ಕೇಂದ್ರದಿಂದ ಮಲತಾಯಿ ಧೋರಣೆ

ಮೈಸೂರು: ರಾಜ್ಯದ ವಿವಿಧ ಇಲಾಖೆಗಳಿಗೆ ಕೇಂದ್ರ ಸರ್ಕಾರ ನೀಡಬೇಕಾಗಿರುವ ತನ್ನ ಪಾಲನ್ನು ಸಮಯಕ್ಕೆ ಸರಿಯಾಗಿ ನೀಡುತ್ತಿಲ್ಲ. ಇದರಿಂದ ಜನರು ಸಂಕಷ್ಟಕ್ಕೆ ಈಡಾಗುತ್ತಿದ್ದಾರೆ. ಇದನ್ನು ಅರ್ಥ ಮಾಡಿಕೊಂಡು ಕೇಂದ್ರ ತನ್ನ ಪಾಲನ್ನು ಸರಿಯಾಗಿ ನೀಡಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಒತ್ತಾಯಿಸಿದರು.


ಕುಡಿಯುವ ನೀರಿಗೆ ಸಂಬಂಧಿಸಿದಂತೆ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು, ಇದಕ್ಕೆ ಕೇಂದ್ರ ಸರ್ಕಾರ ಶೇ.75 ಮತ್ತು ರಾಜ್ಯ ಸರ್ಕಾರ ಶೇ.25 ವೆಚ್ಚ ಮಾಡಬೇಕಿದೆ. ಆದರೆ, ಕೇಂದ್ರ ಸರ್ಕಾರ ತನ್ನ ಪಾಲನ್ನು ಶೇ.60ಕ್ಕೆ ಇಳಿಕೆ ಮಾಡಿಕೊಳ್ಳುವ ಮೂಲಕ ರಾಜ್ಯ ಸರ್ಕಾರ ಕ್ಕೆ ಶೇ.40ರಷ್ಟನ್ನು ಹೊರೆ ಮಾಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಈ ಯೋಜನೆಗೆ ಪ್ರಸಕ್ತ ಸಾಲಿನಲ್ಲಿ ಒಟ್ಟು 2600 ಕೋಟಿ ರೂ.ವೆಚ್ಚ ಮಾಡಲಾಗುತ್ತಿದ್ದು, ಶೇ.60 ರಷ್ಟು ಅಂದರೆ ಕೇಂದ್ರ ಸರ್ಕಾರ 1460 ಕೋಟಿ ರೂ.ನೀಡಬೇಕಿದೆ. ಆದರೆ, ಕೇವಲ 312 ಕೋಟಿ ರೂ.ಮಾತ್ರ ನೀಡಿದ್ದು, ಉಳಿದ ಹಣವನ್ನು ಇಲ್ಲಿಯವರೆಗೂ ನೀಡಿಲ್ಲ. ಕೇಂದ್ರ ಸರ್ಕಾರ ಇದೇ ರೀತಿ ಎಲ್ಲ ಇಲಾಖೆಗೂ ಮಾಡುತ್ತಿದೆ. ಹಣಕಾಸು ಆಯೋಗದಿಂದ ಬರಬೇಕಾದ 95,000 ಕೋಟಿ ರೂಗಳಲ್ಲಿ, ಕೇವಲ 80,000 ಕೋಟಿ ರೂ.ಮಾತ್ರ ಬಿಡುಗಡೆಯಾಗಿದ್ದು, ಉಳಿದ ಹಣವನ್ನು ಬಿಡುಗಡೆ ಮಾಡಿಲ್ಲ. ಕೆಲಸ ಮಾಡಿದವರಿಗೆ ಸರಿಯಾಗಿ ಪೇಮೆಂಟ್ ಮಾಡದಿದ್ದರೆ ಕಾಮಗಾರಿಗಳು ಸ್ಥಗಿತಗೊಳ್ಳುತ್ತವೆ. ಇದರಿಂದ ಜನರು ಸಂಕಷ್ಟಕ್ಕೆ ಒಳಗಾಗುತ್ತಾರೆ. ಹಾಗಾಗಬಾರದು ಎಂದು ರಾಜ್ಯ ಸರ್ಕಾರವೇ ಹೆಚ್ಚುವರಿಯಾಗಿ ಹಣ ಹಾಕಿ ಕೆಲಸ ಮಾಡುತ್ತಿದೆ ಎಂದು ಮಾಹಿತಿ ನೀಡಿದರು.


