ಗುಂಡ್ಲುಪೇಟೆ:: ತಾಲೂಕಿನ ಮಾಲಾಪುರ ಗ್ರಾಮದ ಕೆರೆಯನ್ನು ಅತಿಕ್ರಮಿಸಿ ಉಳುಮೆ ಮಾಡುತ್ತಿರುವ ಬಗ್ಗೆ ಗ್ರಾಮಸ್ಥರು ಗುರುವಾರ ದೂರು ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಟ್ರಾೃಕ್ಟರ್ ವಶಕ್ಕೆ ಪಡೆದಿದ್ದಾರೆ.
ಗ್ರಾಮದ ಸ.ನಂ.38ರಲ್ಲಿ ಇರುವ 4.22 ಎಕರೆ ಕೆರೆಯನ್ನು ಪಕ್ಕದ ಜಮೀನಿನವರು ಅತಿಕ್ರಮಿಸಿ ಉಳುಮೆ ಮಾಡಲು ಮುಂದಾಗಿದ್ದರು. ಈ ಬಗ್ಗೆ ಗ್ರಾಮಸ್ಥರು ಪ್ರಶ್ನಿಸಿದರೂ ಲೆಕ್ಕಿಸದೆ ಟ್ರ್ಯಾಕ್ಟರ್ ಬಳಸಿ ಏರಿಯನ್ನು ಒಡೆದು ನೀರು ನಿಲ್ಲುತ್ತಿದ್ದ ಸ್ಥಳವನ್ನು ಸಮತಟ್ಟು ಮಾಡುತ್ತಿದ್ದರು. ಇದರಿಂದ ಗ್ರಾಮದ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಬಗ್ಗೆ ಆತಂಕಗೊಂಡ ಗ್ರಾಮಸ್ಥರು ತೆರಕಣಾಂಬಿ ನಾಡಕಚೇರಿ ಹಾಗೂ ಪೊಲೀಸರಿಗೆ ದೂರು ನೀಡಿದರು.
ಈ ಹಿನ್ನೆಲೆಯಲ್ಲಿ ತೆರಕಣಾಂಬಿ ಪೊಲೀಸ್ ಠಾಣೆಯ ಪಿಎಸ್‌ಐ ಮಂಜುನಾಥ್ ಹಾಗೂ ಸಿಬ್ಬಂದಿ ಗ್ರಾಮಕ್ಕೆ ತೆರಳಿ ಸ್ಥಳ ಪರಿಶೀಲಿಸಿದರು. ಒತ್ತುವರಿ ಮಾಡಲು ಮುಂದಾಗಿದ್ದವರು ಸ್ಥಳದಲ್ಲಿ ಇಲ್ಲದ ಕಾರಣ ಕೆರೆ ಒತ್ತುವರಿಗೆ ಬಳಸಲಾಗುತ್ತಿದ್ದ ಟ್ರ್ಯಾಕ್ಟರ್ ವಶಕ್ಕೆ ಪಡೆದುಕೊಂಡಿದ್ದಾರೆ.