ಕೇಂದ್ರ ಬರ ಅಧ್ಯಯನ ತಂಡದ ಭೇಟಿ ‘ಶಾಸ್ತ್ರ’

ತುಮಕೂರು: ತುಮಕೂರು, ಕೊರಟಗೆರೆ, ಮಧುಗಿರಿ, ಪಾವಗಡ ತಾಲೂಕುಗಳ ಕೆಲ ಪ್ರದೇಶಗಳಿಗೆ ಭಾನುವಾರ ಆಗಮಿಸಿದ ಕೇಂದ್ರ ಬರ ಅಧ್ಯಯನ ತಂಡ ಭೇಟಿ ‘ಶಾಸ್ತ್ರ ’ ಪೂರೈಸಿದೆ.

ಕೇಂದ್ರ ನೀತಿ ಆಯೋಗದ ಜಂಟಿ ಸಲಹೆಗಾರ ಮಾನಸ್ ಚೌಧರಿ ನೇತೃತ್ವದ ತಂಡ ಜಿಲ್ಲೆಯ ಗಡಿಭಾಗದ ಕೊರಟಗೆರೆ ತಾಲೂಕು ರಾಯವಾರ ಗ್ರಾಮದಿಂದ ಪ್ರವಾಸ ಆರಂಭಿಸಿ ಪಾವಗಡದ ಮೂಲಕ ಚಿತ್ರದುರ್ಗ ಜಿಲ್ಲೆಗೆ ತೆರಳಿತು.

ರಾಯವಾರ ಗ್ರಾಮದ ಗೇಟ್​ನಲ್ಲಿರುವ ರೈತ ರಾಮಚಂದ್ರ ಹಾಗೂ ಮಂಜುನಾಥ್ ಜಮೀನಿನಲ್ಲಿ ಒಣಗಿದ್ದ ರಾಗಿ, ಮೆಕ್ಕೆ ಜೋಳ ಹಾಗೂ ಕಡಲೆಕಾಯಿ ಬೆಳೆ ಪರಿಶೀಲಿಸಿತು.

ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆ ಬೆಳೆದರೂ ಕೈಗೆ ಬರಲಿಲ್ಲ. ಮಳೆ ಇಲ್ಲ. ಆರು ಎಕರೆ ಜಮೀನಿನಲ್ಲಿ ಬೆಳೆ ಬೆಳೆದರೂ ಬದುಕು ಕಷ್ಟವಾಗಿದ್ದು, ನಗರಕ್ಕೆ ವಲಸೆ ಹೋದರಷ್ಟೇ ಬದುಕು ಎಂದು ರೈತ ಮಂಜಣ್ಣ ಕಣ್ಣೀರು ಹಾಕಿದರು.

ಮಾಧ್ಯಮ ಹೊರಗಿಟ್ಟು ಮಾಹಿತಿ ನೀಡಿದ ಡಿಸಿ: ಕೇಂದ್ರ ತಂಡಕ್ಕೆ ಮಧುಗಿರಿ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್​ಕುಮಾರ್ ಪವರ್ ಪಾಯಿಂಟ್ ಪ್ರೆಸಂಟೇಷನ್ ಮೂಲಕ ಬರದ ಚಿತ್ರಣ ಬಿಡಿಸಿಟ್ಟರು. ಈ ವೇಳೆ ಬಾಗಿಲಿನಲ್ಲಿ ಪೊಲೀಸರನ್ನು ನಿಲ್ಲಿಸಿ ಮಾಧ್ಯಮದವರನ್ನು ಹೊರಗಿಡಲು ಸೂಚಿಸಿದ್ದರು.

ಸಚಿವರು ಗೈರು!: ಕೃಷಿ, ತೋಟಗಾರಿಕೆ ಹಾಗೂ ಕುಡಿಯುವ ನೀರಿನ ಸಮಸ್ಯೆ ತಿಳಿಯಲು ಭೇಟಿ ನೀಡಿದ ತಂಡಕ್ಕೆ ಜಿಲ್ಲೆಗೆ ಅಗತ್ಯವಾಗಿರುವ ಪರಿಹಾರದ ಬಗ್ಗೆ ಮನವರಿಕೆ ಮಾಡಿಕೊಡಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್, ಎಸ್.ಆರ್.ಶ್ರೀನಿವಾಸ್, ವೆಂಕಟರವಣಪ್ಪ ಗೈರಾಗಿದ್ದರು.

