ಕೆರೆ ಹೂಳೆತ್ತುವ ಕಾರ್ಯ ಶ್ರೀಗಳಿಂದ ಚಾಲನೆ

ಲಕ್ಷ್ಮೇಶ್ವರ: ತಾಲೂಕಿನ ಬಾಲೆಹೊಸೂರ ಗ್ರಾಮದ ರೈತರು ಹಾಗೂ ಸಾರ್ವಜನಿಕರ ಸಹಕಾರದಿಂದ ಸಣ್ಣ ನೀರಾವರಿ ಇಲಾಖೆಯ ಅಂದಾಜು 80 ಎಕರೆ ವಿಸ್ತಾರದ ಕೆರೆ ಹೂಳೆತ್ತಲು ದಿಂಗಾಲೇಶ್ವರ ಶ್ರೀಗಳು ಭಗೀರಥ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಸೋಮವಾರ ಬೆಳಗ್ಗೆ ಕೆರೆಯಲ್ಲಿ ಹಿಟಾಚಿ, ಟ್ರ್ಯಾಕ್ಟರ್ ಮತ್ತು ಟಿಪ್ಪರ್​ಗಳ ಭರಾಟೆ ಜೋರಾಗಿತ್ತು. ಸ್ವತಃ ಶ್ರೀಗಳೇ ಟ್ರ್ಯಾಕ್ಟರ್ ಚಲಾಯಿಸುವ ಮೂಲಕ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿದರು. ಸರತಿಯಂತೆ ರೈತರು ತಮ್ಮ ಹೊಲಗದ್ದೆಗಳಿಗೆ ಕೆರೆಯ ಮಣ್ಣನ್ನು ಸಾಗಿಸಿ ಹೊಲಗಳ ಫಲವತ್ತತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ದಿಂಗಾಲೇಶ್ವರ ಶ್ರೀಗಳು, ‘ ದಶಕಗಳ ಹಿಂದಿನ ಈ ಕೆರೆಯ ಹೂಳೆತ್ತುವ ಕಾರ್ಯಕ್ಕೆ ಯಾವುದೇ ಸರ್ಕಾರಗಳು ಗಮನ ಹರಿಸಿಲ್ಲ. ಸದ್ಯ ಕೆರೆಗೆ ವರದಾ ನದಿಯಿಂದ ನೀರು ತುಂಬಿಸುವ ಯೋಜನೆಗೆ 9.40 ಕೋಟಿ ರೂ ಅನುದಾನ ಬಿಡುಗಡೆಯಾಗಿರುವುದು ಸಂತಸದ ಸಂಗತಿ. ಆದರೆ, ಈ ವಿಶಾಲವಾದ ಕೆರೆ ಅಂಗೈಯಂತಿದ್ದು ಹೂಳು, ಗಿಡಗಂಟೆಗಳು ಬೆಳೆದು ನೀರು ನಿಲ್ಲದಂತಾಗಿದೆ. ಸರ್ಕಾರಕ್ಕೆ, ಜನಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ಕೆರೆ ಹೂಳೆತ್ತಲು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಕೆರೆಗೆ ನದಿ ನೀರು ಹರಿದು ಬರುವ ಮೊದಲೇ ಕೆರೆಯ ಆಳವನ್ನು ಹೆಚ್ಚಿಸಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗುವಂತೆ ಮಾಡುವುದಕ್ಕಾಗಿ ಗ್ರಾಮಸ್ಥರೇ ಮುಂದಾಗಿದ್ದಾರೆ’ ಎಂದರು.

‘ಕೆರೆ ಪೂರ್ಣ ಪ್ರಮಾಣದಲ್ಲಿ ಭರ್ತಿಯಾದರೆ ಸುತ್ತಲಿನ ಅಂತರ್ಜಲ ಮಟ್ಟ ವೃದ್ಧಿಸುತ್ತದೆ. ಜನ ಜಾನುವಾರು, ಪ್ರಾಣಿ-ಪಕ್ಷಿಗಳಿಗೆ ಜೀವಜಲ ಲಭಿಸುತ್ತದೆ. ಇಂತಹ ಸಾರ್ವಜನಿಕ ಕಳಕಳಿಯ ಪುಣ್ಯದ ಕಾರ್ಯಕ್ಕೆ ಎಲ್ಲರ ಸಹಕಾರ ಅತ್ಯಗತ್ಯ’ ಎಂದು ಹೇಳಿದರು.

