ಕೆರೆಗೆ ವಿಷ, ಮೀನುಗಳ ದುರ್ಮರಣ

ಮಳವಳ್ಳಿ : ತಾಲೂಕಿನ ನೆಲ್ಲೂರು ಗ್ರಾಮದಲ್ಲಿರುವ ಹರಳಿಕಟ್ಟೆ ಕೆರೆ ನೀರಿಗೆ ಕಿಡಿಗೇಡಿಗಳು ವಿಷಕಾರಕ ಔಷಧ ಬೆರೆಸಿದ ಪರಿಣಾಮ ನೂರಾರು ಮೀನುಗಳು ಮೃತಪಟ್ಟಿವೆ.

ನೆಲಮಾನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿರುವ ಈ ಕೆರೆಯನ್ನು ಮೀನು ಸಾಕಣೆಗೆಂದು ಗುತ್ತಿಗೆ ನೀಡಿದ್ದು, ಕಳೆದ ರಾತ್ರಿ ದುಷ್ಕರ್ಮಿಗಳು ಕೆರೆ ನೀರಿಗೆ ಕ್ರಿಮಿನಾಶಕ ಹಾಕಿರುವ ಪರಿಣಾಮ ಮೀನುಗಳು ಮೃತಪಟ್ಟಿವೆ ಎನ್ನಲಾಗಿದೆ.

ತಾಪಂ ಇಒ ಸತೀಶ್, ತಾಲೂಕು ವೈದ್ಯಾಧಿಕಾರಿ ಡಾ.ವೀರಭದ್ರಪ್ಪ, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಪೂಜಾಶ್ರೀ ಸೇರಿ ಇತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ನೀರು ಕಲುಷಿತಗೊಂಡಿರುವುದನ್ನು ದೃಢಪಡಿಸಿದ್ದಾರೆ. ಜಾನುವಾರುಗಳು ನೀರು ಸೇವಿಸದಂತೆ ಮುಂಜಾಗ್ರತಾ ಕ್ರಮವಾಗಿ ಕೆರೆ ಬಳಿ ಗ್ರಾಪಂ ವತಿಯಿಂದ ಸೂಚನಾ ಫಲಕ ಹಾಕಲಾಗಿದೆ.

ಕೆರೆಯಲ್ಲಿ ಮೀನುಗಳು ಮೃತಪಟ್ಟಿರುವುದರಿಂದ ಪಕ್ಕದ ಗ್ರಾಮಕ್ಕೆ ದುರ್ವಾಸನೆ ಬೀರುತ್ತಿದೆ. ಪ್ರಾಣಿ-ಪಕ್ಷಿಗಳು ನೀರು ಕುಡಿದು ಅನಾಹುತ ಸಂಭವಿಸುವ ಮೊದಲು ಕೆರೆಯಲ್ಲಿನ ಕಲುಷಿತ ನೀರನ್ನು ಹೊರಹಾಕುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.