ಮಾದರಿ ಮೈಲಾರಪ್ಪ: ಕೊರಟಗೆರೆ ತಾಲೂಕು ರಾಯವಾರ ಗ್ರಾಮದ ಮೈಲಾರಪ್ಪ ಜಮೀನು ನೋಡಿ ಕೇಂದ್ರ ತಂಡ ಖುಷಿಪಟ್ಟಿತ್ತು. ಹೊಲದಲ್ಲಿ ಮೇವು ಬೆಳೆದುಕೊಂಡು, ರೈಷ್ಮೆಬೆಳೆ ಹಾಗೂ ಕುರಿ ಸಾಕಿ ಸ್ವಾವಲಂಬಿಯಾಗಿರುವ ಮೈಲಾರಪ್ಪ, ರೈತರಿಗೆ ಆದರ್ಶ. ಅವರಿಗೆ ಜಿಲ್ಲಾಡಳಿತ ಎಲ್ಲ ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.

ಕೇಂದ್ರದಿಂದ ಬಂದಿದ್ದ ನಾಲ್ವರು ಸದಸ್ಯರ ತಂಡ ಉರಿ ಬಿಸಿಲಿನಲ್ಲಿಯೂ ಕಾರಿನಿಂದ ಕೆಳಗಿಳಿದು ಬಂದು ಬರ ಹಾಗೂ ನಿರ್ವಹಣೆಗೆ ಸರ್ಕಾರದ ಕಾರ್ಯಕ್ರಮದ ಬಗ್ಗೆ ಜನರಿಂದ ತಿಳಿದುಕೊಂಡರು. ಆದರೆ, ನಮ್ಮ ಬಹುತೇಕ ಜಿಲ್ಲಾಮಟ್ಟದ ಅಧಿಕಾರಿಗಳು ಕಾರು ಬಿಟ್ಟು ಕೆಳಗಿಳಿಯಲಿಲ್ಲ.

ಜಿಪಂ ಸಿಇಒ ಅನ್ನಿಸ್ ಕೆ.ಜಾಯ್, ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ, ಕೃಷಿ ಇಲಾಖೆ ಜೆಡಿ ಜಯಸ್ವಾಮಿ ಮತ್ತಿತರರು ಕೇಂದ್ರ ತಂಡಕ್ಕೆ ಸಾಥ್ ನೀಡಿದರು.

123 ಕೋಟಿ ಕೃಷಿ ಹಾಗೂ 46 ಕೋಟಿ ತೋಟಗಾರಿಕೆ ಬೆಳೆ ನಷ್ಟದ ಜತೆಗೆ ಕುಡಿಯುವ ನೀರಿನ ಕೊರತೆ, ಅಂತರ್ಜಲ ಕುಸಿತ, ಮೇವಿನ ಕೊರತೆ, ಮಳೆ ಅಭಾವದಿಂದ ತೆಂಗು, ಅಡಕೆ ನೆಲಕಚ್ಚಿರುವುದು, ಕಡಿಮೆ ಇಳುವರಿ ಮಾಹಿತಿ ಒದಗಿಸಲಾಗಿದೆ. ತಂಡ ರೈತರೊಂದಿಗೆ ಹೆಚ್ಚು ಮಾತನಾಡಿ ವಾಸ್ತವಾಂಶ ತಿಳಿದಿದ್ದು ಸಕಾರಾತ್ಮಕವಾಗಿದೆ.

| ಡಾ.ಕೆ.ರಾಕೇಶ್​ಕುಮಾರ್ ಜಿಲ್ಲಾಧಿಕಾರಿ

ಜಿಲ್ಲಾಡಳಿತ ಒದಗಿಸಿರುವ ಮಾಹಿತಿ, ಬರ ಪ್ರದೇಶಗಳ ಅಧ್ಯಯನದ ಬಳಿಕ ತಕ್ಷಣವೇ ಕೇಂದ್ರ ಕೃಷಿ ಸಚಿವಾಲಯ ಉನ್ನತ ಸಮಿತಿಗೆ ವಿಳಂಬ ಮಾಡದೆ ವರದಿ ಸಲ್ಲಿಸುತ್ತೇವೆ. ಕೇಂದ್ರ ಸರ್ಕಾರ ಪ್ರಸ್ತುತ ಇರುವ ಮಾರ್ಗಸೂಚಿಯಂತೆ ಪರಿಹಾರ ನೀಡಲಿದೆ.

| ಮಾನಸ್ ಚೌಧರಿ, ಕೇಂದ್ರ ಬರ ಅಧ್ಯಯನ ತಂಡದ ಮುಖ್ಯಸ್ಥ