ಕೆಡಿಪಿ ಸಭೆಗೆ ಗೈರು, ಪೊಲೀಸರ ನಡೆ ವಿರುದ್ಧ ಶಾಸಕ ಗರಂ

blank

ಚಿತ್ರದುರ್ಗ: ಕೆಡಿಪಿ ಸಭೆಗೆ ಬಂದ ಪೊಲೀಸ್ ಅಧಿಕಾರಿಯನ್ನು ಎದ್ದು ನಿಂತು ಚಪ್ಪಾಳೆ ತಟ್ಟಿ ಸ್ವಾಗತಿಸುವ ಮೂಲಕ ಪೊಲೀಸ್ ಇಲಾಖೆ ವಿರುದ್ಧ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಆಕ್ರೋಶ ಹೊರಹಾಕಿದ ಪ್ರಸಂಗ ಬುಧವಾರ ನಡೆಯಿತು.
ಜಿಲ್ಲಾ ಪಂಚಾಯಿತಿಯಲ್ಲಿ ಬುಧವಾರ ನಡೆದ ತಾಲೂಕು ಪಂಚಾಯಿತಿ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಕೆಡಿಪಿ ಸಭೆಗೂ, ತಮಗೂ ಸಂಬಂಧವಿಲ್ಲದಂತೆ ವರ್ತಿಸುವ ಪೊಲೀಸ್ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಸೊಂಡೆಕೊಳ ಶಾಲೆ ಕಿಟಕಿ, ಬಾಗಿಲು ಮುರಿದವರ ವಿರುದ್ಧ ಕ್ರಮದ ವಿಷಯ ಪ್ರಸ್ತಾಪವಾಗುತ್ತಿದ್ದಂತೆ, ಪೊಲೀಸ್ ಅಧಿಕಾರಿಗಳು ಯಾಕೆ ಬಂದಿಲ್ಲವೆಂದು ಶಾಸಕ ವಿಚಾರಿಸಿದರು. ಡಿವೈಎಸ್‌ಪಿ ಆಫೀಸ್‌ನವರು ನೋಟಿಸ್ ಸ್ವೀಕರಿಸಿಲ್ಲ. ಪೊಲೀಸ್ ಅಧಿಕಾರಿಗಳು ಬಂದಿಲ್ಲವೆಂದು ತಾಪಂ ಸಿಬ್ಬಂದಿ ತಿಳಿಸುತ್ತಿದ್ದಂತೆ ಕೆರಳಿದ ಶಾಸಕರು, ಕೂಡಲೇ ಎಸ್‌ಪಿ, ಐಜಿಪಿಗೆ ಫೋನ್ ಮಾಡಿ ಅಧಿಕಾರಿಗಳ ಗೈರು ಹಾಜರಿ ವಿಚಾರ ತಿಳಿಸಿದರು.
ಸಭೆಗೆ ಹಾಜರಾಗದ ಪೊಲೀಸರಿಗೆ ಕಾರಣ ಕೇಳಿ ನೋಟಿಸ್ ಜಾರಿಗೂ ಸೂಚಿಸಿದರು. ಕೆಲ ನಿಮಿಷಗಳಲ್ಲೇ ನಗರ ಠಾಣೆ ಪಿಐ ತಿಪ್ಪೇಸ್ವಾಮಿ ಸಭೆಗೆ ಬರುತ್ತಿದ್ದಂತೆ ಎದ್ದು ನಿಂತು ಶಾಸಕ, ಚಪ್ಪಾಳೆ ಹೊಡೆದು ಸ್ವಾಗತಿಸುವ ಮೂಲಕ ತಮ್ಮ ಅಸಮಾಧಾನ ಹೊರ ಹಾಕಿದರು. ಗೈರು ಹಾಜರಿ ಕುರಿತು ಗೃಹ ಸಚಿವರ ಗಮನಕ್ಕೂ ತರಲಾಗುವುದು ಎಂದರು.
ನೈಟ್‌ರೌಂಡ್ಸ್ ಕಾರಣಕ್ಕೆ ತಡವಾಯಿತು. ನಾನು ನೋಟಿಸ್ ಪಡೆದಿದ್ದೇನೆ ಎಂದು ತಿಪ್ಪೇಸ್ವಾಮಿ ಉತ್ತರಿಸಿದರು. ಅವರಾದ ಬಳಿಕ ಬಡಾವಣೆ ಠಾಣೆ ಪಿಐ ನಯೀಂ ಅಹಮದ್ ಮತ್ತಿತರ ಅಧಿಕಾರಿಗಳು ಹಾಜರಾದರು. ಸೊಂಡೆಕೊಳ ಪ್ರಕರಣದಡಿ ಮೂವರನ್ನು ಬಂಧಿಸಲಾಗಿತ್ತು. ಚಾರ್ಜ್‌ಶೀಟ್ ಸಲ್ಲಿಸಬೇಕಿದೆ ಎಂದು ಗ್ರಾಮಾಂತರ ಠಾಣೆ ಪಿಐ ಮುದ್ದುರಾಜ್ ತಿಳಿಸಿದರು.
ಕಳೆದ ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟಿಸ್ ಕೊಟ್ಟಿದ್ದೀರಾ? ಈಗ ಯಾರೆಲ್ಲ ಗೈರಾಗಿದ್ದಾರೆ ಅವರಿಗೆ ನೋಟಿಸ್ ಕೊಡಿ, ರೆಕಾರ್ಡ್ ಬಿಲ್ಡ್ ಅಪ್ ಆಗಲಿ ಎಂದು ಶಾಸಕರು ಹೇಳಿದರು.
ಕೃಷಿ ಹೊಂಡ, ಬದು ನಿರ್ಮಾಣ, ಹಸು ವಿತರಣೆಯಲ್ಲಿ ಅಕ್ರಮವಾಗಿರುವ ಅನುಮಾನವಿದ್ದು, ಪರಿಶೀಲಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕೃಷಿ ಇಲಾಖೆ ವಿರುದ್ಧ ಕೇಳಿ ಬಂದ ದೂರುಗಳ ಕುರಿತು ಪ್ರಸ್ತಾಪಿಸಿದ ಶಾಸಕರು, ರೈತರೊಂದಿಗೆ ಸೌಹಾರ್ದದಿಂದ ವರ್ತಿಸಬೇಕು. ಕರ್ತವ್ಯ ನಿರ್ವಹಣೆಯಲ್ಲಿ ಲೋಪ ಎಸಗಬಾರದು. ಯೋಜನೆಗಳು ಮಧ್ಯವರ್ತಿಗಳ ಪಾಲಾಗಬಾರದೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣೆ ಕ್ರಮಗಳ ಕುರಿತಂತೆ ಬಿಇಒ ನಾಗಭೂಷಣ್ ಮಾಹಿತಿ ನೀಡಿದರು. ಕರ್ತವ್ಯ ಲೋಪಕ್ಕೆ ಸಂಬಂಧಿಸಿದಂತೆ ಐವರು ಶಿಕ್ಷಕರಿಗೆ ನೋಟಿಸ್ ಕೊಡಲಾಗಿದೆ, ಒಬ್ಬ ಶಿಕ್ಷಕನ ಅಮಾನತಿಗೆ ಶಿಫಾರಸು ಮಾಡಲಾಗಿದೆ ಎಂದರು.
ಚಿರತೆ ಹಾವಳಿ ಕುರಿತಂತೆ ವ್ಯಕ್ತವಾದ ಪ್ರಸ್ತಾಪಕ್ಕೆ ವಲಯ ಅರಣ್ಯಾಧಿಕಾರಿ ವಸಂತ ಕ್ರಮ ವಹಿಸಿರುವುದಾಗಿ ಹೇಳಿದರು.
ರೇಷ್ಮೆ, ತೋಟಗಾರಿಕೆ ಮತ್ತಿತರರ ಇಲಾಖೆಗಳ ಪ್ರಗತಿ ಪರಿಶೀಲಿಸಲಾಯಿತು. ತಾಪಂ ಆಡಳಿತಾಧಿಕಾರಿಬಿ. ಆನಂದ್, ಇಒ ರವಿಕುಮಾರ್, ತಹಸೀಲ್ದಾರ್ ಡಾ.ನಾಗವೇಣಿ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಪ್ರಕಾಶ್, ಕೆಡಿಪಿ ಸದಸ್ಯರಾದ ಸಿ.ಟಿ. ನಾಗರಾಜ್, ಸಂತೋಷ್, ವಿಜಯ ಕುಮಾರ್, ಮಹಮದ್ ನೂರುಲ್ಲಾ, ಸುನಂದಮ್ಮ ಇದ್ದರು.

