ಕೆ.ಆರ್.ಪೇಟೆ ತಾಲೂಕಿನಲ್ಲಿ ಬಿರುಗಾಳಿ ಮಳೆ


ಕೆ.ಆರ್.ಪೇಟೆ: ತಾಲೂಕಿನ ವಿವಿಧೆಡೆ ಸೋಮವಾರ ಸಂಜೆ ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ ತೆಂಗು, ಬಾಳೆ, ಅಡಕೆ ಮರಗಳು ಧರೆಗುರುಳಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

ಬೂಕನಕೆರೆ ಹೋಬಳಿಯ ಹೆಮ್ಮಡಹಳ್ಳಿ ಗ್ರಾಮದಲ್ಲಿ ಪುಟ್ಟೇಗೌಡರ ಮಗ ಬಾಂಬೆ ರಾಮೇಗೌಡ ಅವರ ಮನೆಯ ಮೇಲೆ ಭಾರಿ ಗಾತ್ರದ ತೆಂಗಿನ ಮರ ಬುಡಸಮೇತ ಉರುಳಿ ಬಿದ್ದಿದ್ದು ಛಾವಣಿ ಕುಸಿದು ಬಿದ್ದಿದೆ. ಇದರಿಂದ ಸುಮಾರು 25ಸಾವಿರ ರೂ. ನಷ್ಟ ಉಂಟಾಗಿದೆ. ಮನೆಯೊಳಗಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದೇ ಗ್ರಾಮದ ತಿಮ್ಮೇಗೌಡ ಅವರಿಗೆ ಸೇರಿದ 16ಅಡಕೆ ಮರಗಳು ಧರೆಗುರುಳಿವೆ.ಅವರ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದ ವಿದ್ಯುತ್ ಕಂಬ ಮುರಿದು ಬಿದ್ದಿದ್ದು ಅಪಾಯ ಸಂಭವಿಸಿಲ್ಲ.

ಚಂದ್ರೇಗೌಡ ಅವರಿಗೆ ಸೇರಿದ 500 ಬಾಳೆ ಗಿಡ ನೆಲಕ್ಕುರುಳಿವೆ. ತಿರುಮಲೇಗೌಡ ಅವರ ಮಗ ನಂಜೇಗೌಡ ಅವರ 2 ತೆಂಗಿನ ಮರ, 10 ಅಡಕೆ ಮರಗಳು, ಜಗದೀಶ್ ಅವರಿಗೆ ಸೇರಿದ 15 ಅಡಕೆ ಮರಗಳು, ಒಂದು ತೆಂಗಿನ ಮರ ಬಿರುಗಾಳಿ ಮಳೆಯಲ್ಲಿ ಬುಡಸಮೇತ ಕುಸಿದು ಬಿದ್ದಿವೆ.

ತಹಸೀಲ್ದಾರ್ ಎಂ.ಶಿವಮೂರ್ತಿ, ಬೂಕನಕೆರೆ ಹೋಬಳಿ ರಾಜಸ್ವ ನಿರೀಕ್ಷಕ ರಾಜಮೂರ್ತಿ, ಗ್ರಾಮ ಲೆಕ್ಕಾಧಿಕಾರಿ ನರೇಂದ್ರ, ತೋಟಗಾರಿಕೆ ಅಧಿಕಾರಿ ಆರ್.ಜಯರಾಂ ಸೇರಿದಂತೆ ಇತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ.

ತಾಲೂಕಿನ ಬೊಮ್ಮಲಾಪುರ, ಅಟ್ಟುಪ್ಪು, ರಂಗನಾಥಪುರ ಗ್ರಾಮಗಳಲ್ಲಿ ಬಿರುಗಾಳಿ ಮಳೆಯಿಂದ ಹಲವು ಮನೆಗಳ ಛಾವಣಿ ಗಾಳಿಗೆ ಹಾರಿ ಹೋಗಿವೆ. ನೂರಾರು ತೆಂಗು, ಅಡಕೆ ಮರಗಳು ಧರೆಗುರುಳಿವೆ.