ರಾಣೆಬೆನ್ನೂರ: ನೇಕಾರ ಸಮಾಜದ ಡಾ. ಬಸವರಾಜ ಕೇಲಗಾರ ಅವರಿಗೆ ಬಿಜೆಪಿ ಟಿಕೆಟ್ ಕೈ ತಪ್ಪಿರುವ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಹಾಗೂ ನೇಕಾರ ಸಮಾಜದವರು ನಗರದ ಬಿಜೆಪಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ಅರುಣಕುಮಾರ ಪೂಜಾರ ಕಳೆದ ಬಾರಿ ಚುನಾವಣೆಯಲ್ಲಿ ಪಕ್ಷಕ್ಕಾಗಿ ಶ್ರಮಿಸಲಿಲ್ಲ. ಅಂಥವರಿಗೆ ಈ ಬಾರಿ ಟಿಕೆಟ್ ನೀಡಿರುವುದು ಖಂಡನೀಯ. ಕೆಲ ಮುಖಂಡರ ಒಳಸಂಚಿನಿಂದ ಕೇಲಗಾರಗೆ ಟಿಕೆಟ್ ತಪ್ಪಿದೆ ಎಂದು ಆರೋಪಿಸಿ ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಕೇಲಗಾರ 2018ರ ಚುನಾವಣೆಯಲ್ಲಿ 48 ಸಾವಿರ ಮತಗಳನ್ನು ಪಡೆದಿದ್ದಾರೆ. ಈ ಬಾರಿ ಅವರಿಗೆ ಟಿಕೆಟ್ ನೀಡಿದ್ದರೆ ಪಕ್ಷಕ್ಕೆ ಗೆಲುವು ಸಾಧ್ಯವಾಗುತ್ತಿತ್ತು. ಆದರೆ, ಕೆಲ ಕಾಣದ ಕೈಗಳು ಪಕ್ಷ ಸೋಲಿಸುವ ಉದ್ದೇಶದಿಂದ ಟಿಕೆಟ್ ತಪ್ಪಿಸಿದ್ದಾರೆ. ಹೈಕಮಾಂಡ್ ಈ ಕುರಿತು ಪರಿಶೀಲಿಸಿ ಕೇಲಗಾರ ಅವರಿಗೆ ಟಿಕೆಟ್ ಕೊಡಬೇಕು ಎಂದು ಆಗ್ರಹಿಸಿದರು.
ಸಮಾಜದ ಪ್ರಮುಖರಾದ ಶಿವಾನಂದ ಬಗಾದಿ, ಕರಬಸಪ್ಪ ನೀಲಗುಂದ, ಬಸವರಾಜ ಮೈಲಾರ, ವಾಸಪ್ಪ ಹೆದ್ದೇರಿ, ಪ್ರವೀಣ ಕೋಪರ್ಡೆ, ಪ್ರಕಾಶ ಚಿನ್ನಿಕಟ್ಟಿ, ಶಂಕರಣ್ಣ ನ್ಯಾಮತಿ ಮತ್ತಿತರರು ಪಾಲ್ಗೊಂಡಿದ್ದರು.
ಪಕ್ಷ ಗೆಲ್ಲಿಸುವ ಕಾರ್ಯ ಮಾಡೋಣ: ನೇಕಾರ ಸಮಾಜದ ಪ್ರತಿಭಟನೆ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷ ಭಾನುಪ್ರಕಾಶ, ಹರಿಹರದ ಮಾಜಿ ಶಾಸಕ ಬಿ.ಪಿ. ಹರೀಶ, ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನರ, ಅಭ್ಯರ್ಥಿ ಅರುಣಕುಮಾರ ಪೂಜಾರ ಸ್ಥಳೀಯ ಮುಖಂಡರೊಂದಿಗೆ ಸಂಧಾನ ಸಭೆ ನಡೆಸಿದರು.
ಶಿವರಾಜ ಸಜ್ಜನರ ಮಾತನಾಡಿ, ಹಿಂದಿನ ಚುನಾವಣೆಯಲ್ಲೇ ಕೇಲಗಾರ ಗೆಲ್ಲಬೇಕಾಗಿತ್ತು. ಆದರೆ, ಕೆಲ ಮುಖಂಡರ ಒಳಸಂಚಿನಿಂದ ಸೋತರು. ಸ್ಥಳೀಯ ನೇಕಾರ ಸಮಾಜದವರ ಒತ್ತಾಯ ಕುರಿತು ಹೈಕಮಾಂಡ್ನವರ ಗಮನಕ್ಕೆ ತರುತ್ತೇನೆ. ಸದ್ಯ ಪಕ್ಷ ಒಬ್ಬರಿಗೆ ಟಿಕೆಟ್ ನೀಡಿದೆ. ಎಲ್ಲರೂ ಒಗ್ಗೂಡಿಕೊಂಡು ಪಕ್ಷ ಗೆಲ್ಲಿಸುವ ಕಾರ್ಯ ಮಾಡೋಣ ಎಂದು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು.
ಪ್ರಮುಖರಾದ ಚೋಳಪ್ಪ ಕಸವಾಳ, ಎಸ್.ಎಸ್. ರಾಮಲಿಂಗಣ್ಣವರ, ಮಂಜುನಾಥ ಓಲೇಕಾರ ಮತ್ತಿತರರು ಉಪಸ್ಥಿತರಿದ್ದರು.
ನಮ್ಮ ಅಭ್ಯರ್ಥಿ ಅರುಣಕುಮಾರ ಪೂಜಾರ ಎಂದು ಘೊಷಣೆಯಾದ ಬಳಿಕ ಇಲ್ಲಸಲ್ಲದ ಕೇಸ್ಗಳು ಬರುತ್ತಿವೆ. ರಾಜಕೀಯದಲ್ಲಿ ಕೇಸು, ಕೋರ್ಟ್ ಇರೋದೆ. ಇದಕ್ಕೂ ಚುನಾವಣೆಗೂ ಯಾವುದೇ ಪರಿಣಾಮ ಬೀರಲ್ಲ. ಅದಕ್ಕೆಲ್ಲ ನಾವು ತಲೆ ಕೆಡಿಸಿಕೊಳ್ಳುವ ಅಗತ್ಯವೂ ಇಲ್ಲ. ಚುನಾವಣೆ ಎದುರಿಸುತ್ತೇವೆ. ಗೆದ್ದೇ ಗೆಲ್ಲುತ್ತೇವೆ.
| ಶಿವರಾಜ ಸಜ್ಜನರ, ಬಿಜೆಪಿ ಜಿಲ್ಲಾಧ್ಯಕ್ಷ