ಕುಡಿಯುವ ನೀರಿನ ಯೋಜನೆ ಮಾಹಿತಿ : ರಾಜ್ಯದಲ್ಲಿ 162 ತಾಲೂಕುಗಳಲ್ಲಿ ಬರ ಇದೆ. ಒಟ್ಟು 646 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಇದರಲ್ಲಿ 284 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು, ಇದ್ಕಕಾಗಿ 490 ಟ್ಯಾಂಕರ್‌ಗಳನ್ನು ಬಳಸಲಾಗುತ್ತಿದೆ. ಪ್ರತಿದಿನ ಸುಮಾರು 1,376 ಟ್ಯಾಂಕ್ ನೀರಿನ ಸರಬರಾಜು ಆಗುತ್ತಿದೆ ಎಂದು ಮಾಹಿತಿ ನೀಡಿದರು.


ಇನ್ನುಳಿದ 362 ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಶಾಶ್ವತ ಕುಡಿಯುವ ನೀರಿನ ಯೋಜನೆಗಳಿಗಾಗಿ ಈ ವರ್ಷ ಜಿಲ್ಲಾ ಪಂಚಾಯಿತಿಗಳಿಗೆ 2,400 ಕೋಟಿ ರೂ.ಅನುದಾನ ನೀಡಲಾಗಿದೆ. ಅಲ್ಲದೆ ಟಾಸ್ಕಾಪೋರ್ಸ್ ಅಡಿ ಹೆಚ್ಚುವರಿಯಾಗಿ 134 ಕೋಟಿ ರೂ.ಬಿಡುಗಡೆ ಮಾಡಲಾಗಿದೆ. ಈ ಪೈಕಿ 1,400 ಕೋಟಿ ರೂ. ವೆಚ್ಚದ ಕಾಮಗಾರಿ ಈಗಾಗಲೇ ಪೂರ್ಣವಾಗಿದ್ದು, ಬಾಕಿ ಇರುವ ಕಾಮಗಾರಿಗಳು ಪ್ರಗತಿಯಲ್ಲಿದೆ. ಎರಡು ತಿಂಗಳಲ್ಲಿ ಪೂರ್ಣವಾಗಲಿವೆ ಎಂದರು.

ಉದ್ಯೋಗ ಖಾತ್ರಿ ಯೋಜನೆ ಮಾಹಿತಿ: ಬರದಿಂದಾಗಿ ಜನರು ಉದ್ಯೋಗವಿಲ್ಲದೆ ಸಂಕಷ್ಟಕ್ಕೆ ಸಿಲುಕಬಾರದು ಎಂಬ ಉದ್ದೇಶದಿಂದ ಪ್ರಸಕ್ತ ವರ್ಷ ಉದ್ಯೋಗ ಸೃಷ್ಟಿ ಮಾಡುವ ಗುರಿ ಹೊಂದಲಾಗಿತ್ತು. ಇದಕ್ಕಾಗಿ 3,780 ಕೋಟಿ ರೂ.ವೆಚ್ಚ ಮಾಡುವ ಗುರಿಯಿತ್ತು. ಕಳೆದ 6 ರಿಂದ 7 ವರ್ಷಗಳಿಗೆ ಹೋಲಿಕೆ ಮಾಡಿ ನೋಡಿದರೆ, ಅತ್ಯಂತ ಹೆಚ್ಚು ಪ್ರಮಾಣದ ಕೆಲಸ ಈ ವರ್ಷ ನಡೆಯುತ್ತಿದೆ. ಈಗಾಗೇ ಶೇ.99.66 ರಷ್ಟು ಕೆಲಸವಾಗಿದೆ ಎಂದು ತಿಳಿಸಿದರು.


