ಕೆರೆಗಳು ಕಸಮುಕ್ತವಾಗಲಿ


ಶಿರಸಿ:ನಗರದಲ್ಲಿ ಸ್ವಚ್ಛತೆಗಾಗಿ ಜೀವಜಲ ಕಾರ್ಯಪಡೆ ಮತ್ತಿತರ ಸಂಘಟನೆಗಳು ಸ್ವಯಂ ಪ್ರೇರಿತವಾಗಿ ಶ್ರಮಿಸುತ್ತಿವೆ. ಇನ್ನೊಂದೆಡೆ ಸ್ವಚ್ಛತೆಯ ಕಲ್ಪನೆಯೇ ಇಲ್ಲದಂತೆ ಬೇಕಾಬಿಟ್ಟಿಯಾಗಿ ತ್ಯಾಜ್ಯ ಎಸೆಯುವವರ ಸಂಖ್ಯೆಗೂ ಕೊರತೆ ಇಲ್ಲ. ಹೀಗಾಗಿ, ಸ್ವಚ್ಛತೆಗಾಗಿ ಶ್ರಮ ವ್ಯರ್ಥವಾಗತೊಡಗಿದೆ.

ಹೌದು, ನಗರ ಇಂಥದೊಂದು ದ್ವಂದ್ವ ಎದುರಿಸುತ್ತಿದೆ. ಪೌರ ಕಾರ್ವಿುಕರು, ಸ್ವಯಂ ಪ್ರೇರಿತ ತಂಡಗಳು, ಸಂಘಟನೆಗಳು ಹಗಲಿಡೀ ಶ್ರಮ ವಹಿಸಿ ಜಾಗ ಸ್ವಚ್ಛಗೊಳಿಸಿದರೆ, ಜವಾಬ್ದಾರಿ ಇಲ್ಲದ ಜನ ಇಲ್ಲಿ ಕಸ ಎಸೆಯುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ನಗರದಲ್ಲಿ ನೀರಿನ ಸಮಸ್ಯೆ ಉಂಟಾದಾಗ ಅಂದಿನ ಉಪವಿಭಾಗಾಧಿಕಾರಿ ಕೆ. ರಾಜು ಮೊಗವೀರ ಅವರು ಸ್ಥಳೀಯರ ಸಭೆ ಕರೆದು ಪರಿಹಾರೋಪಾಯಕ್ಕಾಗಿ ರ್ಚಚಿಸಿದರು. ಇದರ ಫಲವಾಗಿ ಉದ್ಯಮಿ ಶ್ರೀನಿವಾಸ ಹೆಬ್ಬಾರ ನೇತೃತ್ವದಲ್ಲಿ ಶಿರಸಿ ಜೀವಜಲ ಕಾರ್ಯಪಡೆ ಜನ್ಮ ತಳೆಯಿತು. ದಾನಿಗಳ ಸಹಕಾರದೊಂದಿಗೆ ನಗರ ಮತ್ತು ತಾಲೂಕಿನ ಕೆರೆಗಳ ಹೂಳೆತ್ತಿ ಅಭಿವೃದ್ಧಿಗೊಳಿಸುವ ಮಹತ್ತರವಾದ ಜಲ ಕಾಯಕಲ್ಪ ಆರಂಭಗೊಂಡಿದೆ. ನಗರದ ಆನೆಹೊಂಡ ಕೆರೆ, ರಾಯರಕೆರೆ, ಬಶೆಟ್ಟಿಕೆರೆ, ಬೆಳ್ಳಕ್ಕಿ ಕೆರೆ, ಶಂಕರಹೊಂಡ ಸೇರಿ 15ಕ್ಕೂ ಅಧಿಕ ಕೆರೆಗಳು ಸ್ಥಳೀಯರ ನೇತೃತ್ವದೊಂದಿಗೆ, ಜೀವಜಲ ಕಾರ್ಯಪಡೆ ಹೂಳೆತ್ತಿ ಅಭಿವೃದ್ಧಿಗೊಳಿಸಿದೆ. ಈ ಕೆರೆಗಳನ್ನು ಪ್ರವಾಸಿ ತಾಣವಾಗಿ ರೂಪಿಸಲಾಗಿದೆ.

