ಕೆರೆ ಅಭಿವೃದ್ಧಿಗೆ ಅನುದಾನ

ದೊಡ್ಡಬಳ್ಳಾಪುರ: ಕೆರೆ ಅಭಿವೃದ್ಧಿಗೆ ಆರ್ಥಿಕ ನೆರವು ನೀಡುವುದಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್​ನ ಟ್ರಸ್ಟಿ ಡಿ.ಸುರೇಂದ್ರಕುಮಾರ್ ತಿಳಿಸಿದರು.

ತಾಲೂಕಿನ ಸಾಸಲು ಗ್ರಾಮದ ಚಿನ್ನಮ್ಮನ ಕೆರೆಗೆ ಭೇಟಿ ನೀಡಿದ್ದ ವೇಳೆ ಗ್ರಾಮಸ್ಥರೊಂದಿಗೆ ಸಂವಾದದಲ್ಲಿ ಮಾತನಾಡಿದರು. ಗ್ರಾಮಾಂತರ ಜಿಲ್ಲೆಯಲ್ಲಿ ಜನರ ಸಹಭಾಗಿತ್ವದಲ್ಲಿ ನಡೆದಿರುವ ಕೆರೆಗಳ ಅಭಿವೃದ್ಧಿ ಕಾರ್ಯ ಶ್ಲಾಘನೀಯ ಎಂದರು.

ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮಹಾಭಲೇಶ್ವರ ಭಟ್ ಮಾತನಾಡಿ, ಬ್ಯಾಂಕ್​ನಿಂದ ಕೆರೆಯ ಅಭಿವೃದ್ಧಿಗೆ ನೆರವು ನೀಡಲಾಗುವುದು. ಜಲಮೂಲಗಳ ಸಂರಕ್ಷಣೆ ಈಗಿನ ತುರ್ತು ಕೆಲಸ. ಈ ನಿಟ್ಟಿನಲ್ಲಿ ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಸಿ.ಎಸ್.ಕರೀಗೌಡ ಅವರು ಜನರ ಸಹಭಾಗಿತ್ವದಲ್ಲಿ ಕೆರೆಗಳನ್ನು ಅಭಿವೃದ್ಧಿ ಪಡಿಸುವ ಕಡೆಗೆ ಮುಂದಾಗಿರುವುದು ಪ್ರಶಂಸನೀಯ ಎಂದರು.

ಕೆರೆ ಅಂಗಳದಲ್ಲೇ ಸಾಸಲು ಗ್ರಾಮಸ್ಥರೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿ ಸಿ.ಎಸ್.ಕರೀಗೌಡ, ನೆಲಮಂಗಲ, ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲೂಕು ಸೇರಿ ಜಿಲ್ಲೆಯಲ್ಲಿ ಈವರೆಗೆ 25 ಕೆರೆಗಳ ಅಭಿವೃದ್ಧಿ ಜನರ ಸಹಭಾಗಿತ್ವದಲ್ಲಿಯೇ ನಡೆದಿದೆ. ಕೆರೆ ಅಭಿವೃದ್ಧಿಯಲ್ಲಿ ಜನರ ಪಾಲ್ಗೊಳ್ಳುವಿಕೆ ಮುಖ್ಯ. ಇಲ್ಲವಾದರೆ ಕೆರೆ ಉಳಿವು ಅಸಾಧ್ಯ ಎಂದರು.

ಈ ಹಿನ್ನೆಲೆಯಲ್ಲಿಯೇ ಕೆರೆ ಅಭಿವೃದ್ಧಿಗೆ ಸಾಮಾನ್ಯ ಕೂಲಿ ಕಾರ್ವಿುಕರು ಸೇರಿ ಎಲ್ಲರಿಂದಲೂ ಹಣ ಪಡೆಯಲಾಗಿದೆ. ಮೊತ್ತ ಎಷ್ಟು ಕೊಡುತ್ತಾರೆ ಎನ್ನುವುದಷ್ಟೇ ಮುಖ್ಯವಲ್ಲ, ಕೆರೆ ಕೆಲಸಕ್ಕೆ ನಾನು ಹಣ ನೀಡಿದ್ದೇನೆ ಎನ್ನುವ ಮನೋಭಾವನೆ ಜನರಲ್ಲಿ ಬರಬೇಕು. ಹೀಗಾಗಿ ಸಾಸಲು ಗ್ರಾಮದ ಪ್ರತಿಯೊಬ್ಬರೂ ಕೆರೆ ಅಭಿವೃದ್ಧಿಗೆ ಕೈಲಾದಷ್ಟು ದೇಣಿಗೆ ನೀಡುವ ಮೂಲಕ ಮುಂದಾಳತ್ವ ವಹಿಸಬೇಕು ಎಂದರು.

ಇದು ಯಾರೋ ಒಬ್ಬ ಗುತ್ತಿಗೆ ಪಡೆದು ಮಾಡಿಸುವ ಕೆಲಸ ಅಲ್ಲ. ಕೆರೆಯಿಂದ ಮಣ್ಣನ್ನು ರೈತರು ಹೊಲ, ತೋಟಗಳಿಗೆ ಸಾಗಣೆ ಮಾಡಿಕೊಂಡು ಭೂಮಿಯ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದರು.

Leave a Reply

Your email address will not be published. Required fields are marked *