‘ಕೆರೆಯಂ ಕಟ್ಟಿಸು, ಬಾವಿಯಂ ಸವಿಸು’
ಕೆರೆಕಟ್ಟೆಗಳು, ಬಾವಿಗಳು ಭೂಮಿಯ ಮೇಲಿನ ಜೀವ ಸಂಕುಲದ ಮೂಲಸೆಲೆಗಳಾಗಿವೆ ಎಂಬುದನ್ನರಿತು ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ಕೆರೆಗಳನ್ನು ನಿರ್ವಿುಸಿದ್ದಾರೆ. ದೇವದಾಸಿಯರೂ ಕೆರೆ ನಿರ್ವಿುಸಿದ ಉದಾಹರಣೆಗಳಿವೆ. ಇದಕ್ಕೆ ದಾವಣಗೆರೆ ಜಿಲ್ಲೆಯ ಸೂಳೆಕೆರೆ (ಶಾಂತಿ ಸಾಗರ)ಯೇ ಸಾಕ್ಷಿ. 14ನೇ ಶತಮಾನದ ಕನ್ನಡದ ಶಾಸನವೊಂದರಲ್ಲಿ ಲಕ್ಷ್ಮೀಧರಮಾತ್ಯನೆಂಬ ರಾಜನಿಗೆ ತಾಯಿ ಹಾಲು ಕುಡಿಸುವ ಸಂದರ್ಭದಲ್ಲಿಯೇ ‘ಕೆರೆಯಂ ಕಟ್ಟಿಸು, ಬಾವಿಯಂ ಸವಿಸು, ದೇವಾಗಾರಂ ಮಾಡಿಸು’ ಎಂದು ಕಿವಿಯಲ್ಲಿ ಹೇಳಿದ್ದಳು ಎಂಬುದು ಅಂದಿನ ತಾಯಿಂದಿರ ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿದೆ. ಈ ನಿಟ್ಟಿನಲ್ಲಿ ಸಾಮಾಜಿಕ ಸುಧಾರಣೆ ಮತ್ತು ಕಳಕಳಿ ಹೊಂದಿರುವ ದಿಂಗಾಲೇಶ್ವರ ಶ್ರೀಗಳು ಜನರ ಸಹಕಾರದೊಂದಿಗೆ ಕೆರೆ ಹೂಳೆತ್ತಲು ಮುಂದಾಗಿದ್ದಾರೆ.

ಈ ಕೆರೆಯಲ್ಲಿ ನೀರಿದ್ದರೆ ರೈತರು, ಜಾನುವಾರುಗಳಿಗೆ ಅನಕೂಲವಾಗುತ್ತದೆ. ಮಳೆಯ ಅಭಾವದಿಂದ ಕೆರೆಯಲ್ಲಿ ಹನಿ ನೀರು ಇಲ್ಲದಂತಾಗಿದೆ. ಈ ಕೆರೆಗೆ ಈಗ ನದಿ ನೀರು ಹರಿಸುತ್ತಿರುವುದು ಸಂತಸದ ಸಂಗತಿ. ಈ ಕೆರೆಗೆ ಕಾಯಕಲ್ಪ ನೀಡಲು ಸ್ವತಃ ಶ್ರೀಗಳೇ ಇಚ್ಛಾಶಕ್ತಿ ತೊರಿದ್ದಾರೆ. ಎಲ್ಲರೂ ಒಗ್ಗಟ್ಟಿನಿಂದ ಕಾರ್ಯಕ್ಕೆ ಮುಂದಾಗಿದ್ದೇವೆ.
| ದೇವಪ್ಪ ಮತ್ತೂರ, ತಾಪಂ ಮಾಜಿ ಸದಸ್ಯ.