ಕೆರೆ ತುಂಬಿಸುವ ಯೋಜನೆ ಜಾರಿ ಮಾಡಿ

ಹಾವೇರಿ: ಯುಟಿಪಿ ಕಾಲುವೆಯಿಂದ ಕನವಳ್ಳಿ ಹಾಗೂ ಶಿಬಾರದ ಕೆರೆಗೆ ನೀರು ತುಂಬಿಸುವ ಯೋಜನೆ ಆರಂಭಿಸುವಂತೆ ಆಗ್ರಹಿಸಿ ಶಾಸಕ ನೆಹರು ಓಲೇಕಾರ ನೇತೃತ್ವದಲ್ಲಿ ಕನವಳ್ಳಿ ಹಾಗೂ ಶಿಬಾರ ಗ್ರಾಮದ ರೈತರು ಸೋಮವಾರ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ತಾಲೂಕಿನ ಸೋಮನಕಟ್ಟಿ ಗ್ರಾಮದ ಬಳಿಯ ಶಿಬಾರ ಕ್ರಾಸ್​ನಲ್ಲಿ ಹಾವೇರಿಯಿಂದ ಗುತ್ತಲಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ನೂರಾರು ರೈತರು, ಮಹಿಳೆಯರು ಖಾಲಿ ಕೊಡ, ತಳ್ಳುವ ಗಾಡಿ, ಚಕ್ಕಡಿ ತೆಗೆದುಕೊಂಡು ಬಂದು ರಸ್ತೆ ಸಂಚಾರಕ್ಕೆ ತಡೆಯೊಡ್ಡಿದರು.

ಕನವಳ್ಳಿ ಹಾಗೂ ಶಿಬಾರದ ಕೆರೆಗಳನ್ನು ತುಂಬಿಸಿದರೆ ಈ ಭಾಗದ ಸಾವಿರಾರು ರೈತರ ಜಮೀನಿಗೆ ಹಾಗೂ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಅನುಕೂಲವಾಗಲಿದೆ. 15 ದಿನದ ಹಿಂದೆ ಜಿಪಂ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಕಚೇರಿಯಲ್ಲಿದ್ದ ಪೈಪ್ ತೆಗೆದುಕೊಂಡು ಹೋಗಿ, ಕೆರೆ ತುಂಬಲು ನೀರು ತರಲು ಆ ಪೈಪ್​ಗಳನ್ನು ಬಳಕೆ ಮಾಡಲಾಗಿದೆ. ಆದರೆ ಕನವಳ್ಳಿ ಗ್ರಾಮಸ್ಥರು ಪೈಪ್​ಗಳನ್ನು ಕಳ್ಳತನ ಮಾಡಿದ್ದಾರೆ ಎಂದು ದೂರು ದಾಖಲಿಸಲಾಗಿದೆ. ಅದನ್ನು ಮರಳಿ ಪಡೆಯಬೇಕು ಎಂದು ಆಗ್ರಹಿಸಿದರು.

ಶಾಸಕ ನೆಹರು ಓಲೇಕಾರ ಮಾತನಾಡಿ, ಮಾಜಿ ಜಿಪಂ ಅಧ್ಯಕ್ಷ, ಕೊಟ್ರೇಶಪ್ಪ ಬಸೇಗಣ್ಣಿ ಅವರು ಕನವಳ್ಳಿ ಗ್ರಾಮದವರ ಮೇಲೆ ಸುಳ್ಳು ದೂರು ದಾಖಲಿಸಲು ಒತ್ತಡ ತಂದಿದ್ದಾರೆ. ಕೂಡಲೇ ಕನವಳ್ಳಿ ರೈತರ ಮೇಲಿನ ಕೇಸ್ ಹಿಂಪಡೆಯಬೇಕು. ಈಗ ಅಳವಡಿಸಿರೋ ಪೈಪ್​ಲೈನ್ ಯಾವುದೇ ಕಾರಣಕ್ಕೂ ತೆಗೆಯಬಾರದು. ಬಸೇಗಣ್ಣಿ ಪೈಪ್​ಗಳನ್ನು ಒಯ್ಯದಂತೆ ನೀಡಿರುವ ತಕರಾರು ಅರ್ಜಿ ಹಿಂಪಡೆಯಬೇಕು. ಈ ಕೂಡಲೇ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಬೇಕು ಎಂದರು.

ಜಿಪಂ ಸದಸ್ಯ ಬಸೇಗಣ್ಣಿ ವಿರುದ್ಧ ಆಕ್ರೋಶ…
ಜಿಪಂ ಸದಸ್ಯ ಕೊಟ್ರೇಶಪ್ಪ ಬಸೇಗಣ್ಣಿ ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡುವುದನ್ನು ನಿಲ್ಲಿಸಬೇಕು. ತಾಕತ್ ಇದ್ದರೆ ನನ್ನ ಮೇಲೆ ಕೇಸ್ ಹಾಕಿಸಬೇಕಿತ್ತು. ಅದು ಬಿಟ್ಟು ಅಮಾಯಕ ರೈತರ ಮೇಲೆ ಕೇಸ್ ಹಾಕಿಸಿದ್ದೀಯಾ, ನಿನ್ನಂತವನನ್ನು ಜಿಪಂಗೆ ಆಯ್ಕೆಗೊಳಿಸಿ ಜನರು ತಪ್ಪು ಮಾಡಿದ್ದಾರೆ ಎಂದು ಶಾಸಕ ಓಲೇಕಾರ ಹರಿಹಾಯ್ದರು.

ನಂತರ ಸ್ಥಳಕ್ಕೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಭೇಟಿ ನೀಡಿ ಬೇಡಿಕೆ ಈಡೇರಿಕೆಗೆ ಸರ್ಕಾರದ ಗಮನ ಸೆಳೆಯುವ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.

ಬಸವರಾಜ ಕಳಸೂರ, ಸಿ.ಎಸ್. ರಾಮನಗೌಡ್ರ, ನಾಗರಾಜ ಕೋಣನವರ, ಶಿವಕುಮಾರ ಸಂಗೂರ, ಕೆ.ಸಿ. ಕೋರಿ, ಬಾಬುಸಾಬ ಮೋಮಿನಗಾರ, ನಾಗರಾಜ ಬಸೇಗಣ್ಣಿ, ಪರಮಯ್ಯ ಮಠದ, ಪದ್ಮರಾಜ ಬಳಿಗಾರ, ರಮೇಶ ಕಾಟೇನವರ, ಪರಮೇಶಪ್ಪ ಶೀಲಿ, ಬಸವರಾಜ ಹಿರೋಜಿ, ಹೊನ್ನಪ್ಪ ಓಲೇಕಾರ, ಮಂಜಣ್ಣ ಕಡ್ಲಿ, ಪುಟ್ಟಪ್ಪ ಗೋಪಾಳಿ, ಭರಮಗೌಡ್ರ ಹನುಮಗೌಡ್ರ ಇತರರಿದ್ದರು.

Leave a Reply

Your email address will not be published. Required fields are marked *