ಕೇಂದ್ರದಿಂದ ಹಿಂಗಾರು ಬರ ಅಧ್ಯಯನ

ಧಾರವಾಡ: ಹಿಂಗಾರು ಬೆಳೆ ನಷ್ಟ ಹಾಗೂ ಕುಡಿಯುವ ನೀರು, ದನಕರುಗಳಿಗೆ ಮೇವು, ನರೇಗಾ ಉದ್ಯೋಗ ಸೇರಿ ವಿವಿಧ ಸೌಲಭ್ಯಗಳ ಕುರಿತು ಕೇಂದ್ರ ತಂಡ ಬುಧವಾರ ಮಧ್ಯಾಹ್ನ ತಾಲೂಕಿನ ವಿವಿಧ ಗ್ರಾಮಗಳ ಜಮೀನುಗಳಿಗೆ ತೆರಳಿ ಬರ ಅಧ್ಯಯನ ನಡೆಸಿತು.

ಕೇಂದ್ರ ಸರ್ಕಾರದ ಜಲ ಸಂಪನ್ಮೂಲ ಮಂತ್ರಾಲಯದ ಹಿರಿಯ ಜಂಟಿ ಆಯುಕ್ತ ಎಸ್.ಕೆ. ಕಾಂಬೊಜಿ ನೇತೃತ್ವದಲ್ಲಿ ಕೇಂದ್ರ ಪಶು ಸಂಗೋಪನಾ ಮಂತ್ರಾಲಯದ ಹಿರಿಯ ಅಧಿಕಾರಿ ಡಾ. ತರುಣಕುಮಾರ್ ಸಿಂಗ್, ಭಾರತ ಆಹಾರ ನಿಗಮದ ಉಪ ಪ್ರಧಾನ ವ್ಯವಸ್ಥಾಪಕ ಹಾಗೂ ಆಹಾರ ಮತ್ತು ಸಾರ್ವಜನಿಕ ವಿತರಣಾ ಮಂತ್ರಾಲಯದ ಸತ್ಯಕುಮಾರ ಮತ್ತು ದೇವರಾಜ ತಂಡ, ರೈತರ ಜಮೀನುಗಳಿಗೆ ಭೇಟಿ ನೀಡಿ ಅವರೊಂದಿಗೆ ರ್ಚಚಿಸಿ, ಮಾಹಿತಿ ಪಡೆದುಕೊಂಡಿತು.

ಜಿಲ್ಲಾಧಿಕಾರಿ ದೀಪಾ ಚೋಳನ್ ಅವರಿಂದ ಜಿಲ್ಲೆಯ ಸ್ಥಿತಿಗತಿಯ ಮಾಹಿತಿ ಪಡೆದ ತಂಡ ಧಾರವಾಡ ತಾಲೂಕಿನ ಮನಸೂರ ಗ್ರಾಮದ ಕರೆವ್ವ ಕರೆಪ್ಪಗೌಡ ಪಾಟೀಲ ಮತ್ತು ಶಿವಾನಂದ ಸಿದ್ದಪ್ಪ ಕುರುಬರ ಅವರ ಜಮೀನಿಗೆ ಭೇಟಿ ನೀಡಿ, ಬೆಳೆ ಹಾನಿ ಪರಿಶೀಲಿಸಿತು. ಕಲಘಟಗಿ ಶಾಸಕ ಸಿ.ಎಂ. ನಿಂಬಣ್ಣವರ ಉಪಸ್ಥಿತರಿದ್ದು, ಬರ ಪರಿಸ್ಥಿತಿ ಕುರಿತು ವಿವರಿಸಿದರು.

ನಂತರ ಅಮ್ಮಿನಭಾವಿ ಗ್ರಾಮದ ಈರಪ್ಪ ಬಾಳಪ್ಪ ಧಾರವಾಡ ಅವರ ಜಮೀನಿಗೆ ಭೇಟಿ ನೀಡಿದ ತಂಡ, ಕುಸುಬಿ ಮತ್ತು ಕಡಲೆ ಮಿಶ್ರಬೆಳೆ, ಗೋಧಿ, ಜೋಳ, ಮೆಣಸಿನಕಾಯಿ ಹಾಗೂ ಈರುಳ್ಳಿ ಮಿಶ್ರ ಬೆಳೆಹಾನಿಯನ್ನು ಪರಿಶೀಲಿಸಿದರು. ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ, ತಾಲೂಕಿನ ಬರ ಪರಿಸ್ಥಿತಿಯನ್ನು ವಿವರಿಸಿದರು.

ಅಲ್ಲಿಂದ ಹಾರೋಬೆಳವಡಿ ಗ್ರಾಮದ ರೈತ ಬಸನಗೌಡ ಮಲ್ಲನಗೌಡ ಕೋಟೂರ ಅವರ ಜಮೀನಿಗೆ ಭೇಟಿ ನೀಡಿ, ನರೇಗಾ ಯೋಜನೆಯಡಿ ಬದುವು ನಿರ್ಮಾಣ ಕಾರ್ಯ ಹಾಗೂ ಜೋಳದ ಬೆಳೆ ಹಾನಿ ಬಗ್ಗೆ ರ್ಚಚಿಸಿ ಮಾಹಿತಿ ಪಡೆದುಕೊಂಡಿತು.

ತಂಡದ ನೇತೃತ್ವ ವಹಿಸಿದ್ದ ಹಿರಿಯ ಜಂಟಿ ಆಯುಕ್ತ ಎಸ್.ಕೆ. ಕಾಂಬೋಜಿ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲಾಡಳಿತ ಹಿಂಗಾರು ಬೆಳೆಹಾನಿ ಹಾಗೂ ಬರ ಪರಿಹಾರಗಳ ಕುರಿತು ವರದಿ ಸಲ್ಲಿಸಿದೆ. ಮಾರ್ಗಸೂಚಿಗಳ ಅನ್ವಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.

ಜಿಲ್ಲೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಬಿಸಿಲಿಗೆ ಬಸವಳಿದ ಅಧಿಕಾರಿ: ತಾಲೂಕಿನ 3 ಗ್ರಾಮಗಳಿಗೆ ಭೇಟಿ ನೀಡಿದ್ದ ಕೇಂದ್ರ ಬರ ಅಧ್ಯಯನ ತಂಡ ಬಿಸಿಲಿಗೆ ಬಸವಳಿಯಿತು. ಬಿಸಿಲು ತಾಳದೇ ಕೇಂದ್ರ ಪಶು ಸಂಗೋಪನೆ ಇಲಾಖೆಯ ಹಿರಿಯ ಅಧಿಕಾರಿ ಡಾ. ತರುಣಕುಮಾರ್ ಸಿಂಗ್, ತಲೆಗೆ ಟವೆಲ್ ಸುತ್ತಿಕೊಂಡು ಜಮೀನುಗಳಲ್ಲಿ ಬೆಳೆ ಹಾನಿ ಪರಿಶೀಲಿಸಿದರು.