ಕೆಲಸಗಾರರು ಮಾತ್ರ ಗೆಲ್ತಾರೆ

ಹಾನಗಲ್ಲ: 60 ವರ್ಷ ಯಾರ್ಯಾರದೋ ಫೋಟೋ ತೋರಿಸಿ ವೋಟ್ ಕೇಳಿದ್ದು ಸಾಕು. ಅಭಿವೃದ್ಧಿ ಕೆಲಸ ಮಾಡುವವರು ಮಾತ್ರ ಮತ್ತೆ ಗೆಲ್ಲಲಿದ್ದಾರೆ. ಮೋದಿಯಂಥ ಅಭಿವೃದ್ಧಿ ಪಥದ ನಾಯಕರು ಭಾರತಕ್ಕೆ ಅಗತ್ಯವಿದೆ ಎಂದು ಚಿತ್ರನಟಿ ಶ್ರುತಿ ಹೇಳಿದರು.

ಪಟ್ಟಣದ ರಂಜನಿ ಚಿತ್ರಮಂದಿರದಿಂದ ಹಳೇ ಬಸ್ ನಿಲ್ದಾಣದವರೆಗೆ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರ ಶನಿವಾರ ರಾತ್ರಿ ರೋಡ್ ಶೋ ನಡೆಸಿ ಅವರು ಮಾತನಾಡಿದರು.

ಈ ಚುನಾವಣೆ ಭಾರತದ ಭವಿಷ್ಯ ನಿರ್ವಣಕ್ಕಾಗಿ ಎಂಬುದನ್ನು ಅರಿತುಕೊಳ್ಳಬೇಕು. ಹಿಂದೆಲ್ಲ ಜಾತಿ, ಪಕ್ಷಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಲಾಗುತ್ತಿತ್ತು. ಈಗ ಕಾಲ ಬದಲಾಗಿದೆ. ಜನರೂ ಪ್ರಜ್ಞಾವಂತರಾಗಿದ್ದಾರೆ. ಈಗೇನಿದ್ದರೂ ಪ್ರೋಗ್ರೆಸ್ ಕಾರ್ಡ್ ಅನ್ನು ಮತದಾರರ ಮುಂದಿಟ್ಟು ಚುನಾವಣೆಗೆ ಇಳಿಯಬೇಕಾಗಿದೆ ಎಂದರು.

ಕಳೆದ ಬಾರಿ ದೇಶದ ಜನತೆ ಮೋದಿಯವರ ಮೇಲಿಟ್ಟ ಭರವಸೆ ಉಳಿಸಿಕೊಂಡಿದ್ದಾರೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಲು ಒಂದೊಂದು ಮತವೂ ಮುಖ್ಯ. ಲೋಕಸಭೆ ಚುನಾವಣೆ ಮತದಾನದಂದು ಕೈ ಬೆರಳಿಗೆ ಹಾಕುವ ಶಾಯಿಗೆ, ಈ ದೇಶಕ್ಕೆ ಮಸಿ ಬಳಿಯುತ್ತಿರುವ ಹಲವು ನಾಯಕರನ್ನು ಮನೆಗೆ ಕಳಿಸುವ ಶಕ್ತಿಯಿದೆ. ಶಿವಕುಮಾರ ಉದಾಸಿ ಅವರನ್ನು ಗೆಲ್ಲಿಸಿ ಮೋದಿಯವರ ಕೈ ಬಲಪಡಿಸಬೇಕಿದೆ. ಕಳೆದ ಬಾರಿ 18 ಸ್ಥಾನಗಳಲ್ಲಿ ಗೆದ್ದಿದ್ದ ಬಿಜೆಪಿ ಸಂಸದರ ಸಂಖ್ಯೆ ಈ ಬಾರಿ 22 ಸ್ಥಾನಕ್ಕೇರಬೇಕಿದೆ. ದೇಶಾದ್ಯಂತ 280 ಸ್ಥಾನಗಳಲ್ಲಿ ಆಯ್ಕೆಯಾಗಿದ್ದ ಸಂಸದರ ಸಂಖ್ಯೆ ಈ ಬಾರಿ 300 ದಾಟುವ ಗುರಿ ಹೊಂದಲಾಗಿದೆ. ದೇಶಕ್ಕಾಗಿ ಮೋದಿ-ಮೋದಿಗಾಗಿ ನಾವು ಎಂಬ ಧ್ಯೇಯದೊಂದಿಗೆ ಬಿಜೆಪಿ ಕಾರ್ಯಕರ್ತರು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಶಾಸಕ ಸಿ.ಎಂ. ಉದಾಸಿ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ತಿದ್ದುಪಡಿ ಮಾಡುತ್ತಾರೆ. ಹಿಂದುಳಿದ ವರ್ಗದವರ ಹಕ್ಕು-ಕಾನೂನು ಕಸಿದುಕೊಳ್ಳಲಿದ್ದಾರೆ. ಅಲ್ಪಸಂಖ್ಯಾತರನ್ನು ದೇಶ ಬಿಟ್ಟು ಓಡಿಸುತ್ತಾರೆ ಎಂಬ ಅಪಪ್ರಚಾರವನ್ನು ಕಾಂಗ್ರೆಸ್​ನವರು ಜನರಲ್ಲಿ ಮೂಡಿಸುತ್ತಿದ್ದಾರೆ. ದೇಶದ 118 ಕೋಟಿ ಜನರ ಕೈಯಲ್ಲಿ ಮೊಬೈಲ್​ಗಳಿವೆ. ಜಗತ್ತಿನ ಎಲ್ಲ ಬೆಳವಣಿಗೆಗಳೂ ಕ್ಷಣಾರ್ಧದಲ್ಲಿ ತಿಳಿಯುತ್ತವೆ. ಜನರು ಅಪಪ್ರಚಾರವನ್ನು ನಂಬುವ ಸ್ಥಿತಿಯಲ್ಲಿಲ್ಲ ಎಂದರು.

ಕೃಷಿ ಸಂಚಯಿನಿ ಯೋಜನೆಯಡಿ ಗಂಗಾ-ಕಾವೇರಿ ನದಿ ಜೋಡಣೆ ಗುರಿ ಹೊಂದಲಾಗಿದೆ. ಮುಂದಿನ 5 ವರ್ಷಗಳಲ್ಲಿ ದೇಶದಲ್ಲಿ 150 ಮೆಡಿಕಲ್ ಕಾಲೇಜ್ ತೆರೆಯುವ ಯೋಜನೆಯಿದೆ. ಬದ್ಧತೆಯಿರುವ ವ್ಯಕ್ತಿ ದೇಶದ ನೇತೃತ್ವ ವಹಿಸಿದರೆ ಅಭಿವೃದ್ಧಿ-ಬದಲಾವಣೆ ಸಾಧ್ಯವಿದೆ. ಬಿಜೆಪಿ ಅಭ್ಯರ್ಥಿ ಬೆಂಬಲಿಸಿ ಮೋದಿಯವರನ್ನು ಮತ್ತೆ ಪ್ರಧಾನಿ ಮಾಡಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನ, ತಾಲೂಕಾಧ್ಯಕ್ಷ ನಿಂಗಪ್ಪ ಗೊಬ್ಬೇರ, ಯುವ ಘಟಕಾಧ್ಯಕ್ಷ ಪ್ರಶಾಂತ ಕಾಮನಹಳ್ಳಿ ಇತರರಿದ್ದರು.

Leave a Reply

Your email address will not be published. Required fields are marked *