ಕೆಲಸಕ್ಕಾಗಿ ಕೂಲಿಕಾರರ ಪ್ರತಿಭಟನೆ

ಲಕ್ಷ್ಮೇಶ್ವರ: ಎನ್​ಆರ್​ಇಜಿ ಯೋಜನೆಯಡಿ ಸಮರ್ಪಕ ಉದ್ಯೋಗ ನೀಡುವಂತೆ ಆಗ್ರಹಿಸಿ ಶನಿವಾರ ನೂರಾರು ಕೂಲಿ ಕಾರ್ವಿುಕರು ತಾಲೂಕಿನ ಅಡರಕಟ್ಟಿ ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಮೂರ್ನಾಲ್ಕು ದಿನಗಳಿಂದ ಗ್ರಾಮದ ಜನರಿಗೆ ಉದ್ಯೋಗ ನೀಡಲಾಗಿತ್ತು. ಆದರೆ, ಅಧಿಕಾರಿಗಳು ದಿಢೀರನೇ ಇವತ್ತು ಕೆಲಸ ಇಲ್ಲ ಎಂದಿದ್ದಕ್ಕೆ ಆಕ್ರೋಶಗೊಂಡ ಕೂಲಿಕಾರರು ಗ್ರಾಪಂ ಎದುರು ಪ್ರತಿಭಟನೆ ನಡೆಸಿದರು. ಇದರಿಂದ ಗ್ರಾಮದಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.

ಸತತ ಬರಗಾಲದಿಂದ ಕೃಷಿ ಕೆಲಸವಿಲ್ಲದೆ ಪರದಾಡುತ್ತಿದ್ದೇವೆ. ಇಂಥದ್ದರಲ್ಲಿ ಎನ್​ಆರ್​ಇಜಿ ಯೋಜನೆಯಡಿ ಕೆಲಸ ಕೊಡಿ ಎಂದು ಕೇಳಿದರೆ ಇಲ್ಲ ಎನ್ನುತ್ತೀರಿ. ಎಲ್ಲರೂ ಕೂಡಿ ಜೆಸಿಬಿ ಹಚ್ಚಿ ಕೆಲಸ ಮಾಡಿಸುತ್ತೀರಿ. ನಾವೆಲ್ಲಿಗೆ ಹೋಗೋಣ ಎಂದು ಸದಸ್ಯರ ವಿರುದ್ಧ ಜಾಬ್ ಕಾರ್ಡ್​ದಾರರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಅಧಿಕಾರಿಗಳು ಮತ್ತು ಗಾಪಂನ ಎಲ್ಲ ಸದಸ್ಯರು ಸ್ಥಳದಲ್ಲಿ ಜಮಾಯಿಸಿ ಸಮರ್ಪಕ ಉದ್ಯೋಗ ಭರವಸೆ ಮತ್ತು ಸೂಕ್ತ ಮಾಹಿತಿ ಕೊಡಬೇಕು ಎಂದು ಪಟ್ಟು ಹಿಡಿದು ಗುದ್ದಲಿ, ಬುಟ್ಟಿ, ಸಲಕೆ ಸಮೇತ ಗ್ರಾಪಂ ಮುಂದೆ ಧರಣಿ ಕುಳಿತರು.

ಸ್ಥಳಕ್ಕೆ ಆಗಮಿಸಿದ ಎನ್​ಆರ್​ಇಜಿ ಸಹಾಯಕ ನಿರ್ದೇಶಕ ಕೃಷ್ಣಪ್ಪ ಧರ್ಮರ ಕೂಲಿಕಾರರನ್ನು ಸಮಾಧಾನ ಪಡಿಸಿ ನಾಳೆಯಿಂದಲೇ ಎಲ್ಲರಿಗೂ ಬೇರೆ ಬೇರೆ ಸ್ಥಳಗಳಲ್ಲಿ ಕೆಲಸ ಕೊಡಲಾಗುವುದು ಎಲ್ಲರೂ ಮಾರ್ಗಸೂಚಿಯನ್ವಯ ಅಧಿಕಾರಿಗಳ ನಿರ್ದೇಶನದಂತೆ ಕೆಲಸ ನಿರ್ವಹಿಸಿ ಎಂದು ಸೂಚಿಸಿದರು. ಇದರಿಂದ ಸಮಾಧಾನಗೊಂಡ ಕೂಲಿಕಾರರು ಮಂಗಳವಾರದಿಂದ ಕೆಲಸಕ್ಕೆ ಬರುತ್ತೇವೆ ಎಂದು ಹೇಳಿ ಪ್ರತಿಭಟನೆ ಹಿಂಪಡೆದರು.

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಸಿದ್ದು ಹವಳದ, ಸುರೇಶ ತೋಟದ, ಮುಖಂಡರಾದ ವೈ.ಸಿ. ರೊಳ್ಳಿ, ನಿಂಗಪ್ಪ ಪ್ಯಾಟಿ, ಕೂಲಿಕಾರರಾದ ಬಸವರಾಜ ಹರ್ಲಾಪುರ, ರೇಣಮ್ಮ ಅಳ್ಳಳ್ಳಿ, ಲಕ್ಷ್ಮವ್ವ ಮುಳಗುಂದ, ನಿರ್ಮಲವ್ವ ರೊಳ್ಳಿ, ನಾಗನಗೌಡ ಪಾಟೀಲ, ಕಲ್ಲಪ್ಪ ಗಂಗಣ್ಣವರ, ಗಂಗವ್ವ ಮೆಳ್ಳಿ, ನಂದಾ ಮಾಗಡಿ, ಶಿಲ್ಪಾ ಹಡಪದ, ಗಿರಿಜವ್ವ ಕುಂಬಾರ, ಹಾಲಮ್ಮ ಇಟಗಿ, ಲಕ್ಷ್ಮವ್ವ ಶಿರಹಟ್ಟಿ, ವಿಜಯಲಕ್ಷ್ಮೀ ಹಡಪದ, ಪಾರವ್ವ ಚಕ್ರಸಾಲಿ, ಇತರರಿದ್ದರು.

ಪ್ರತಿಭಟನಾಕಾರರಿಗೆ ಸಮರ್ಪಕ ಉದ್ಯೋಗ ಮತ್ತು ಕೂಲಿ ಹಣ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ನಿಮಗೆ ಕೂಲಿ ಇಲ್ಲ ಎಂದು ಯಾರೋ ತಪ್ಪು ಮಾಹಿತಿ ನೀಡಿದ್ದಾರೆ. ಇದರಿಂದ ಯಾರೊಬ್ಬರೂ ಗೊಂದಲಕ್ಕೊಳಗಾಗಬೇಡಿ. ಕ್ರಿಯಾಯೋಜನೆಯಂತೆ ಮಂಜೂರಾದ ಅನುದಾನ ಮುಗಿಯುವವರೆಗೂ ಕೆಲಸ ನೀಡಲಾಗುವುದು ಎಂದು ಭರವಸೆ ನೀಡಿದರು.

| ಗಣೇಶ ನಾಯ್ಕ, ಅಡರಕಟ್ಟಿ ಗ್ರಾಪಂ ಅಧ್ಯಕ್ಷ

Leave a Reply

Your email address will not be published. Required fields are marked *