ಕೆಸಿ ವ್ಯಾಲಿ ನೀರು ಕುಡಿದ ಶಾಸಕ

ನರಸಾಪುರ: ಕೆಸಿ ವ್ಯಾಲಿ ನೀರು ಸೇವನೆಯಿಂದ ಖಾಜಿಕಲ್ಲಹಳ್ಳಿ ಗ್ರಾಮಸ್ಥರ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಕೆಲವರು ಅಪಪ್ರಚಾರ ಮಾಡುತ್ತಿರುವ ಬೆನ್ನಲ್ಲೇ ಕೋಲಾರ ಶಾಸಕ ಕೆ.ಶ್ರೀನಿವಾಸಗೌಡ ನೀರು ಸಂಸ್ಕರಿಸಿರುವ ನರಸಾಪುರ ಕೆರೆಗೆ ಮಂಗಳವಾರ ಭೇಟಿ ನೀಡಿ ಕೆರೆ ನೀರು ಕುಡಿದರು.

ತರಹೇವಾರಿ ವದಂತಿಗಳಿಂದ ಜನರಲ್ಲಿ ಉಂಟಾಗಿರುವ ಭೀತಿ ನಿವಾರಿಸಲು ಈ ಮಾರ್ಗ ಅನುಸರಿಸಿದ ಅವರು, ಕೆಸಿ ವ್ಯಾಲಿ ಯೋಜನೆ ಬಗ್ಗೆ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ನೀರಿನ ರಾಜಕೀಯ ಮಾಡುವ ಮೂಲಕ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಬರುವ ನೀರನ್ನು ತಡೆಯಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕೆಲ ಹಣ ವಸೂಲಿ ಗಿರಾಕಿಗಳೂ ಇದರಲ್ಲಿ ಶಾಮೀಲಾಗಿರುವುದು ನನ್ನ ಗಮನಕ್ಕೆ ಬಂದಿದೆ. ಅಂತಹ ವ್ಯಕ್ತಿಗಳಿಗೆ ಧಿಕ್ಕಾರ ಹಾಕಬೇಕು ಎಂದು ನಾನೇ ಕೆರೆಗೆ ಭೇಟಿ ನೀಡಿ ನೀರು ಕುಡಿಯುವ ತೀರ್ಮಾನ ಕೈಗೊಂಡಿದ್ದೇನೆ ಎಂದರು.

