’ದ ರೂಪದಲ್ಲಿ ಪರಿಗ್ರಹಿಸದೆ; ಕೇವಲ ‘ಉಪಮೆ’ಯ ರೂಪದಲ್ಲಿ ಸ್ವೀಕರಿಸಿದ್ದಾರೆ.

ಆಚಾರ್ಯರ ಪ್ರಕಾರ ಮಾಯೆ ಅವಿದ್ಯೆ ವಾಸ್ತವದಲ್ಲಿ ಬ್ರಹ್ಮನನ್ನು ಪ್ರತಿಬಿಂಬಿಸುವುದೂ ಇಲ್ಲ, ಸೀಮಿತಗೊಳಿಸುವುದೂ ಇಲ್ಲ. ಅವಿದ್ಯೆ ಭ್ರಾಂತಿಯಾಗಿದೆ. ಆದ್ದರಿಂದ ಅದರ ಆಭಾಸವೂ ಮಿಥ್ಯೆಯಾಗುವುದು ಸತ್ಯ. ಆಭಾಸವು ಬ್ರಹ್ಮನ ವಿವರ್ತವೇ ಹೊರತು ಪರಿಣಾಮ ಅಲ್ಲ. ಈಶ್ವರನು ಮಾಯೆಯ ಒಡೆಯ. ಅವನು ಮಾಯೆಯ ವಿಕ್ಷೇಪ ಶಕ್ತಿಯನ್ನಷ್ಟೇ ಪ್ರಯೋಗ ಮಾಡುತ್ತಾನೆ. ಅವನ ಮೇಲೆ ಅವಿದ್ಯೆಯ ‘ಆವರಣ’ ಇರುವುದಿಲ್ಲ. ಮಾಯೆಯು ಅವನನ್ನು ಆವೃತವಾಗಿಸುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ಈಶ್ವರನು ತನ್ನನ್ನು ‘ಈಶ್ವರ’ ರೂಪದಲ್ಲಿ ಅನುಭವಿಸದೆ ಪರಬ್ರಹ್ಮರೂಪದಲ್ಲಿ ಅನುಭವಿಸುತ್ತಾನೆ; ಜೀವನು ಅವನನ್ನು ಈಶ್ವರನೆಂದು ತಿಳಿಯುತ್ತಾನೆ. ಜೀವನು ಅವಿದ್ಯೆಯ ಕಾರಣದಿಂದ ಬ್ರಹ್ಮನನ್ನು ಈಶ್ವರನೆಂದು ತಿಳಿಯುತ್ತಾನೆ. ಈ ಸಂಗತಿಗಳನ್ನು ಇನ್ನು ಬೆಳಸುವುದರ ಅಗತ್ಯವಿಲ್ಲ. ಆ ವಿಚಾರಗಳನ್ನು ಸ್ಥೂಲವಾಗಿ ಇಲ್ಲಿ ಪ್ರಸ್ತಾವಿಸಲಾಗಿದೆ.

ಮಹಲಿಂಗರಂಗನು ‘ಪ್ರತಿಬಿಂಬವಾದ’ದ ಹಿನ್ನೆಲೆಯಲ್ಲಿ ‘ಜೀವೇಶ್ವರ’ ಸ್ವರೂಪವನ್ನು ಪರಿಗ್ರಹಿಸುತ್ತಿದ್ದಾನೆಂದು ತಿಳಿದರೆ ಅಷ್ಟು ಸಾಕು. ಈ ಹಿನ್ನೆಲೆಯಲ್ಲಿ ಮುಂದಿನ ಆರು ಪದ್ಯಗಳನ್ನು ಪ್ರತಿಬಿಂಬವಾದದ ದೃಷ್ಟಿಯಿಂದ ಪರಿಶೀಲಿಸಬಹುದು. ಅಗ್ನಿಯು ಉಷ್ಣಸ್ವರೂಪಿ ಎಂದು ಗೊತ್ತು. ಅದೇ ಅಗ್ನಿ ಚಿನ್ಮಯಾತ್ಮಕನೂ ಆಗಿದ್ದಾನೆ. ಆ ಅಗ್ನಿಯು ನಿತ್ಯಜ್ಞಾನಸ್ವರೂಪ. ಅವನು ತನ್ನ ಸ್ವಪ್ರಕಾಶದಿಂದ ಹೆಚ್ಚಾದ ತಮಸ್ಸತ್ವ ಪ್ರಧಾನನೂ ಆಗಿದ್ದಾನೆ. ಹೀಗಾಗಿ, ಧೂಮಜ್ವಾಲೆ ಬೆಳಗುವಂತೆ ಅವನು ಮಾಯಾಶಕ್ತಿಯೂ ಬುದ್ಧಿಶಕ್ತಿಯೂ ಆಗಿದ್ದಾನೆ. ಹೀಗೆ ಮಹಲಿಂಗರಂಗ ಅಗ್ನಿಯ ಸಾಮತಿಯನ್ನು ತೆಗೆದುಕೊಂಡು ‘ಪ್ರತಿಬಿಂಬವಾದ’ದ ಹಿನ್ನೆಲೆಯಲ್ಲಿ ವಿವರಿಸುತ್ತಿದ್ದಾನೆ. ಅವನ ಮುಂದಿನ ಕೆಲವು ಪದ್ಯಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಈ ವಿಚಾರಗಳನ್ನು ವಿವರಿಸಬಹುದು.

(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು)