ಕೆರೆ ನೀರಿನ ರಸಸಾರ ಪರೀಕ್ಷೆ

ಕೋಲಾರ/ನರಸಾಪುರ: ಕೆಸಿ ವ್ಯಾಲಿ ಯೋಜನೆಯನ್ವಯ ಜಿಲ್ಲೆಯಲ್ಲಿ ಹಾಲಿ ಕೆರೆಗಳಿಗೆ ಹರಿಸುತ್ತಿರುವ ನೀರಿನಲ್ಲಿ ರಸಸಾರ (ಪಿಎಚ್ ಮೌಲ್ಯ) ಪ್ರಮಾಣದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಸಾರ್ವಜನಿಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ತಾಲೂಕಿನ ಲಕ್ಷ್ಮೀಸಾಗರ ಕೆರೆ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕೆಸಿ ವ್ಯಾಲಿ ನೀರನ್ನು ಕೆರೆಗಳಿಗೆ ಹರಿಸಲು ಸುಪ್ರೀಂಕೋರ್ಟ್ ಅನುಮತಿ ನೀಡಿದ ಮೇಲೆ ಪ್ರತಿನಿತ್ಯ 250 ಎಂಎಲ್​ಡಿ ನೀರು ಹರಿಯುತ್ತಿದೆ. ಸಿಂಗೇಹಳ್ಳಿ ಹಾಗೂ ಲಕ್ಷ್ಮೀಸಾಗರ ಕೆರೆ ನೀರಿನ ಮಾದರಿ ಪರೀಕ್ಷಿಸಲಾಗಿ ನೀರಿನ ರಸಸಾರ ಪ್ರಮಾಣ 7ರಿಂದ 7. 50 ರಷ್ಟು ಇರುವುದು ದೃಢಪಟ್ಟಿದೆ ಎಂದರು.

ರಸಸಾರ 7 ರಿಂದ 9ರಷ್ಟು ಇದ್ದರೆ ಕುಡಿಯುವ ಗುಣಮಟ್ಟದ ನೀರು. ಸಿಂಗೇಹಳ್ಳಿ ಕೆರೆ ನೀರಿನಲ್ಲಿ ರಸಸಾರ 8.5ರಷ್ಟಿದ್ದರೆ, ನರಸಾಪುರ ಕೆರೆಯ ನೀರಿನ ಪಿಎಚ್ ಮೌಲ್ಯ 9ರಷ್ಟಿದೆ. ಕೆರೆಯಲ್ಲಿ ಬೆಳೆದಿರುವ ಜೊಂಡು ತೆರವು ಕಾರ್ಯ ನಡೆಯುತ್ತಿದೆ. ನರಸಾಪುರ ಎ ಮತ್ತು ಬಿ ಬ್ಲಾಕ್​ನಿಂದ ಅಥವಾ ಕೈಗಾರಿಕೆಗಳಿಂದ ತ್ಯಾಜ್ಯಗಳು ಸೇರುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು. ಇದು ಹೊರತುಪಡಿಸಿ ನೀರಿನ ಗುಣಮಟ್ಟದಲ್ಲಿ ವ್ಯತ್ಯಾಸವಿಲ್ಲ ಎಂದು ಸ್ಪಷ್ಟಪಡಿಸಿದರು.

ಲಕ್ಷ್ಮೀಸಾಗರ ಕೆರೆಯಿಂದ ನಿತ್ಯ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ನೀರಿನ ಮಾದರಿ ಪರೀಕ್ಷಿಸುತ್ತಾರೆ. ಬಿಎಬ್ಲ್ಯುಎಸ್​ಎಸ್​ಬಿ ಆನ್​ಲೈನ್ ಮಾನಿಟರಿಂಗ್ ಮಾಡುತ್ತಿದ್ದಾರೆ. ಪಾರದರ್ಶಕತೆ ಕಾಯ್ದುಕೊಳ್ಳಲು ವೆಬ್​ಸೈಟ್​ನಲ್ಲಿ ಮಾಹಿತಿ ನೀಡಲಾಗುತ್ತಿದೆ ಎಂದರು. ಪ್ರಸ್ತುತ 14 ಕೆರೆಗಳಿಗೆ ನೀರು ತುಂಬಿದ್ದು, ಕೆರೆಗಳಲ್ಲಿ ಶೇ. 60ರಿಂದ 70 ನೀರು ತುಂಬಿದ ನಂತರ ಮುಂದಿನ ಕೆರೆಗಳಿಗೆ ನೀರು ಹರಿಸಿ ಮಳೆ ನೀರು ಕೆರೆಯಲ್ಲಿ ಸಂಗ್ರಹಕ್ಕೆ ಅವಕಾಶ ನೀಡಲಾಗುತ್ತಿದೆ ಎಂದರು. ಸಣ್ಣ ನೀರಾವರಿ ಇಲಾಖೆಯ ಎಇ ತಿಮ್ಮೇಗೌಡ, ಎಇಇ ಕೃಷ್ಣಪ್ಪ, ತಾಪಂ ಇಒ ಡಾ.ನಾರಾಯಣಸ್ವಾಮಿ, ಮಾಲಿನ್ಯ ನಿಯಂತ್ರಣ ಮಂಡಳಿ ಕ್ಷೇತ್ರ ಸಹಾಯಕ ವೆಂಕಟಾಚಲಪತಿ, ಪರಿಸರವಾದಿ ತ್ಯಾಗರಾಜ್ ಹಾಜರಿದ್ದರು.

