ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಕೋಲಾರ: ಪೆಟ್ರೋಲ್, ಡೀಸೆಲ್ ಮೇಲೆ ಸೆಸ್ ಹೆಚ್ಚಿಸಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಹಾಗೂ ರಾಜ್ಯ ಮೈತ್ರಿ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ನಗರದ ಕಾಲೇಜು ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು.

ಬಿಜೆಪಿಯವರು ಮೈತ್ರಿ ಶಾಸಕರನ್ನು ಬ್ಲಾ್ಯಕ್ ಮೇಲ್ ಮಾಡಿ, ಅಪಹರಿಸಿಕೊಂಡು ಹೋಗಿದ್ದಾರೆ. ಮಹಾರಾಷ್ಟ್ರ ಸರ್ಕಾರ ಕಾನೂನಿನ ವಿರುದ್ಧವಾಗಿ ಸ್ಥಳೀಯ ಪೊಲೀಸರನ್ನು ಬಳಸಿಕೊಂಡು ರಾಜ್ಯ ಸಚಿವರನ್ನು ಭೇಟಿ ಮಾಡದಂತೆ ತಡೆಯೊಡ್ಡಿದ್ದಲ್ಲದೆ ಬಂಧಿಸಿ, ವಾಪಸ್ ಕಳುಹಿಸಿರುವುದು ಅಧಿಕಾರ ದುರ್ಬಳಕೆಯ ಪರಮಾವಧಿ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಟೀಕಿಸಿದರು.

ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸಿಬಿಐ ಮತ್ತು ಇಡಿ ಬಳಸಿಕೊಂಡು ದೇಶಾದ್ಯಂತ ಪ್ರತಿಪಕ್ಷದ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲು ಮಾಡಲು ಮುಂದಾಗಿರುವ ಕ್ರಮವನ್ನು ಬಿಜೆಪಿ ಕೈ ಬಿಡಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ನಡೆಸಬೇಕಾದಿತು ಎಂದು ಎಚ್ಚರಿಸಿದರು.

ಕೇಂದ್ರ ಬಜೆಟ್​ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ 1 ರೂ. ಹೆಚ್ಚಳದಿಂದ ತೈಲ ಬೆಲೆಯಲ್ಲಿ 2 ರೂ. ಮೇಲ್ಪಟ್ಟು ಹೆಚ್ಚಳವಾಗಿದೆ. ಇದು ಜನರಿಗೆ ಹೊರೆಯಾಗಿದ್ದು, ಈ ಕೂಡಲೇ ಸೆಸ್ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.

ಆಹಾರ ನಿಗಮದ ಮಾಜಿ ಉಪಾಧ್ಯಕ್ಷ ಶ್ರೀನಿವಾಸ್, ಹಿಂದುಳಿದ ವರ್ಗಗಳ ವಿಭಾಗದ ಪದಾಧಿಕಾರಿ ಎಸ್.ಮಂಜುನಾಥ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೆಂಕಟಪ್ಪತೆಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್​ಬಾಬು, ಯುವ ಕಾಂಗ್ರೆಸ್ ಅಧ್ಯಕ್ಷ ಜಾಕಬ್ , ಮುಖಂಡರಾದ ಪಾರ್ಥಸಾರಥಿ, ಬೆಳಗಾನಹಳ್ಳಿ ಮುನಿವೆಂಕಟಪ್ಪ, ಜಯದೇವ್, ಇಕ್ಬಾಲ್ ಅಹಮದ್, ರಾಜೇಶ್​ಸಿಂಗ್, ನಂಜಪ್ಪ, ಮಾಲೂರು ಅಶ್ವತ್ಥನಾರಾಯಣ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *