ಕೇರಳ ಸರ್ಕಾರದ ವಿರುದ್ಧ ಪ್ರತಿಭಟನೆ

ಧಾರವಾಡ: ಶಬರಿಮಲೆಯ ಶ್ರೀ ಅಯ್ಯಪ್ಪಸ್ವಾಮಿ ವಿಷಯದಲ್ಲಿ ಕೇರಳ ಸರ್ಕಾರದ ತಾರತಮ್ಯ ಖಂಡಿಸಿ ಬಿಜೆಪಿ ನೇತೃತ್ವದಲ್ಲಿ ಶ್ರೀ ಅಯ್ಯಪ್ಪ ಸೇವಾ ಸಮಾಜದ ವತಿಯಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಕೇರಳದ ಕಮ್ಯುನಿಸ್ಟ್ ಸರ್ಕಾರ ತನ್ನ ರಾಜ್ಯದ ಜನತೆಯ ಹಾಗೂ ಸಮಸ್ತ ದೇಶದ ಜನರಿಗೆ ಶ್ರೀ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಅವಮಾನ ಮಾಡುವ ರೀತಿಯಲ್ಲಿ ಕಾರ್ಯ ಪ್ರವೃತ್ತವಾಗಿದೆ. ಅಲ್ಲಿನ ಸರ್ಕಾರ ಜನರ ಧ್ವನಿಗೆ ಸ್ಪಂದಿಸದೇ ತನ್ನದೇಯಾದ ನಿಲುವು ಪ್ರದರ್ಶಿ ಸಿಸುತ್ತಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸುಪ್ರೀಂ ಕೋರ್ಟ್ 2018ರ ಸೆಪ್ಟೆಂಬರ್ 28ರಂದು ನೀಡಿದ ಆದೇಶಕ್ಕೆ ದೇಶವ್ಯಾಪಿ ತೀವ್ರ ವಿರೋಧ ವ್ಯಕ್ತವಾಗಿದೆ. ಆದರೂ ಸಹ ಕೇರಳ ಸರ್ಕಾರ ಮೊಂಡುತನ ಪ್ರದರ್ಶಿಸುತ್ತಿದೆ. ಕ್ಷೇತ್ರದಲ್ಲಿ ಶಾಂತಿ ಕಾಪಾಡುವಲ್ಲಿ ವಿಫಲವಾದ ಕೇರಳ ಸರ್ಕಾರ ಅಯ್ಯಪ್ಪ ಭಕ್ತರ ಮೇಲೆ ಲಾಠಿ ಬೀಸುವ ಮೂಲಕ ಅವಮಾನಿಸುತ್ತಿದೆ. ಕಾನೂನು ಗಾಳಿಗೆ ತೂರಿ ಹಿಟ್ಲರ್ ದರ್ಬಾರ್ ಮಾಡುತ್ತಿರುವ ಸರ್ಕಾರ, ಮೊಂಡುತನ ಪ್ರದರ್ಶಿಸುತ್ತಿರುವುದು ಸರಿಯಲ್ಲ. ರಾಷ್ಟ್ರಪತಿ ಮಧ್ಯಪ್ರವೇಶಿಸಿ ಪ್ರಜಾಪ್ರಭುತ್ವಕ್ಕೆ ಮಾರಕವಾದ ಕೋರ್ಟ್ ಆದೇಶವನ್ನು ಮರುಪರಿಶೀಲಿಸಿ ಭಕ್ತರನ್ನು ಕಾಪಾಡಬೇಕು ಎಂದು ಜಿಲ್ಲಾಡಳಿತಕ್ಕೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದರು.

ಶಾಸಕ ಅಮೃತ ದೇಸಾಯಿ, ಮಾಜಿ ಶಾಸಕಿ ಸೀಮಾ ಮಸೂತಿ, ಮುಖಂಡರಾದ ನಾಗೇಶ ಕಲಬುರ್ಗಿ, ಈರಣ್ಣ ಜಡಿ, ಎಂ.ಆರ್. ಪಾಟೀಲ, ವಿಜಯಾನಮದ ಶೆಟ್ಟಿ, ಪ್ರಕಾಶ ಗೋಡಬೊಲೆ, ಈರಣ್ಣ ಹಪ್ಪಳಿ, ಮೋಹನ ರಾಮದುರ್ಗ, ಸಂಗನಗೌಡ ರಾಮನಗೌಡರ, ಅರವಿಂದ ಏಗನಗೌಡರ, ಗುರುಸ್ವಾಮಿ, ಕಲ್ಮೇಶ ಬೆಳವಲ, ಬಿ.ಎನ್. ಪಟ್ಟಣಶೆಟ್ಟಿ, ಸುನೀಲ ಗುಡಿ, ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.