ಕಂಪ್ಲಿ: ತಾಲೂಕಿನ ರಾಮಸಾಗರ ಗ್ರಾಪಂ ವ್ಯಾಪ್ತಿಗೊಳಪಡುವ ವಿಠ್ಠಲಾಪುರ ಕೆರೆಯ ತೂಬುಗಳು ಶಿಥಿಲಗೊಂಡು ನೀರು ಸೋರಿಕೆಯಾಗುತ್ತಿದೆ. ಇದರಿಂದ ಕೆರೆಯಲ್ಲಿ ಕ್ರಮೇಣ ನೀರು ಕಡಿಮೆಯಾಗುತ್ತಿದೆ.

ವಿಠ್ಠಲಾಪುರ ಕೆರೆ ರಾಮಸಾಗರ ಗ್ರಾಮ ವ್ಯಾಪ್ತಿಗೆ 118.42 ಎಕರೆ ಹಾಗೂ ಕಣಿವೆ ತಿಮ್ಮಲಾಪುರ ಗ್ರಾಮದ ವ್ಯಾಪ್ತಿಗೆ 39.21ಎಕರೆ ಸೇರಿ ಒಟ್ಟು 157.63 ಎಕರೆ ವಿಸ್ತೀರ್ಣ ಹೊಂದಿದೆ. 15 ಎಂಸಿಎಫ್‌ಟಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. ರಾಮಲಿಂಗಯ್ಯನ ಗುಡಿ ಹಿಂದಿನ ತೂಬು ಸೇರಿ ಕೆರೆಯ ಮೂರು ತೂಬುಗಳು ಶಿಥಿಲಗೊಂಡಿದ್ದು, ತೂಬಿನ ಕಟ್ಟಡ ಅಲ್ಲಲ್ಲಿ ಬಿದ್ದು ಹೋಗಿದೆ. ತೂಬಿನೊಳಗೆ ಹೂಳು ತುಂಬಿ ಬ್ಲಾಕ್ ಆಗಿದೆ. ಇದರಿಂದಾಗಿ ತೂಬಿನ ಮೂಲಕ ಸಮರ್ಪಕವಾಗಿ ನೀರು ಹರಿಯದಂತಾಗಿದೆ.
ತೂಬುಗಳು ಶಿಥಿಲಗೊಂಡಿದ್ದರಿಂದ ನೀರು ಸದಾ ಸೋರಿಕೆಯಾಗಿ ಕೆರೆಯಲ್ಲಿ ನೀರು ನಿಲ್ಲುತ್ತಿಲ್ಲ. ಕಡೆ ಅಂಚಿನ ಭೂಮಿಗೆ ನೀರು ತಲುಪುತ್ತಿಲ್ಲ. ಕೆರೆಯಲ್ಲಿ ಹೂಳು ಹೆಚ್ಚಿರುವುದರಿಂದ ನೀರಿನ ಸಂಗ್ರಹ ಕಡಿಮೆಯಾಗಿದೆ. ಕೆರೆಯ ಮೂರು ತೂಬುಗಳನ್ನು ಆಧುನೀಕರಿಸುವಂತೆ ಕಳೆದ ಮೂರ‌್ನಾಲ್ಕು ವರ್ಷಗಳಿಂದ ರೈತರು ಅಧಿಕಾರಿಗಳನ್ನು ಒತ್ತಾಯಿಸಿದ್ದರೂ ಪ್ರಯೋಜನವಾಗಿಲ್ಲ. ತುರ್ತಾಗಿ ತೂಬುಗಳನ್ನು ಆಧುನೀಕರಿಸಬೇಕು. ಹೂಳೆತ್ತಿಸಿ ಸಂಗ್ರಹ ಸಾಮರ್ಥ್ಯಹೆಚ್ಚಿಸಬೇಕು ಎಂದು ರೈತರಾದ ಎಚ್.ಶಿವಶಂಕರಗೌಡ, ಬಿ.ನಾರಾಯಣಪ್ಪ, ಎಚ್.ಸಿ.ನಾಗರಾಜಗೌಡ, ಕಾಳಿ ರಾಮಪ್ಪ, ಕಾಳಿ ಚಂದ್ರಪ್ಪ, ಹರಿಜನ ಈರಣ್ಣ, ಎಚ್.ವೀರಭದ್ರಗೌಡ, ದಾಸರ ರಂಗ್ಪ, ಹರಿಜನ ತಿಪ್ಪಯ್ಯ, ಕೆ.ಸಿದ್ದೇಶ್ ಸೇರಿ ರೈತರು ಆಗ್ರಹಿಸಿದ್ದಾರೆ.