ಕೇಂದ್ರ ಪಠ್ಯಕ್ರಮದ ಶಾಲೇಲಿ ಕನ್ನಡ ಕಡ್ಡಾಯ

ಬೆಂಗಳೂರು: ಸಿಬಿಎಸ್​ಇ ಮತ್ತು ಸಿಐಎಸ್​ಸಿಇ ಶಾಲೆಗಳು ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಬೋಧಿಸದ ಹಿನ್ನೆಲೆಯಲ್ಲಿ ಈ ಶಾಲೆಗಳ ಮಂಡಳಿಗೆ ಪತ್ರ ಬರೆಯಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಕನ್ನಡ ಭಾಷಾ ಕಲಿಕಾ ನಿಯಮ-2017ರ ಪ್ರಕಾರ ಕೇಂದ್ರ ಪಠ್ಯಕ್ರಮ ಶಾಲೆಗಳು ಸೇರಿ ಎಲ್ಲ ಮಾದರಿಯ ಶಾಲೆಗಳು ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಬೋಧಿಸುವುದು ಕಡ್ಡಾಯ.

ಆದರೆ, ರಾಜ್ಯದಲ್ಲಿರುವ 23,678 ಪ್ರಾಥಮಿಕ ಶಾಲೆಗಳ ಪೈಕಿ 17,589 ಶಾಲೆಗಳು ಕನ್ನಡವನ್ನು ಪ್ರಥಮ ಮತ್ತು 5,946 ಶಾಲೆಗಳು ದ್ವಿತೀಯ ಭಾಷೆಯಾಗಿ ಬೋಧಿಸುತ್ತಿವೆ. ಅಂದಾಜು 143 ಶಾಲೆಗಳು ನಿಯಮ ಉಲ್ಲಂಘಿಸಿವೆ. ಅಂಥ ಶಾಲೆಗಳಿಗೆ ನೋಟಿಸ್ ನೀಡಿ, ದಂಡ ವಿಧಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಶಿಕ್ಷಣ ಇಲಾಖೆ ಸಿಬಿಎಸ್​ಇ ಮತ್ತು ಸಿಐಎಸ್​ಸಿಇ ಮಂಡಳಿಗೆ ಪತ್ರ ಬರೆಯಲು ತೀರ್ವನಿಸಿದೆ.

ಇತ್ತೀಚಿಗೆ ಶಿಕ್ಷಣ ಇಲಾಖೆ, ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಜತೆಗೆ ನಡೆಸಿದ ಸಭೆಯಲ್ಲಿ ರ್ಚಚಿಸಿ ಪತ್ರ ಬರೆಯಲು ನಿರ್ಧರಿಸಿದೆೆ. ಸಿಬಿಎಸ್​ಇ, ಸಿಐಎಸ್​ಸಿಇ ಶಾಲೆಗಳಲ್ಲಿ ಆಂಗ್ಲ ಅಥವಾ ಹಿಂದಿಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಬೋಧಿಸಬೇಕಿದೆ ಎನ್ನುವ ಮೂಲಕ ಕನ್ನಡ ಬೋಧಿಸುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಇದು ಇದೇ ರೀತಿ ಮುಂದುವರಿದಲ್ಲಿ ಶಾಲೆ ಆರಂಭಿಸಲು ನೀಡಿರುವ ನಿರಪೇಕ್ಷಣಾ ಪತ್ರ(ಎನ್​ಒಸಿ) ಮುಂದಿನ ವರ್ಷದಿಂದ ಹಿಂಪಡೆಯಲಾಗುತ್ತದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಕೆಲ ಪಾಲಕರು ತಮ್ಮ ಮಕ್ಕಳು ದ್ವಿತೀಯ ಭಾಷೆಯಾಗಿ ಕನ್ನಡ ಕಲಿಯಲಿ ಎಂದರೆ, ಮತ್ತೆ ಕೆಲವರು ಹಿಂದಿ ಕಲಿಯಲಿ ಎನ್ನುತ್ತಿದ್ದಾರೆ.