ಹೆಬ್ರಿ: ಸ್ವಾತಂತ್ರೃದ ಅಮೃತ ಮಹೋತ್ಸವದ ಅಂಗವಾಗಿ ಪ್ರತಿ ಜಿಲ್ಲೆಯಲ್ಲಿ 75 ಕೆರೆಗಳನ್ನು ನಿರ್ಮಿಸುವ ಕೇಂದ್ರ ಸರ್ಕಾರದ ಆದೇಶದಂತೆ ಹೆಬ್ರಿ ತಾಲೂಕಿನಲ್ಲಿ ಕುಚ್ಚೂರಿನ ಬೀಡಿ ಬೆಟ್ಟು ಕೆರೆ, ಮುದ್ರಾಡಿಯ ಜಕ್ಕಾನಾಡಿ ಕೆರೆ, ಶಿವಪುರ ಪಂಜರ ಕೆರೆ, ಶಿವಪುರ ಶಂಕರ ದೇವಸ್ಥಾನ ಕೆರೆ, ಅಲ್ಬಾಡಿ ಮಾಬ್ಳಿ ಕೆರೆ ನಿರ್ಮಾಣಗೊಳ್ಳಲಿದೆ. ಮೊದಲ ಹಂತವಾಗಿ ಕೆರೆಬೆಟ್ಟುನಲ್ಲಿರುವ ಕೆರೆ ನಿರ್ಮಾಣಗೊಂಡು ಉದ್ಘಾಟನೆಗೆ ಸಿದ್ಧವಾಗಿದೆ. 75ನೇ ಸ್ವಾತಂತ್ರ್ಯೋತ್ಸವದ ಸವಿ ನೆನಪಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಅಜಾದಿ ಕಿ ಅಮೃತ ಮಹೋತ್ಸವ ಕಾರ್ಯಕ್ರಮದಡಿ ಮಿಷನ್ ಅಮೃತ ಸರೋವರ ಯೋಜನೆ ಜಾರಿಗೊಳಿಸಿದ್ದು, ಗ್ರಾಮೀಣ ಭಾಗದಲ್ಲಿ ಅಂತರ್ಜಲ ವೃದ್ಧಿಗೆ ಪೂರಕವಾಗುವಂತೆ ಕೆರೆ, ಕಾಲುವೆಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ. ನಶಿಸಿ ಹೋಗುತ್ತಿರುವ ಜಲಮೂಲಗಳ ಸಂರಕ್ಷಣಾ ಕಾರ್ಯ ನಡೆಯಲಿದೆ. ಕನಿಷ್ಠ 1 ಎಕರೆ ವಿಸ್ತೀರ್ಣ ಹೊಂದಿರುವ 10 ಸಾವಿರ ಕ್ಯೂಬಿಕ್ ಮೀಟರ್ ನೀರು ಸಂಗ್ರಹವಾಗುವ 75 ಕೆರೆಗಳನ್ನು ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಸೂಚಿಸಿದೆ.
ಇದರಂತೆ ಈ ಯೋಜನೆಯಡಿ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಶಿವಪುರ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಕೆರೆಬೆಟ್ಟು ಕೆರೆ ನಿರ್ಮಾಣಗೊಂಡಿದ್ದು, ಜಲಮೂಲಗಳ ಪುನಶ್ಚೇತನಕ್ಕೆ ವಿನೂತನ ಹೆಜ್ಜೆ ಇಡಲಾಗಿದೆ. ಆ. 15ರಂದು ಈ ಕೆರೆ ಲೋಕಾರ್ಪಣೆಗೊಳ್ಳಲಿದೆ.