Share This Article

ಬಹಳ ಇಷ್ಟಪಟ್ಟು ಪನೀರ್​ ಸೇವಿಸುತ್ತಿದ್ದೀರಾ; ಹಾಗಾದ್ರೆ ನೀವು ತಿಳಿದುಕೊಳ್ಳಲೇಬೇಕಾದ ವಿಷಯ ಇದು.. | Health Tips

ನಾನ್​ವೆಜ್​​​​​​ ಇಷ್ಟಪಡದವರು ಪ್ರೋಟೀನ್​ಗಾಗಿ ಪನೀರ್​​​​ ಅನ್ನು ಹೆಚ್ಚು ಸೇವಿಸುತ್ತಾರೆ. ಆದರೆ ಇದು ನಿಜವಾಗಿಯೂ ಪ್ರೋಟೀನ್‌ಗೆ ಉತ್ತಮವಾದ…

ಅಂಗಾಲಿನಲ್ಲಿ ಪದೇ ಪದೆ ನೋವು ಕಾಣಿಸಿಕೊಳ್ಳುತ್ತಿದೆಯೇ; ಅಪಾಯ ತಪ್ಪಿದ್ದಲ್ಲ ಎಚ್ಚರದಿಂದಿರಿ | Health Tips

ಅನೇಕ ಜನರು ಪಾದದ ಕೆಳಭಾಗದಲ್ಲಿ ಅಂದರೆ ಅಂಗಾಲಿನಲ್ಲಿ ನೋವನ್ನು ಅನುಭವಿಸುತ್ತಿರುತ್ತಾರೆ. ಈ ನೋವು ಸಾಮಾನ್ಯ ನೋವಿನಂತೆ…

Spirituality: ಇರುವೆಗಳಿಗೆ ಆಹಾರ ನೀಡಿದರೆ ಶನಿದೇವನ ಪ್ರಭಾವ ಇರುವುದಿಲ್ಲವೇ?

Spirituality: ನಮ್ಮಲ್ಲಿರುವ ವಸ್ತು ಅಥವಾ ಯಾವುದೇ ಪದಾರ್ಥವನ್ನು ಇಲ್ಲದವರಿಗೆ ದಾನ ಮಾಡಿದರೆ ದೇವರ ಅನುಗ್ರಹ ಸದಾ…