ಆದರೆ, ಕಳೆದೊಂದು ವರ್ಷದಿಂದ ಅನಾಗರಿಕರ ಲಕ್ಷ್ಯೂ ಈ ಕೆರೆಗಳೆಡೆ ತಿರುಗಿದೆ. ಸ್ವಚ್ಛ ಸುಂದರವಾದ ಈ ಜಾಗಕ್ಕೆ ಪಡ್ಡೆ ಹುಡುಗರ ದಂಡು ಬರಲಾರಂಭಿಸಿವೆ. ಮೋಜು- ಮಸ್ತಿಯೂ ಇಲ್ಲಿ ಜೋರಾಗಿ ನಡೆದು, ಸ್ವಚ್ಛಗೊಳಿಸಿದ ಕೆರೆಯ ಅಂಗಳಗಳನ್ನೇ ತಮ್ಮ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಖಾಲಿ ಮಾಡಿದ ಬಾಟಲಿಗಳನ್ನು ಕೂಡ ಅಲ್ಲಿಯೇ ಒಡೆದು ಹಾಕಿ ವಿಕೃತಿ ಮೆರೆಯುತ್ತಿದ್ದಾರೆ.

ಶಿರಸಿ ಜೀವಜಲ ಕಾರ್ಯಪಡೆ ಸದಸ್ಯರು, ವಿವಿಧ ಸಂಘಟನೆಗಳು ಮುಂದಾಗಿ ಯಾರೋ ಎಸೆದ ತ್ಯಾಜ್ಯಗಳನ್ನು ಹಲವು ಬಾರಿ ಸ್ವಚ್ಛಗಳಿಸಿದ್ದಾರೆ. ಕೆರೆಯಲ್ಲಿ ಎಸೆದ ತ್ಯಾಜ್ಯವನ್ನು ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಅವರೂ ನೀರಿಗಿಳಿದು ಸ್ಚಚ್ಛಗೊಳಿಸಿದ್ದಾರೆ. ನಂತರದ ದಿನಗಳಲ್ಲಿಯೂ ಕೆರೆ ದಡದಲ್ಲಿ ಮೋಜು ಮಾಡಿ ಹೊಲಸು ಮಾಡುವ ಹಾಗೂ ನಂತರದಲ್ಲಿ ಕಾರ್ಯಪಡೆಯಿಂದ ಸ್ವಚ್ಛತೆ ಮಾಡುವ ಕೆಲಸ ನಡೆದುಕೊಂಡು ಬಂದಿದೆ. ಇದಕ್ಕೊಂದು ಕೊನೆ ಕಾಣಿಸಬೇಕಾಗಿದ್ದು, ಸಾರ್ವಜನಿಕರು ಜಾಗೃತಿ ವಹಿಸಬೇಕಿದೆ. ನಗರವನ್ನು, ಕೆರೆಗಳನ್ನು ಸುಂದರವಾಗಿಸಲು ಪಣ ತೊಡಬೇಕಿದೆ.

ಪ್ರಜ್ಞಾವಂತ ಜನರು, ಬ್ಯಾಂಕ್ ಉದ್ಯೋಗಿಗಳು ಸಹ ಕಸ ಎಸೆಯುತ್ತಾರೆ ಮತ್ತು ಕೆರೆ ದಡದಲ್ಲಿ ಪಾರ್ಟಿ ನಡೆಸುತ್ತಿದ್ದಾರೆ. ನಗರ ಸೌಂದರ್ಯದ ಕನಿಷ್ಠ ಕಲ್ಪನೆಯನ್ನಾದರೂ ಅವರು ಬೆಳೆಸಿಕೊಂಡು ಸಹಕರಿಸಬೇಕು.

| ಶ್ರೀನಿವಾಸ ಹೆಬ್ಬಾರ

ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ

Leave a Reply

Your email address will not be published. Required fields are marked *