ಕೆ.ಆರ್.ಪೇಟೆ: ಪಟ್ಟಣದ ಕೆಪಿಎಸ್‌ನ ಎಲ್‌ಕೆಜಿ ಪ್ರವೇಶಕ್ಕೆ ಬುಧವಾರದಿಂದ ಅರ್ಜಿ ವಿತರಣೆ ಮಾಡುತ್ತಿದ್ದು ಪಾಲಕರು ಸರತಿ ಸಾಲಿನಲ್ಲಿ ನಿಂತು ನೂಕುನುಗ್ಗಲು ನಡುವೆ ಅರ್ಜಿ ಪಡೆಯುತ್ತಿದ್ದಾರೆ.

ಮುಂಜಾನೆಯಿಂದಲೇ ಪಾಲಕರು ಸಾಲಿನಲ್ಲಿ ನಿಂತು ಅರ್ಜಿ ಪಡೆಯಲು ಮುಂದಾಗಿದ್ದರು. ತಾಲೂಕಿನ ಪ್ರತಿಷ್ಠಿತ ಸರ್ಕಾರಿ ಶಾಲೆಯಾಗಿ ಹೊರಹೊಮ್ಮಿರುವ ಕೆಪಿಎಸ್ ಶಾಲೆಯಲ್ಲಿ ಎಲ್‌ಕೆಜಿಯಿಂದ ದ್ವಿತೀಯ ಪಿಯುಸಿವರೆಗೆ ಶಿಕ್ಷಣ ನೀಡಲಾಗುತ್ತಿದೆ. ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವಂತೆ ಇಲ್ಲಿ ಎರಡು ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಎಲ್‌ಕೆಜಿ ಪ್ರವೇಶಕ್ಕೆ ಕೇವಲ 60 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆದ್ದರಿಂದ ಕನಿಷ್ಠ 150 ವಿದ್ಯಾರ್ಥಿಗಳಿಗಾದರೂ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕು ಎಂದು ರೈತ ಸಂಘದ ಮುಖಂಡ ಮರುವನಹಳ್ಳಿ ಶಂಕರ್ ಅವರು ಪ್ರಾಂಶುಪಾಲ ಡಿ.ಬಿ.ಸತ್ಯ ಅವರಿಗೆ ಮನವಿ ಮಾಡಿದರು.
ಪ್ರಾಂಶುಪಾಲ ಡಿ.ಬಿ.ಸತ್ಯ ಮಾತನಾಡಿ, ಅರ್ಜಿ ವಿತರಿಸಲಾಗಿದ್ದು ಈ ವಾರದ ಅಂತ್ಯಕ್ಕೆ ಲಾಟರಿ ಮೂಲಕ ಮಕ್ಕಳನ್ನು ಪಾಲಕರ ಸಮ್ಮುಖದಲ್ಲಿಯೇ ಆಯ್ಕೆ ಮಾಡಲಾಗುವುದು. ಸರ್ಕಾರ ಅನುಮತಿ ಕೊಟ್ಟರೆ ಮತ್ತೊಂದು ವಿಭಾಗ ತೆರೆಯಲಾಗುವುದು ಎಂದರು.