ಕೇಂದ್ರ ಸ್ಥಾನದಲ್ಲಿದ್ದು ಬರ ಸಮಸ್ಯೆ ನಿರ್ವಹಿಸಿ

ಗದಗ: ಗದಗ ಜಿಲ್ಲೆಯು ತೀವ್ರ ಬರಗಾಲ ಎದುರಿಸುತ್ತಿದ್ದು ಜಿಲ್ಲೆ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಕೇಂದ್ರಸ್ಥಾನದಲ್ಲಿದ್ದು ಸಾರ್ವಜನಿಕರಿಗೆ ಕುಡಿಯುವ ನೀರು, ಉದ್ಯೋಗ, ಜಾನುವಾರುಗಳಿಗೆ ಮೇವು, ನೀರು ಹಾಗೂ ರೋಗಗಳ ಕುರಿತು ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ಜರುಗಿದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲೆಯ ಬರ ನಿರ್ವಹಣೆ ಪರಿಶೀಲಿಸಿ ಮಾತನಾಡಿದ ಅವರು, ಗ್ರಾಮ ಮಟ್ಟದಲ್ಲಿ ಪಿಡಿಒಗಳು ಕೇಂದ್ರಸ್ಥಾನದಲ್ಲಿದ್ದು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆಯಡಿ ಉದ್ಯೋಗ ಸಿಗುತ್ತಿರುವ ಕುರಿತು ಹೆಚ್ಚಿನ ಮಾಹಿತಿ ಪ್ರಚಾರ ನೀಡಬೇಕು ಎಂದು ಹೇಳಿದರು.

ಶಾಸಕ ಎಚ್.ಕೆ. ಪಾಟೀಲ ಮಾತನಾಡಿ, ಗದಗ ತಾಲೂಕಿನಲ್ಲಿ ಸಮೀಕ್ಷೆ ಮಾಡಿರುವಂತೆ ಜಿಲ್ಲೆಯ ಇತರೆ ತಾಲೂಕುಗಳಲ್ಲಿ ಇರುವ ಹಳ್ಳಗಳು, ನೀರಿನ ಸರವುಗಳ ಅನುಗುಣವಾಗಿ ಈಗಾಗಲೇ ಇರುವ ಚೆಕ್ ಡ್ಯಾಂಗಳ ಸ್ಥಿತಿಗತಿ ಹಾಗೂ ಹೊಸದಾಗಿ ಚೆಕ್ ಡ್ಯಾಂ ನಿರ್ವಣದ ಕುರಿತು ವರದಿ ತಯಾರಿಸಿ ಜಿಲ್ಲಾ ಪಂಚಾಯಿತಿಗೆ ಸಲ್ಲಿಸಲು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿಪಂ ಸಿಇಒ ಮಂಜುನಾಥ ಚವ್ಹಾಣ ಮಾತನಾಡಿದರು. ಶಾಸಕ ರಾಮಣ್ಣ ಲಮಾಣಿ, ಜಿಪಂ ಅಧ್ಯಕ್ಷ ಎಸ್.ಪಿ. ಬಳಿಗಾರ, ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ ಇತರರಿದ್ದರು.

ಮೇವು ಬ್ಯಾಂಕ್, ಗೋಶಾಲೆ ತೆರೆಯಲು ಸೂಚನೆ: ಬರಗಾಲ ಹಿನ್ನೆಲೆಯಲ್ಲಿ ಅವಶ್ಯವಿದ್ದ ಸ್ಥಳಗಳಲ್ಲಿ ಮೇವು ಬ್ಯಾಂಕ್ ಹಾಗೂ ಗೋಶಾಲೆ ತೆರೆಯಲು ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಈಗಾಗಲೇ ಟೆಂಡರ್ ಕೂಡ ಕರೆಯಲಾಗಿದೆ. ಅಲ್ಲದೇ, ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಮೇವು ಬ್ಯಾಂಕ್ ಸ್ಥಾಪನೆಯಿಂದ ಗ್ರಾಮೀಣ ಭಾಗದ ರೈತರಿಗೆ ತೊಂದರೆಯಾಗುತ್ತದೆ ಎಂಬ ಉದ್ದೇಶದಿಂದ ಪಂಚಾಯಿತಿ ಮಟ್ಟದಲ್ಲಿ ಮೇವು ವಿತರಣೆಗೆ ಮುಂದಾಗಲು ತಿಳಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯಕ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಲ್ಲೆಯ ಡೋಣಿ, ಡಂಬಳ ಗ್ರಾಮದ ಸುತ್ತಲಿನ ಪ್ರದೇಶಗಳಲ್ಲಿ ಹಲವಾರು ವರ್ಷಗಳಿಂದ ಬಗರಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸಲು ಅಧಿಕಾರಿಗಳು ಲಂಚ ಕೇಳಕೂಡದು. ಈ ಕುರಿತು ಫಲಾನುಭವಿಗಳು ಲಿಖಿತ ದೂರು ಸಲ್ಲಿಸಿದರೆ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಬೇಜವಾಬ್ದಾರಿ ಸಭೆ; ಶಾಸಕ ರಾಮಣ್ಣ ಲಮಾಣಿ ಕಿಡಿ

ಗದಗ: ಬರಗಾಲ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯಕ ಅವರು ಸಮರ್ಪಕವಾಗಿ ನಿರ್ಣಯ ಕೈಗೊಳ್ಳದೇ, ಬೇಜವಾಬ್ದಾರಿಯಿಂದ ಸಭೆ ನಡೆಸಿದ್ದಾರೆ ಎಂದು ಶಾಸಕ ರಾಮಣ್ಣ ಲಮಾಣಿ ಆರೋಪಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರ ನಿರ್ವಹಣೆ ಕುರಿತು ಜರುಗಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಸೂಚಿಸಬೇಕಿತ್ತು. ಜತೆಗೆ ವಿವಿಧ ಇಲಾಖೆಗಳಿಗೆ ಹಣ ಬಿಡುಗಡೆಗೊಳಿಸಬೇಕಿತ್ತು. ಅಲ್ಲದೇ, ಬರ ನಿರ್ವಹಣೆ ಕುರಿತು ಅಧಿಕಾರಿಗಳಿಗೂ ಯಾವುದೇ ಭರವಸೆ ನೀಡಿಲ್ಲ ಎಂದು ಹೇಳಿದರು. ಜಿಲ್ಲೆಯಲ್ಲಿ ಕಳೆದ 9 ತಿಂಗಳಿನಿಂದ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡದೇ ಇರುವ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸಿ ಕಣ್ಣೊರೆಸುವ ತಂತ್ರ ಅನುಸರಿಸುತ್ತಿದೆ. ಲೋಕಸಭೆ ಚುನಾವಣೆ ನಂತರ ಸಮ್ಮಿಶ್ರ ಸರ್ಕಾರದ ಭವಿಷ್ಯ ತಿಳಿಯುತ್ತದೆ ಎಂದು ವ್ಯಂಗ್ಯವಾಡಿದರು.