3ನೇ ಹಂತದ ಶುದ್ಧೀಕರಣದ ಅಗತ್ಯವಿಲ್ಲ. ಆದರೂ ಶುದ್ಧೀಕರಿಸುವುದಾಗಿ ಸರ್ಕಾರ ಹೇಳಿದೆ. ಈಗಾಗಲೇ ನೀರು ಶುದ್ಧವಾಗಿದೆ. ಕೆಲವರು ಅದಕ್ಕೆ ರಾಜಕೀಯ ಬಣ್ಣ ಕಟ್ಟಿ ಯೋಜನೆ ನಿಲ್ಲಿಸರು ಪ್ರಯತ್ನಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಈಗಾಗಲೇ ಕೆರೆಯನ್ನು ಹರಾಜಿಗೆ ತೆಗೆದುಕೊಂಡು ಸುಮಾರು 10 ಲಕ್ಷ ಮೀನಿನ ಮರಿಗಳನ್ನು ಸಾಕಣೆಗೆ ಬಿಡಲಾಗಿದೆ. ಒಂದು ಮರಿಯೂ ಸತ್ತಿಲ್ಲ. ತಡವಾಗಿ ನೀರಿನ ಮಾದರಿ ಪರೀಕ್ಷೆ ನಡೆಸಿದ್ದಾರೆ. ನಮಗೆ ನೀರನ್ನು ಸಂಸ್ಕರಿಸಿ ಶುದ್ಧಿಕರಿಸಿ ಹರಿಸುತ್ತಿದ್ದಾರೆ. ಅದರೂ, ನಮ್ಮವರು ಶುದ್ಧೀಕರಿಸಿರುವ ನೀರು ಸರಿಯಾಗಿಲ್ಲ ಎಂದು ಹೇಳುವುದು ಸಮಂಜಸವಲ್ಲ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ, ತಾಲೂಕು ಜೆಡಿಎಸ್ ಅಧ್ಯಕ್ಷ ಮುರಾಂಡಹಳ್ಳಿ ಗೋಪಾಲಪ್ಪ, ಆರ್​ಪಿಐ ಅಂಬರೀಷ್, ನರಸಾಪುರ ಎಸ್​ಎಫ್​ಎಸ್​ಸಿ ಅಧ್ಯಕ್ಷ ಖಾಜಿ ಕಲ್ಲಹಳ್ಳಿ ಮುನಿರಾಜ್, ಅವಾರ್ಡ್ ಸಂಸ್ಥೆ ಅಧ್ಯಕ್ಷ ಎಸ್.ನಾರಾಯಣಸ್ವಾಮಿ, ಸೊಸೈಟಿ ನಿರ್ದೇಶಕ ಕೆ.ಇ.ಬಿ.ಚಂದ್ರು, ಗ್ರಾಪಂ ಸದಸ್ಯ ಮಂಜುನಾಥ್, ನರಸಾಪುರ ಗ್ರಾಪಂ ಪಿಡಿಒ ಮಹೇಶ್ ಕುಮಾರ್, ಕಾರ್ಯದರ್ಶಿ ಮಂಜುನಾಥ್, ಕನ್ನಡ ಸೇನೆ ತಾಲೂಕು ಅಧ್ಯಕ್ಷ ಶಿವಚಂದ್ರಯ್ಯ, ಹೋಬಳಿ ಅಧ್ಯಕ್ಷ ಎನ್.ಪಿ.ನಾಗೇಶ್ ಮತ್ತಿತರರು ಇದ್ದರು.

ವಿರೋಧ ಶಕ್ತಿ ನಮ್ಮಲಿದೆ: ಜಿಲ್ಲೆಯಲ್ಲಿ ಸರಿಯಾಗಿ ಮಳೆಯಾಗದೆ ಸುಮಾರು 14 ವರ್ಷಗಳಾಗಿವೆ. ಈ ಯೋಜನೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರಿಗೆ ಆಸರೆಯಾಗಿದೆ. ಇಂತಹ ಯೋಜನೆಗಳಿಗೆ ಅಡ್ಡಿಪಡಿಸಿದರೆ ಅದನ್ನು ವಿರೋಧಿಸುವ ಶಕ್ತಿ ನಮ್ಮಲ್ಲಿದೆ ಎಂದು ತೋರಿಸಬೇಕು. ಈ ಯೋಜನೆ ಮೂಲಕ ಜಿಲ್ಲೆಗೆ ನೀರು ಹರಿಸಲು ಕಾರಣರಾದ ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸಬೇಕು ಎಂದರು.

ಕೋರ್ಟ್​ಗೆ ಅಫಿಡವಿಟ್: ಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ನನಗೂ ತಿಳಿದಿದೆ. ಈ ನೀರನ್ನು ನಾನು ಕುಡಿದಿದ್ದೇನೆ ಎಂದು ಕೋರ್ಟ್​ಗೆ ಅಫಿಡವಿಟ್ ಹಾಕುತ್ತೇನೆ. ಕೋರ್ಟ್ ಕೇಳಿರುವ ದಾಖಲೆಗಳನ್ನು ಅಧಿಕಾರಿಗಳು ಶೀಘ್ರ ಒದಗಿಸುತ್ತಾರೆ. ಈ ನೀರಿಗೆ ವಿರೋಧ ವ್ಯಕ್ತಪಡಿಸುವವರಿಗೆ ಒಳ್ಳೆಯ ಬುದ್ಧಿ ಕೊಡಲಿ ಎಂದು ಶಾಸಕರು ತಿಳಿಸಿದರು.