ಬದಲಾವಣೆಗೆ ಹರ್ಷ: ನೀಲಗಿರಿ ತೆರವು ಮಾಡಿ ಎಂದು ರೈತರಿಗೆ ಎಷ್ಟು ಹೇಳಿದರೂ ತೆಗೆಯುತ್ತಿರಲಿಲ್ಲ. ನೀರು ಬರುತ್ತಿದ್ದಂತೆಯೇ ರೈತರೇ ಸ್ವಯಂ ಪ್ರೇರಣೆಯಿಂದ ನೀಲಗಿರಿ, ಅಕೇಷಿಯಾ ತೆರವು ಮಾಡುವ ಮೂಲಕ ಬದಲಾವಣೆ ಆಗುತ್ತಿದೆ ಎಂದು ಜಿಲ್ಲಾಧಿಕಾರಿ ಹರ್ಷ ವ್ಯಕ್ತಪಡಿಸಿದರು. ಲಕ್ಷ್ಮೀಸಾಗರ ಕೆರೆ ಪಕ್ಕದ ರೈತ ವೆಂಕಟರಾಜು 8 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ನೀಲಗಿರಿ ತೋಪು ತೆರವು ಮಾಡಿ ಕೃಷಿ ಹೊಂಡ ನಿರ್ವಿುಸಿ ಮೆಕ್ಕೆಜೋಳ ಬೆಳೆದು ಉಳಿದ ಜಮೀನು ಉಳುಮೆ ಮಾಡಿ ಹುರುಳಿ ಬಿತ್ತನೆ ಮಾಡಿದ್ದನ್ನು ಅವರು ವೀಕ್ಷಿಸಿದರು.

ಕೆರೆಗಳಿಗೆ ಭೇಟಿ: ಡಿಸಿ ಜೆ. ಮಂಜುನಾಥ್ ಸೀಗೇಹಳ್ಳಿ, ನರಸಾಪುರ ಹಾಗೂ ಲಕ್ಷ್ಮೀಸಾಗರ ಕೆರೆಗೆ ಭೇಟಿ ನೀಡಿದ್ದರು. ಎನ್ವಿರಾನ್​ವೆುಂಟಲ್ ಹೆಲ್ತ್ ಆಂಡ್ ಸೇಫ್ಟಿ ರಿಸರ್ಚ್ ಆಂಡ್ ಡೆವಲಪ್​ವೆುಂಟ್ ಸೆಂಟರ್ ತಜ್ಞರಾದ ವಿನೋದ್ , ರಘು ಮೂರು ಕೆರೆಗಳ ನೀರಿನ ಮಾದರಿ ಸಂಗ್ರಹಿಸಿದರು. ಲಕ್ಷ್ಮೀಸಾಗರ ಕೆರೆ ನೀರು ಹಸಿರು ಬಣ್ಣದಲ್ಲಿರದೆ ಶುದ್ಧವಾಗಿತ್ತು. ಉಳಿದ ಎರಡು ಕೆರೆಗಳ ನೀರು ಬಣ್ಣ ಸ್ವಲ್ಪ ವ್ಯತ್ಯಾಸ ಕಂಡರೂ ರಸಸಾರ ಮಾನದಂಡಕ್ಕನುಗುಣವಾಗಿತ್ತು.

Leave a Reply

Your email address will not be published. Required fields are marked *