ಕೆಸಿ ವ್ಯಾಲಿಯಿಂದ ಹೆಚ್ಚುವರಿ ನೀರು

ಕೋಲಾರ: ಕೆಸಿ ವ್ಯಾಲಿ ಮೂಲಕ ಜಿಲ್ಲೆಗೆ ಹೆಚ್ಚುವರಿಯಾಗಿ 40 ಎಂಎಲ್​ಡಿ ನೀರು ಹರಿಸಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

ಬೆಂಗಳೂರಿನ ವಿಧಾನಸೌಧದಲ್ಲಿನ ಕಚೇರಿಯಲ್ಲಿ ಸೋಮವಾರ ಸಣ್ಣ ನೀರಾವರಿ ಇಲಾಖೆ ಹಾಗೂ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪ್ರಸ್ತುತ 250 ಎಂಎಲ್​ಡಿ ನೀರು ಹರಿಸಲಾಗುತ್ತಿದ್ದು, ಹೆಚ್ಚುವರಿಯಾಗಿ 40 ಎಂಎಲ್​ಡಿ ನೀರನ್ನು ಸರಬರಾಜು ಮಾಡುವುದರಿಂದ ಜನರ ಅಪೇಕ್ಷೆಯಂತೆ ಕೆರೆಗಳಿಗೆ ಶೀಘ್ರಗತಿಯಲ್ಲಿ ನೀರು ತುಂಬಿಸಬಹುದು. ಹೆಚ್ಚುವರಿ ಕೆರೆಗಳಿಗೂ ನೀರು ಹರಿಸಬಹುದು ಎಂದು ಪ್ರತಿಪಾದಿಸಿದ್ದಾರೆ.

290 ಎಂಎಲ್​ಡಿ ನೀರನ್ನು ಪಂಪ್ ಮಾಡುವುದರಿಂದ 10 ಎಂಎಲ್​ಡಿ ನೀರನ್ನು ಹೊಸಕೋಟೆ ವ್ಯಾಪ್ತಿಯ ಕೆರೆಗಳಿಗೆ ತುಂಬಿಸಬಹುದು. ಜತೆಗೆ ಮುಖ್ಯಸರಣಿಯಲ್ಲಿನ ನರಸಾಪುರ, ಎಸ್.ಅಗ್ರಹಾರ, ಜನಘಟ್ಟ ಕೆರೆ ಹಾಗೂ ಬಂಗಾರಪೇಟೆ ತಾಲೂಕಿನ ಕೆರೆಗಳಿಗೂ 10 ಎಂಎಲ್​ಡಿ ಹೆಚ್ಚುವರಿ ನೀರು ಹರಿಸಲಾಗುವುದು ಎಂದಿದ್ದಾರೆ.

ಮುಂದಿನ 10 ದಿನಗಳಲ್ಲಿ ಇನ್ನೂ ಹೆಚ್ಚುವರಿಯಾಗಿ 40 ಎಂಎಲ್​ಡಿ ನೀರನ್ನು ಬೆಂಗಳೂರಿನಿಂದ ಪಂಪ್ ಮಾಡಲು ನಿರ್ಧರಿಸಿರುವುದರಿಂದ ಮುಖ್ಯ ಮಾರ್ಗದಲ್ಲಿ ಹರಿಯುವ ನೀರಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ. ಮಾಲೂರು ಮಾರ್ಗದ ಬಳಕೆಗೂ 10 ದಿನಗಳ ನಂತರ ಹೆಚ್ಚಿನ ನೀರು ಹರಿಬಿಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಸಿ.ಮೃತ್ಯುಂಜಯಸ್ವಾಮಿ ಇತರ ಅಧಿಕಾರಿಗಳು ಹಾಜರಿದ್ದರು.

ಫೋಟೋ: 15-ಕೆಎಲ್​ಆರ್-5

ಬೆಂಗಳೂರಿನಲ್ಲಿ ಸಚಿವ ಕೃಷ್ಣಬೈರೇಗೌಡ ಕೆಸಿ ವ್ಯಾಲಿ ಯೋಜನೆಯನ್ವಯ ಹೆಚ್ಚುವರಿ ನೀರು ಹರಿಸುವ ಕುರಿತು ಅಧಿಕಾರಿಗಳ ಜತೆ ರ್ಚಚಿಸಿದರು.

Leave a Reply

Your email address will not be published. Required fields are marked *