ಎಂಟೂವರೆ ಕೋಟಿ ಮಾನವದಿನಗಳ ಕೆಲಸ ಕೆಲವೇ ದಿನಗಳಲ್ಲಿ ಮುಗಿಯುವುದರಿಂದ ಇದನ್ನು ಹತ್ತುವರೆ ಕೋಟಿ ಮಾನವ ದಿನಗಳಿಗೆ ಏರಿಸುವ ಚಿಂತನೆ ಇದೆ. ಉದ್ಯೋಗ ಖಾತ್ರಿ ಯೋಜನೆಯಡಿ ಅಂಗನವಾಡಿ, ಶಾಲಾ ಕಟ್ಟಡ, ಕೆರೆ ಹೂಳು ತೆಗೆಸುವುದು, ಚೆಕ್ ಡ್ಯಾಂಗಳ ನಿರ್ಮಾಣ ಹಾಗೂ ಸಾರ್ವಜನಿಕ ಆಸ್ತಿ ಸೃಜನೆ ಮಾಡುವ ಕೆಲಸಗಳನ್ನು ಮಾಡಲಾಗುತ್ತಿದೆ. ಒಟ್ಟಾರೆ ಜನರಿಗೆ ಭದ್ರತೆ ಒದಗಿಸುವುದರೊಂದಿಗೆ ಆಸ್ತಿ ಸೃಷ್ಟಿ ಮಾಡುವುದು ನಮ್ಮ ಉದ್ದೇಶವಾಗಿದೆ. ರಾಜ್ಯದಲ್ಲಿ ಉದ್ಯೋಗ ಖಾತ್ರಿ ಕೂಲಿ 250 ರೂ. ಇದ್ದು, ಇದನ್ನು ಪರಿಷ್ಕರಿಸಲಾಗುವುದು ಎಂದು ಮಾಹಿತಿ ನೀಡಿದರು.

ಉದ್ಯೋಗ ಖಾತ್ರಿಯನ್ನು ಕೃಷಿಗೂ ಬಳಸಿಕೊಳ್ಳಬಹುದು.
ರೈತರ ಸಬಲೀಕರಣ ಮಾಡುವ ಉದ್ದೇಶದಿಂದ ಉದ್ಯೋಗ ಖಾತ್ರಿ ಯೋಜನೆಯನ್ನು ಕೃಷಿಗೂ ಬಳಕೆ ಮಾಡಿಕೊಳ್ಳಬಹುದಾಗಿದೆ. ಬೇಲಿ ಹಾಕಲು, ಗುಂಡಿ ತೆಗೆಯಲು, ಕೊಟ್ಟಿಗೆ ನಿರ್ಮಿಸಿಕೊಳ್ಳಲು ಇದೇ ಮುಂತಾದ ರೀತಿಯ ಕೃಷಿಗೆ ಪೂರಕವಾದ ಆಸ್ತಿ ನಿರ್ಮಾಣ ಮಾಡಿಕೊಳ್ಳಲು ಹಣ ನೀಡಲಾಗುತ್ತದೆ. ಅಡಿಕೆ, ತೆಂಗು, ಮಾವು, ಸಪೋಟಾ ಇದೇ ಮುಂತಾದ ತೋಟಗಾರಿಕೆ ಬೆಳೆ ಸಾಗುವಳಿ ಮಾಡಲು ಅದಕ್ಕಾಗುವ ವೆಚ್ಚವನ್ನು ಈ ಯೋಜನೆಯಲ್ಲಿ ಪಡೆಯಬಹುದಾಗಿದೆ.


