ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಇಲ್ಲ ಎಐಸಿಸಿ ನಿರ್ಧಾರ: ಊಹಾಪೋಹಕ್ಕೆ ತಾತ್ಕಾಲಿಕ ತೆರೆ

ಬೆಂಗಳೂರು: ಲೋಕಸಭಾ ಚುನಾವಣೆ ಫಲಿತಾಂಶ ಆಧಾರದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಹರಿದಾಡುತ್ತಿದ್ದ ಊಹಾಪೋಹಕ್ಕೆ ತಾತ್ಕಾಲಿಕವಾಗಿ ತೆರೆ ಬಿದ್ದಿದ್ದು, ಸದ್ಯಕ್ಕೆ ಅಧ್ಯಕ್ಷರನ್ನು ಬದಲಿಸದಂತೆ ಎಐಸಿಸಿ ನಿರ್ಧರಿಸಿದೆ ಎಂದು ಕಾಂಗ್ರೆಸ್​ನ ಉನ್ನತ ಮೂಲಗಳು ತಿಳಿಸಿವೆ.

ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿರುವುದು ನಿಜ. ಹಾಗೆಂದು ಕರ್ನಾಟಕದ ಫಲಿತಾಂಶಕ್ಕೆ ಕೆಪಿಸಿಸಿ ಅಧ್ಯಕ್ಷರೊಬ್ಬರೇ ಹೊಣೆಯಲ್ಲ, ಇಡೀ ದೇಶದಲ್ಲಿ ಮೋದಿ ಅಲೆ ಇತ್ತು. ಅಚ್ಚರಿ ಫಲಿತಾಂಶ ಬಂದಿದೆ. ಈ ಕಾರಣಕ್ಕೆ ಕೆಪಿಸಿಸಿ ಅಧ್ಯಕ್ಷರ ತಲೆದಂಡ ಮಾಡುವ ಬಗ್ಗೆ ಎಐಸಿಸಿ ಆಸಕ್ತಿ ತಾಳಿಲ್ಲ ಎನ್ನಲಾಗಿದೆ. ‘ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸಹಜ ಪ್ರಕ್ರಿಯೆ. ತಕ್ಷಣಕ್ಕಂತೂ ಬದಲಾವಣೆ ಇಲ್ಲ. ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾಗಿ ಮುಂದುವರಿಯುತ್ತಿದ್ದು, ಕರ್ನಾಟಕದಲ್ಲಿ ದಿನೇಶ್ ಗುಂಡೂರಾವ್ ಅಧ್ಯಕ್ಷರಾಗಿ ಇರಲಿದ್ದಾರೆ’ ಎಂದು ಕಾಂಗ್ರೆಸ್ ಹಿರಿಯ ಮುಖಂಡರೊಬ್ಬರು ವಿಜಯವಾಣಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಯಾರನ್ನೇ ಅಧ್ಯಕ್ಷರನ್ನಾಗಿ ಮಾಡಿದರೂ ತಕ್ಷಣ ಪಕ್ಷಕ್ಕೆ ಯಾವುದೇ ಅನುಕೂಲವಾಗಲ್ಲ. ಬದಲಾವಣೆ ಮಾಡುವುದರಿಂದಲೂ ಉಪಯೋಗವಾಗಲ್ಲ. ಹೀಗಾಗಿ ಇರುವ ವ್ಯವಸ್ಥೆ ಮುಂದುವರಿಯಲಿದೆ ಎಂದು ಅವರು ವಿವರಿಸಿದರು.

ಚುನಾವಣೆ ಫಲಿತಾಂಶ ವಿಶ್ಲೇಷಿಸಿ ದಿನೇಶ್ ಗುಂಡೂರಾವ್, ಎಐಸಿಸಿ ಅಧ್ಯಕ್ಷರಿಗೆ ವರದಿ ಕಳಿಸಿದ್ದರು. ವರದಿ ಕೊನೆಯಲ್ಲಿ ಈ ಫಲಿತಾಂಶದ ಹೊಣೆಯನ್ನು ನಾನೇ ಹೊರಲಿದ್ದು, ಯಾವುದೇ ಶಿಕ್ಷೆಗೆ ಸಿದ್ಧ. ಪಕ್ಷದ ಯಾವುದೇ ತೀರ್ವನಕ್ಕೆ ಬದ್ಧ ಎಂದು ಉಲ್ಲೇಖಿಸಿದ್ದರು. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಊಹಾಪೋಹ ಹರಿದಾಡಿತ್ತಲ್ಲದೆ, ಕೆಲ ಪ್ರಮುಖ ನಾಯಕರ ಹೆಸರನ್ನು ಪಕ್ಷದ ನಾಯಕರೇ ತೇಲಿಬಿಟ್ಟಿದ್ದರು.