ಕೇಂದ್ರ, ರಾಜ್ಯ ಸರ್ಕಾರದ ಗಮನ ಸೆಳೆಯಲು ನಿರ್ಧಾರ

ಶ್ರೀಮಂಗಲ: ಕೊಡಗಿನ ರೈತರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಮುಂದಿನ ದಿನಗಳಲ್ಲಿ ರಾಜ್ಯ ರೈತ ಸಂಘದ ವಿವಿಧ ಜಿಲ್ಲೆಯ ರೈತರ ಬೆಂಬಲದೊಂದಿಗೆ ರಾಜ್ಯ, ಕೇಂದ್ರ ಸರ್ಕಾರದ ಗಮನ ಸೆಳೆಯಲು ನಿರ್ಧರಿಸಲಾಗಿದೆ ಎಂದು ಕೊಡಗು ಜಿಲ್ಲಾ ರೈತ ಸಂಘದ(ಪ್ರೊ. ಎಂ.ಡಿ.ನಂಜುಂಡಸ್ವಾಮಿ ಬಣ) ಅಧ್ಯಕ್ಷ ಚಿಮ್ಮಂಗಡ ಗಣೇಶ್ ಗಣಪತಿ ಹೇಳಿದರು.

ರೈತ ಹುತಾತ್ಮ ದಿನಾಚರಣೆ ಹಿನ್ನೆಲೆ ಜಿಲ್ಲೆಯ ರೈತ ಸಂಘದ ಸದಸ್ಯರೊಂದಿಗೆ ಸಭೆ ನಡೆಸಿ ಮಾತನಾಡಿದರು. ರೈತರು ತಮ್ಮ ಸಮಸ್ಯೆಗಳನ್ನು ಬಗ್ಗೆ ಹರಿಸಿಕೊಳ್ಳಲು, ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಲು ರಾಜ್ಯದ ಎಲ್ಲಾ ಜಿಲ್ಲೆಯ ರೈತ ಸಂಘಟನೆಗಳು ಒಗ್ಗಟ್ಟಾಗಿ ಹೋರಾಟ ನಡೆಸಬೇಕಾಗಿದೆ. ಈ ನಿಟ್ಟಿನಲ್ಲಿ ಹಾವೇರಿಗೆ ಜಿಲ್ಲೆಯ ರೈತರು ತೆರಳಿ ಅಲ್ಲಿನ ಹೋರಾಟಕ್ಕೆ ಬೆಂಬಲ ನೀಡಲಾಯಿತು. ಮುಂದಿನ ದಿನಗಳಲ್ಲಿ ಬೇರೆ ಜಿಲ್ಲೆಯ ರೈತ ಸಂಘಟನೆ ಮುಖಾಂಡರು ಜಿಲ್ಲೆಯ ರೈತರ ಸಮಸ್ಯೆಗಳಿಗೆ ಬೆಂಬಲ ನೀಡುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಯೋಜನೆ ರೂಪಿಸಬೇಕು, ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು, ಅತಿವೃಷ್ಟಿ ಅನಾವೃಷ್ಟಿಗೆ ಸೂಕ್ತ ಪರಿಹಾರ ನೀಡಬೇಕು, 2018ರ ಮಹಾಮಳೆ, ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಬೆಳೆ ನಷ್ಟ, ಆಸ್ತಿ ಪಾಸ್ತಿ ಕಳೆದು ಕೊಂಡವರಿಗೆ ಇದುವರೆಗೆ ಸೂಕ್ತ ನೆರವು ದೊರೆತಿಲ್ಲ. ಅವರಿಗೆ ವಿಶೇಷ ನೆರವು ನೀಡಬೇಕು. ರಾಜ್ಯ ಸರ್ಕಾರದ ಸಾಲಮನ್ನಾ ಯೋಜನೆ ಎಲ್ಲ ರೈತರಿಗೆ ತಲುಪಿಲ್ಲ, ಅದನ್ನು ಎಲ್ಲರಿಗೂ ದೊರೆಯುವಂತೆ ಮಾಡಬೇಕು. ಡಾ. ಸ್ವಾಮಿನಾಥನ್ ಅಯೋಗದ ವರದಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲೆಯ ರೈತರ ಪರ ಒತ್ತಾಯಿಸಲಾಗಿದೆ ಎಂದು ಹೇಳಿದರು.

ಜಿಲ್ಲೆಯ ರೈತ ಸಂಘದ ಪ್ರಮುಖರಾದ ಚಂಗುಲಂಡ ರಾಜಪ್ಪ, ಮಚ್ಚಮಾಡ ರಂಜಿ, ಬಾದುಮಂಡ ಮಹೇಶ್, ಚೆಪ್ಪುಡೀರ ಮಹೇಶ್, ಬೊಜ್ಜಂಗಡ ಸುಬ್ರಮಣಿ, ಪೊಯ್ಯಿಲೇಂಗಡ ಗೋಪಾಲ್, ಬಾಚಂಗಡ ಮುದ್ದಪ್ಪ, ಚೊಟ್ಟೆಯಾಂಡಮಾಡ ಮಂಜುದೇವಯ್ಯ, ದೇಕಮಾಡ ವಿನು ರೈತ ಮಹಿಳೆರಾದ ಕರಿನೆರವಂಡ ದೀಪ, ಕಳ್ಳಿಚಂಡ ರೇಖಾ ಮತ್ತಿತರರಿದ್ದರು.

Leave a Reply

Your email address will not be published. Required fields are marked *