ಬಿಪಿಎಲ್ ಕಾರ್ಡ್ ಇದ್ದು, ಜಾಬ್ ಕಾರ್ಡ್ ಹೊಂದಿರುವ ಯಾವುದೇ ರೈತ ಬೇಕಾದರೂ ಈ ಸೌಲಭ್ಯ ಪಡೆಯಬಹುದಾಗಿದೆ. 1 ಹೆಕ್ಟೇರ್ ಅಡಕೆಗೆ 2.67 ಲಕ್ಷ, ತೆಂಗು 62 ಸಾವಿರ, ಗೇರು 72 ಸಾವಿರ, ಮಾವು, ಸಪೋಟಾ 44 ಸಾವಿರ ಹೀಗೆ ತೋಟಗಾರಿಕೆ ಬೆಳೆ ಸಾಗುವಳಿ ಮಾಡಲು ಹಣದ ನೆರವು ಸಿಗಲಿದ್ದು, ಇದನ್ನು ಸದ್ಬಳಸಿಕೊಳ್ಳಬಹುದು. ಇದರಿಂದ ರೈತರ ಸ್ವಂತ ಬಂಡವಾಳ ಮತ್ತು ಸಾಲ ಮಾಡುವ ಸ್ಥಿತಿಯೂ ಕೊಂಚ ತಪ್ಪುತ್ತದೆ ಎಂದು ಮಾಹಿತಿ ನೀಡಿದರು.

ಕೇಂದ್ರ ಸರ್ಕಾರ ಬಾಕಿ ಅನುದಾನ ಬಿಡುಗಡೆ ಮಾಡಿಲ್ಲ
ಕೇಂದ್ರ ಸರ್ಕಾರ 2015 -16ನೇ ಸಾಲಿನ ನರೇಗಾ ಯೋಜನೆಗೆ 935 ಕೋಟಿ ರೂ. ಬಾಕಿ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಸಚಿವ ಕೃಷ್ಣಬೈರೇಗೌಡ ಆರೋಪಿಸಿದರು.
2015-16 ರಲ್ಲಿ ರಾಜ್ಯದಲ್ಲಿ ಬರಗಾಲವಿತ್ತು. ಆಗ ಕೇಂದ್ರ ಸರ್ಕಾರ ಸುಮಾರು ಆರು ತಿಂಗಳು ಅನುದಾನ ನೀಡಿರಲಿಲ್ಲ. ಹಣ ಪಾವತಿಗೆ ತೊಂದರೆ ಆಗಬಾರದು ಎಂಬ ಕಾರಣದಿಂದ ಕೇಂದ್ರದ ಅನುಮತಿ ಪಡೆದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ 2,175 ಕೋಟಿ ರೂ.ಬಿಡುಗಡೆ ಮಾಡಿದರು. ಈ ಮೊತ್ತದಲ್ಲಿ ಕೇಂದ್ರ ಸರ್ಕಾರ 935 ಕೋಟಿ ರೂ.ಗಳನ್ನು ಇನ್ನೂ ಮರುಪಾವತಿ ಮಾಡಿಲ್ಲ. ಹಾಗಾಗಿ ಈ ಹಿಂದಿನ ಸಾಲು ಮತ್ತು ಪ್ರಸಕ್ತ ಸಾಲಿನ ಬಾಕಿ ಹಣವನ್ನು ಕೇಂದ್ರ ಸರ್ಕಾರ ಶೀಘ್ರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಇಂದು ಚಿಂತನ -ಮಂಥನ
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಸಭೆಯ ಕುರಿತಂತೆ ಮಾತನಾಡಿದ ಅವರು, ಬುಧವಾರ ಮತ್ತು ಗುರುವಾರ ರಾಜ್ಯದ ಜಿಪಂ ಸಿಇಒಗಳು, ಇಂಜಿನಿಯರ್‌ಗಳು ಮತ್ತು ಇತರೇ ಅಧಿಕಾರಿಗಳೊಂದಿಗೆ ಮೈಸೂರಿನಲ್ಲಿ ಕಾರ್ಯಾಗಾರ ಹಮ್ಮಿಕೊಂಡಿದ್ದು, ಬುಧವಾರ ಇಲಾಖೆಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಇಲಾಖೆಯ ಯಾವ ಕಾರ್ಯಕ್ರಮಕ್ಕೆ ಆದ್ಯತೆ ನೀಡಬೇಕು, ಯಾವ ರೀತಿಯ ಯೋಜನೆಗಳನ್ನು ರೂಪಿಸಬೇಕು ಎಂಬದರ ಕುರಿತಂತೆ ಗುರುವಾರ ಚಿಂತನ-ಮಂಥನ ಸಭೆ ನಡೆಯಲಿದೆ ಎಂದು ಮಾಹಿತಿ ನೀಡಿದರು.