ಕೊಕಟನೂರ: ಬೇಸಿಗೆಯಲ್ಲಿ ಅಥಣಿ ತಾಲೂಕಿನ ಪೂರ್ವ ಹಾಗೂ ಉತ್ತರ ಭಾಗದ ಗ್ರಾಮಗಳ ಜನರ ಹಾಗೂ ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸಲು ಕೆರೆ ತುಂಬಿಸುವ ಯೋಜನೆಗೆ ಆದಷ್ಟು ಬೇಗ ಪ್ರಾರಂಭಿಸಿ, ಸಮಸ್ಯೆ ದೂರ ಮಾಡಲಾಗುವುದು ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ತಾಲೂಕಿನ ಯಕ್ಕಂಚಿ ಗ್ರಾಮದಿಂದ ಚಮಕೇರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 96 ಲಕ್ಷ ರೂ. ಮೊತ್ತದ ರಸ್ತೆ ಕಾಮಗಾರಿಗೆ ಹಾಗೂ ಅಡಹಳ್ಳಟ್ಟಿಯಿಂದ ತಾಂವಶಿ ತೋಟದವರೆಗೆ 1.20 ಕೋಟಿ ರೂ. ವೆಚ್ಚದ 2 ಕಿ.ಮೀ. ರಸ್ತೆ ಡಾಂಬರೀಕರಣ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದರು.
ಕೃಷ್ಣಾ ನದಿ ದಡದಿಂದ ಅಡಹಳ್ಳಿ, ಕೋಹಳ್ಳಿ, ಅಡಹಳ್ಳಟ್ಟಿ, ಐಗಳಿ ಗ್ರಾಮ ಸೇರಿ ಸಿಂದೂರ ವರೆಗಿನ ಜನ-ಜಾನುವಾರುಗಳ ಅನುಕೂಲಕ್ಕಾಗಿ ಏಳು ಕೆರೆ ತುಂಬಿಸುವ ಯೋಜನೆಗೆ 120 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಅದರಲ್ಲಿ ಮೊದಲನೇ ಹಂತದಲ್ಲಿ 49.51 ಕೋಟಿ ರೂ. ವೆಚ್ಚದಲ್ಲಿ ಯಲ್ಲಮ್ಮನವಾಡಿ ಕೆರೆ ತುಂಬುವ ಕಾಮ ಗಾರಿಗೆ ಮಂಜೂರಾತಿ ದೊರೆತಿದೆ. ಶೀಘ್ರ ಕಾಮಗಾರಿ ಪ್ರಾರಂಭವಾಗಲಿದೆ. ವಿಶೇಷ ವಾಗಿ ತೋಟದ ವಸತಿಗೆ ಸಂಪರ್ಕ ಕಲ್ಪಿಸುವ ರಸ್ತೆ ದುರಸ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕೊಕಟನೂರ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಪಶುವೈದ್ಯಕೀಯ ಮಹಾ ವಿದ್ಯಾಲಯಕ್ಕೆ ಮೂರನೇ ಹಂತದಲ್ಲಿ ಒಟ್ಟು 27 ಕೋಟಿ ರೂ. ಮಂಜೂರಾಗಿದ್ದು, ಅದರಲ್ಲಿ ಈಗ 9 ಕೋಟಿ ರೂ. ವೆಚ್ಚದ ಕಾಮಗಾರಿಯನ್ನು ಆದಷ್ಟು ಬೇಗ ಪ್ರಾರಂ ಭಿಸಿ ಕಟ್ಟಡ ಪೂರ್ಣಗೊಳಿಸಿ ಕಾಲೇಜು ಪ್ರಾರಂಭಿಸಲಾಗುವುದು ಎಂದರು.
ಮಹಾದೇವ ನಾಗನೂರ, ಮಹಾದೇವ ಎಚ್., ಮಲ್ಲಯ್ಯ ಪೂಜಾರಿ, ಅಕ್ಷಯ ಸವದಿ, ಪಿಕೆಪಿಎಸ್ ಅಧ್ಯಕ್ಷ ಶ್ರೀಶೈಲ ತಾಂವಶಿ, ಈರಗೌಡ ಪಾಟೀಲ, ಘಟಿವಾಳಪ್ಪ ಗುಡ್ಡಾಪುರ, ಚಿದಾನಂದ ಮಠಪತಿ, ಶಿವರುದ್ರ ಗೂಳಪ್ಪನವರ, ಜಡೆಪ್ಪ ಕುಂಬಾರ, ಲಚ್ಚಪ್ಪ ಪತ್ತಾರ, ಮಹಾಂತೇಶ ಠಕ್ಕಣ್ಣವರ, ಜಿಲ್ಲಾ ಪಂಚಾಯಿತಿ ಎಇಇ ಈರಣ್ಣ ವಾಲಿ, ದಿಲೀಪ ಕಾಂಬಳೆ, ಶಂಕ್ರಯ್ಯ ಮಠಪತಿ, ಎಸ್.ಪಿ. ತಾಂವಶಿ ಇತರರಿದ್ದರು.