ಶನಿವಾರಸಂತೆ: ಪಟ್ಟಣದ ಒಂದನೇ ವಿಭಾಗದ ಶ್ರೀ ಗಣಪತಿ ದೇವಸ್ಥಾನ ಬಳಿ 2018ರಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕ ತಾಂತ್ರಿಕ ಸಮಸ್ಯೆಯಿಂದಾಗಿ ಐದು ತಿಂಗಳಿನಿಂದ ಸ್ಥಗಿತಗೊಂಡಿದೆ.
ಶುದ್ಧ ಕುಡಿಯುವ ನೀರು ವಿಶೇಷ ಯೋಜನೆಯಡಿ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಘಟಕ ನಿರ್ಮಿಸಿ ಗ್ರಾಪಂ ಮೂಲಕ ಘಟಕಕ್ಕೆ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ ಘಟಕದ ತಾಂತ್ರಿಕ ನಿರ್ಮಾಣ ಸೇರಿದಂತೆ ನಿರ್ವಹಣೆಯನ್ನು ಖಾಸಗಿ ಸಂಸ್ಥೆಯೊಂದಕ್ಕೆ ವಹಿಸಲಾಗಿತ್ತು. ಅದರಂತೆ ಗ್ರಾಹಕನಿಗೆ 5 ರೂ.ಗೆ 20 ಲೀಟರ್ ನೀರು ದೊರೆಯುತ್ತಿತ್ತು.
ಘಟಕದ ನಿರ್ವಹಣೆ ಹೊತ್ತಿದ್ದ ಖಾಸಗಿ ಸಂಸ್ಥೆ ಕಷ್ಟಸಾಧ್ಯ ಎಂದು ತಿಳಿಸಿದ ಹಿನ್ನೆಲೆಯಲ್ಲಿ 2022ರಲ್ಲಿ ಘಟಕದ ನಿರ್ವಹಣೆಯನ್ನು ಸ್ಥಳೀಯ ಗ್ರಾಪಂಗೆ ಹಸ್ತಾಂತರಿಸಲಾಯಿತು. ಇದೀಗ ತಾಂತ್ರಿಕ ಸಮಸ್ಯೆಯಿಂದಾಗಿ 5 ತಿಂಗಳಿಂದ ಘಟಕ ಉಪಯೋಗಕ್ಕೆ ಬಾರದಂತಾಗಿದೆ. ದುರಸ್ತಿಗೊಂಡಿರುವ ನೀರಿನ ಘಟಕವನ್ನು ಸರಿಪಡಿಸುವಂತೆ ಸಂಬಂಧ ಪಟ್ಟ ಗ್ರಾಪ.ಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂಬುದು ಸ್ಥಳೀಯರ ಆರೋಪ.
ಇನ್ನಾದರೂ ಸಂಬಂಧಪಟ್ಟವರು ತಾಂತ್ರಿಕ ದೋಷವನ್ನು ಸರಿಪಡಿಸಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡುವರೆ ಎಂಬುದನ್ನು ಕಾದುನೋಡಬೇಕಿದೆ.
ತಾಂತ್ರಿಕ ಸಮಸ್ಯೆಯಿಂದಾಗಿ ಐದು ತಿಂಗಳಿನಿಂದ ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರು ಘಟಕವನ್ನು ಸರಿಪಡಿಸುವುದು ಗ್ರಾ ಪಂ ಜವಾಬ್ದಾರಿ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಇತ್ತ ಗಮನಹರಿಸುವ ಮೂಲಕ ಜನರಿಗೆ ಶುದ್ಧ ಕುಡಿಯುವ ನೀರನ್ನು ಪೂರೈಕೆ ಮಾಡಬೇಕು.
ಆದಿಲ್‌ಪಾಷ ಮಾಜಿ ಅಧ್ಯಕ್ಷ, ಶನಿವಾರಸಂತೆ ಗ್ರಾಪಂ
ನಮ್ಮ ಗ್ರಾಪಂ ವ್ಯಾಪ್ತಿಗೆ ಸೇರಿದ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ತಾಂತ್ರಿಕ ಸಮಸ್ಯೆಯಿಂದ ನೀರು ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ. ಇದನ್ನು ದುರಸ್ತಿಗೊಳಿಸಲು ಹೆಚ್ಚಿನ ಹಣ ಬೇಕಾಗಿರುವ ಹಿನ್ನೆಲೆಯಲ್ಲಿ ಈಗಾಗಲೆ ದುರಸ್ತಿ ಕಾರ್ಯಕ್ಕೆ ಕ್ರಿಯಾಯೋಜನೆ ತಯಾರಿಸಿ ಸಂಬಂಧಪಟ್ಟ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. 15ನೇ ಹಣಕಾಸು ಯೋಜನೆಯ ಅನುದಾನದಲ್ಲಿ ಶೀಘ್ರ ದುರಸ್ತಿ ಮಾಡಿಸಲಾಗುವುದು.
ಮೇದಪ್ಪ ಪಿಡಿಒ, ಶನಿವಾರಸಂತೆ ಗ್ರಾಪಂ