ಕೆಪಿಎಲ್​ಗೆ ಮಳೆಯ ಭೀತಿ

ಹುಬ್ಬಳ್ಳಿ: ಹಲವು ದಿನಗಳಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಆಯೋಜಕರ ನಿದ್ದೆಗೆಡಿಸಿದೆ.

ಟೂರ್ನಿಯ ಹುಬ್ಬಳ್ಳಿ ಚರಣ ಆ. 19ರಿಂದ ಆರಂಭಗೊಂಡು 26ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಪಂದ್ಯಗಳಿಗೆ ಮಳೆ ಕಾಡುವ ಭೀತಿ ಇದೆ. ಬಿಸಿಲು ಅಪರೂಪ, ದಿನವೀಡಿ ಮೋಡ ಕವಿದ ವಾತಾವರಣ, ಆಗಾಗ ಸುರಿಯುವ ಹನಿ ಮಳೆ, ತಂಪು ತಂಪು ಅನುಭವ ಕೆಪಿಎಲ್ ಟೂರ್ನಿಯ ಸಿದ್ಧತೆಗೆ ಅಡ್ಡಿ ಉಂಟು ಮಾಡಿದೆ. ಮುಂದಿನ ವಾರ (ಆ. 23ರವರೆಗೆ)ದವರೆಗೆ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ಹವಾಮಾನ ವರದಿ ಹೇಳುತ್ತಿದೆ.

7ನೇ ಆವೃತ್ತಿಯ ಕೆಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಉದ್ಘಾಟನಾ ಪಂದ್ಯಗಳು ಆ. 15ರಿಂದ ಬೆಂಗಳೂರಿನಲ್ಲಿ ಆರಂಭಗೊಂಡಿದೆ. ಮಳೆಯ ಕಾರಣದಿಂದ ಹುಬ್ಬಳ್ಳಿ ಚರಣದ ಪಂದ್ಯಗಳನ್ನು ಬೆಂಗಳೂರಿ ನಲ್ಲಿಯೇ ಆಡಿಸುವ ಬಗ್ಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್​ಸಿಎ)ಯ ಮಟ್ಟದಲ್ಲಿ ಚರ್ಚೆಗೆ ಬಂದಿತ್ತು. ಆದರೆ, ಸ್ಥಳೀಯವಾಗಿ ಸಾಕಷ್ಟು ಸಿದ್ಧತೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಟೂರ್ನಿಯ ವೇಳಾಪಟ್ಟಿಯಂತೆ ಹುಬ್ಬಳ್ಳಿಯ ಪಂದ್ಯಗಳನ್ನು ಹುಬ್ಬಳ್ಳಿ ಯಲ್ಲಿಯೇ ಆಡಿಸಲು ನಿರ್ಣಯಿಸ ಲಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಹುಬ್ಬಳ್ಳಿ ಟೈಗರ್ಸ್ ಹಾಗೂ ಶಿವಮೊಗ್ಗ ಲಯನ್ಸ್ ತಂಡಗಳು ಶುಕ್ರವಾರ ನಗರಕ್ಕೆ ಆಗಮಿಸಿವೆ. ಆದರೆ, ತಂಡಗಳು ಅಭ್ಯಾಸ ನಡೆಸಲಿಲ್ಲ. ರಾಜನಗರ ಕೆಎಸ್​ಸಿಎ ಮೈದಾನ ಮಳೆಯಿಂದ ಒದ್ದೆಯಾಗಿರುವುದು ಇದಕ್ಕೆ ಕಾರಣ. ಮಳೆಯಿಂದ ಧಕ್ಕೆಯಾಗದಂತೆ ಪಿಚ್ ಹಾಗೂ ಸುತ್ತಲಿನ ಪ್ರದೇಶವನ್ನು ಸಂಪೂರ್ಣವಾಗಿ ಟಾರ್ಪಲಿನ್ ಹೊದಿಕೆಯಿಂದ ಮುಚ್ಚಲಾಗಿದೆ. ಮೈದಾನದ ಸುತ್ತಲೂ ತೇವಾಂಶ ಕಡಿಮೆ ಮಾಡಲು ಕಟ್ಟಿಗೆ ಪೌಡರ್ ಹಾಗೂ ಮರಳು (ಫೈನ್ ಸ್ಯಾಂಡ್) ಬಳಕೆ ಮಾಡಲಾಗುತ್ತಿದೆ. ರಾತ್ರಿ ವೇಳೆ ಫ್ಲಡ್​ಲೈಟ್ ಹಾಕಲಾಗಿತ್ತು

ರಾಜನಗರ ಕೆಎಸ್​ಸಿಎ ಮೈದಾನ ಕಳೆದ 4 ವರ್ಷಗಳಿಂದ ಕೆಪಿಎಲ್ ಪಂದ್ಯಕ್ಕೆ ಆತಿಥ್ಯ ವಹಿಸಿದೆ. ಒಂದೆರಡು ವರ್ಷ ಮಳೆ ಕಾಡಿದ್ದು ನಿಜ. ಆದರೆ, ಕೆಪಿಎಲ್ ಸಾಕಷ್ಟು ಯಶಸ್ಸು ಕಂಡಿದ್ದು ಇಲ್ಲಿಯೇ. ಹಾಗಾಗಿ ಕೆಪಿಎಲ್ ಆಯೋಜಕರಿಗೆ ಹುಬ್ಬಳ್ಳಿ ನೆಚ್ಚಿನ ತಾಣ. ಈ ಬಾರಿಯ ಟೂರ್ನಿಯಲ್ಲಿ ಮಳೆಯೇ ಮುಖ್ಯ ಪಾತ್ರ ವಹಿಸುವ ಸಾಧ್ಯತೆಯಿದೆ. ಅದರಲ್ಲಿಯೂ ಶನಿವಾರ (ಆ. 18) ನಿರ್ಣಾಯಕ ದಿನವಾಗಲಿದೆ. ಹುಬ್ಬಳ್ಳಿಯಲ್ಲಿ 8 ದಿನ 11 ಪಂದ್ಯಗಳು ನಡೆಯಲಿವೆ.