2022-23 ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ರೂ. 6 ಲಕ್ಷ ಮೊತ್ತ ಹಾಗೂ ಪಶು ಸಂಗೋಪನಾ ಇಲಾಖೆಯಡಿ ರೂ. 2.50 ಲಕ್ಷ ಮೊತ್ತ ಒಟ್ಟು ರೂ 8.50 ಲಕ್ಷ ಅನುದಾನದಲ್ಲಿ ಕೆರೆಯ ಕಾಮಗಾರಿ ಕೈಗೊಳ್ಳಲಾಗಿದೆ. ದಟ್ಟ ಕಾಡಿನ ನಡುವೆ ಶಿವಪುರ ಕೆರೆ ನಿರ್ಮಾಣವಾಗಿದೆ. ಈ ಕೆರೆಯ ಒಟ್ಟು ವಿಸ್ತೀರ್ಣ 0.72 ಎಕರೆ ಆಗಿದ್ದು, 50 ಮೀಟರ್ ಉದ್ದ ಹಾಗೂ 40 ಮೀಟರ್ ಅಗಲ ಇದೆ. ಕೆರೆ ಅಂದಾಜು 54,37,500 ಲೀಟರ್‌ನಷ್ಟು ನೀರು ಸಂಗ್ರಹ ಸಾಮಾರ್ಥ್ಯ ಹೊಂದಿದೆ. ಅಂತರ್ಜಲ ವೃದ್ಧಿಯ ಜೊತೆಗೆ ಕೃಷಿ ಚಟುವಟಿಕೆಗಳಿಗೂ ಸಹಕಾರಿಯಾಗಲಿದೆ.
ಕೆರೆ ನಿರ್ವಹಣಾ ಸಮಿತಿ ರಚನೆ: ಕೃಷಿಗೆ ನೀರು ಹಾಯಿಸಲು, ಕೆರೆಯ ಅಭಿವೃದ್ಧಿ, ಹೂಳು ಎತ್ತಲು ಹಾಗೂ ಇನ್ನಿತರ ನಿರ್ವಹಣೆಗಾಗಿ ಕೆರೆ ನಿರ್ಮಾಣ ಸಮಿತಿ ರಚಿಸಲಾಗಿದೆ. ಪಂಚಾಯಿತಿ ಅಧ್ಯಕ್ಷರು ಸಮಿತಿಯ ಅಧ್ಯಕ್ಷರಾಗಿದ್ದು ಎಂಟು ಜನ ಸದಸ್ಯರನ್ನು ಹೊಂದಿರುತ್ತದೆ.
ಅಮೃತ ಸರೋವರ ಯೋಜನೆಯಲ್ಲಿ ಈ ಹಿಂದೆ ಇದ್ದ ಕೆರೆಗಳಿಗೆ ಮರು ಜೀವ ನೀಡಿ ಸದಾ ನೀರು ಇರುವಂತೆ ಅದನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಕಾಲಕಾಲಕ್ಕೆ ಕ್ರಮಪ್ರಕಾರವಾಗಿ ಕೆಲಸಕಾರ್ಯಗಳು ನಡೆಯುವುದರಿಂದ ಅಂತರ್ಜಲ ಮಟ್ಟ ವೃದ್ಧಿಯಾಗುತ್ತದೆ.
ಅಮೃತ ಸರೋವರ ಯೋಜನೆಯಲ್ಲಿ ಕೆರೆಗಳಿಗೆ ಮರುಜೀವ ನೀಡಲಾಗುತ್ತದೆ. ತಾಲೂಕಿನಲ್ಲಿ 4 ಕೆರೆ ನಿರ್ಮಿಸಲು ಆದೇಶವಿದ್ದು, ನಾವು ಆರು ಕೆರೆಗಳನ್ನು ನಿರ್ಮಿಸಲು ಯೋಜನೆ ರೂಪಿಸಿದ್ದೇವೆ. ಕೆರೆಗಳ ನಿರ್ಮಾಣದಿಂದ ನೀರಿನ ಸಂರಕ್ಷಣೆ, ಅಂತರ್ಜಲ ವೃದ್ಧಿ, ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ಸಿಗುತ್ತದೆ. ಮುಂದಿನ ದಿನಗಳಲ್ಲಿ ಈ ಕೆರೆಯಿಂದ ಸರ್ಕಾರಿ ಗೋಶಾಲೆಗೆ ನೀರು ಪೂರೈಕೆಯಾಗಲಿದೆ.
-ಶಶಿಧರ್ ಕೆ.ಜೆ., ಇಒ, ಹೆಬ್ರಿ ತಾಪಂ.
ಕೆರೆ ನಿರ್ಮಾಣದಿಂದ ಸ್ಥಳೀಯ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ. ಪ್ರಧಾನಿ ಆಶಯದಂತೆ ನಮ್ಮ ಗ್ರಾಮ ಪಂಚಾಯಿತಿಯಲ್ಲಿ ಯಶಸ್ವಿಯಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ.
-ಶಿವಪುರ ಶೇಖರ್ ಶೆಟ್ಟಿ, ಅಧ್ಯಕ್ಷರು ಶಿವಪುರ ಗ್ರಾಮ ಪಂಚಾಯಿತಿ