ಕೆರೆಗಳನ್ನು ಅಭಿವೃದ್ಧಿಗೊಳಿಸಿ ನೀರಿಂಗಿಸಿಕೊಳ್ಳಿ

ಶಿರಸಿ: ಪಶ್ಚಿಮ ಘಟ್ಟದ ನದಿ ನೀರನ್ನು ತಿರುಗಿಸಿ ಬೆಂಗಳೂರು ಜನತೆಯ ನೀರಿನ ದಾಹ ತೀರಿಸಲು ಸಾಧ್ಯವಿಲ್ಲ. ಹಾಗೊಮ್ಮೆ ಒಯ್ದರೂ ಇಲ್ಲಿ ಉಂಟಾಗುವ ಸಮಸ್ಯೆ ಗಳು ಗಂಭೀರವಾಗಿರಲಿವೆ. ಅದರ ಬದಲು ಅಲ್ಲಿಯ ಕೆರೆಗಳನ್ನು ಅಭಿವೃದ್ಧಿ ಗೊಳಿಸಿ ನೀರಿಂಗಿಸಿಕೊಳ್ಳಿ ಎಂಬ ಅಭಿಪ್ರಾಯ ನಗರದ ಚಿಂತಕರು, ಸಾಹಿತಿ ಗಳು, ವಿಜ್ಞಾನಿಗಳಿಂದ ವ್ಯಕ್ತಗೊಂಡಿದೆ.

ಇಲ್ಲಿಯ ಲಯನ್ಸ್ ಸಭಾಭವನದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಜೀವ ಜಲ ಸಂವಾದ- ಸಂವಹನ ಕಾರ್ಯಕ್ರಮದಲ್ಲಿ ಈ ಅಭಿಪ್ರಾಯ ವ್ಯಕ್ತಗೊಂಡಿತು.

ಪರಿಸರ ಬರಹಗಾರ ಶಿವಾನಂದ ಕಳವೆ ಮಾತನಾಡಿ, ‘ಬೆಂಗಳೂರಿನಲ್ಲಿ ಮಳೆ ಸುರಿದರೂ ಅದು ಬಳಕೆಯಾಗುತ್ತಿಲ್ಲ. ಸುಮಾರು 40 ಟಿಎಂಸಿ ನೀರು ಚರಂಡಿ, ರಾಜ ಕಾಲುವೆ ಮೂಲಕ ವೃಷಭಾವತಿ ಸೇರುತ್ತಿದೆ. ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ಸಾಗಿಸುವ ತ್ಯಾಗರಾಜ ಸಮಿತಿ ವರದಿ ಹಲವು ಗೊಂದಲಗಳನ್ನು ಸೃಷ್ಟಿಸಲಿದೆ. ಈಗ ಮಳೆ ಅಭಾವದಿಂದಾಗಿ ಮಲೆನಾಡಿನಲ್ಲಿಯೂ ನೀರಿನ ಸಮಸ್ಯೆ ಕಾಡುತ್ತಿದೆ’ ಎಂದರು.

ನೇತ್ರ ತಜ್ಞ ಶಿವರಾಮ ಕೆ.ವಿ. ಮಾತನಾಡಿ, ನೀರು ಅಪವ್ಯಯ ಮಾಡದೆ ಮರುಬಳಕೆಯ ಮಾದರಿಗಳ ಪ್ರದರ್ಶನ ಆಗಬೇಕು. ಅದನ್ನು ಬಿಟ್ಟು ನೀರಿಲ್ಲದ ನದಿಗಳಿಂದ ನೀರನ್ನು ಕೊಂಡೊಯ್ಯಲು ಮುಂದಾಗಿರುವ ಸರ್ಕಾರದ ಖಾಲಿ ಪೈಪ್ ಯೋಜನೆಗೆ ಅವಕಾಶ ನೀಡಬಾರದು. ಜನರು ನೀಡುವ ತೆರಿಗೆ ಹಣದಿಂದಲೇ ಈ ರೀತಿಯ ದುಬಾರಿ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಇದು ತಪ್ಪಬೇಕಿದೆ ಎಂದರು.

ಡಾ. ಜಿ. ಎ. ಹೆಗಡೆ ಸೋಂದಾ, ಶ್ರೀಕಾಂತ ಹೆಗಡೆ, ತ್ರಿವಿಕ್ರಮ ಪಟವರ್ಧನ, ಎಂ. ಎಂ. ಭಟ್, ಎನ್.ವಿ.ಜಿ. ಭಟ್ ಇತರರಿದ್ದರು. ಸಭೆಯಲ್ಲಿ ರ್ಚಚಿತವಾದ ವಿಷಯವನ್ನು ಲಯನ್ಸ್ ಸಂಸ್ಥೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ರಾಜ್ಯಪಾಲರಿಗೆ ಸಲ್ಲಿಸಲಿದೆ.

Leave a Reply

Your email address will not be published. Required fields are marked *