ಕೆಜಿಎಫ್ ಟೀಸರ್ ಕಮಾಲ್

2016ರಲ್ಲಿ ‘ಸಂತು ಸ್ಟ್ರೇಟ್ ಫಾವರ್ಡ್’ ಚಿತ್ರವೇ ಕೊನೇ. ಅದಾದ ಬಳಿಕ ‘ರಾಕಿಂಗ್ ಸ್ಟಾರ್’ ಯಶ್ ಮತ್ತೆ ತೆರೆಮೇಲೆ ಕಾಣಿಸಿಕೊಂಡಿಲ್ಲ. ಅವರ ಗಮನವೆಲ್ಲ ‘ಕೆಜಿಎಫ್’ ಚಿತ್ರದ ಮೇಲಿದೆ. ಈ ಚಿತ್ರದ ಪೋಸ್ಟರ್​ಗಳು ಕನ್ನಡವಷ್ಟೇ ಅಲ್ಲ, ಇಡೀ ದಕ್ಷಿಣ ಭಾರತ ಚಿತ್ರರಂಗವನ್ನೇ ಹುಬ್ಬೇರಿಸುವಂತೆ ಮಾಡಿದ್ದವು. ಅದೇ ರೀತಿ ಮೂರುದಿನದ ಹಿಂದೆ ರಿಲೀಸ್ ಆದ ‘ಕೆಜಿಎಫ್’ ಟೀಸರ್ ಸಹ ಇದೀಗ ಯೂಟ್ಯೂಬ್​ನಲ್ಲಿ ಸದ್ದು ಮಾಡುತ್ತಿದೆ. ಜ. 8ರಂದು ಯಶ್ ಜನ್ಮದಿನದ ಪ್ರಯುಕ್ತ ‘ಕೆಜಿಎಫ್’ ಟೀಸರನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಕೇವಲ ಮೂರೇ ದಿನದಲ್ಲಿ ಆ ಟೀಸರ್ ಬರೋಬ್ಬರಿ 25 ಲಕ್ಷ ಬಾರಿ ವೀಕ್ಷಣೆಯಾಗಿದೆ! 50 ಸಾವಿರಕ್ಕೂ ಅಧಿಕ ಮಂದಿ ಲೈಕ್ ಬಟನ್ ಒತ್ತಿದ್ದಾರೆ.

ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರ ಮೇಕಿಂಗ್​ನಿಂದಲೇ ಸೌಂಡ್ ಮಾಡುತ್ತಿದೆ. ಟೀಸರ್​ನಲ್ಲಿ ಭುವನ್​ಗೌಡ ಕ್ಯಾಮರಾ ಕೈಚಳಕ ಗಮನಸೆಳೆದಿದೆ. ರವಿ ಬಸ್ರೂರು ಹಿನ್ನೆಲೆ ಸಂಗೀತವೂ ಟೀಸರ್​ನ ಹೈಲೈಟ್. ‘ಕೆಜಿಎಫ್’ ಚಾಪ್ಟರ್ ಒಂದರ ಟೀಸರ್ ಈಗ ಬಂದಿದ್ದು, ಫೆಬ್ರವರಿಯಲ್ಲಿ ಟ್ರೇಲರ್ ಬಿಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ.

ತಮಿಳುನಾಡಿನಲ್ಲೂ ಕೆಜಿಎಫ್ ಕ್ರೇಜ್

‘ಕೆಜಿಎಫ್’ ಸಿನಿಮಾ ಕನ್ನಡದ ಜತೆಗೆ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲೂ ರಿಲೀಸ್ ಆಗುತ್ತಿದೆ. ಈಗಾಗಲೇ ನಾಲ್ಕು ಭಾಷೆಯ ಫಸ್ಟ್ ಲುಕ್ ರಿಲೀಸ್ ಆಗಿದೆ. ಹೀಗಾಗಿ ಸಹಜವಾಗಿ ಚಿತ್ರದ ಬಗ್ಗೆ ಬೇರೆ ಭಾಷೆಯಲ್ಲೂ ಹೈಪ್ ಕ್ರಿಯೇಟ್ ಆಗಿದೆ. ತಮಿಳುನಾಡಿನಲ್ಲಿ ಅಭಿಮಾನಿಗಳು ಯಶ್ ಜನ್ಮದಿನಕ್ಕೂ ಮೊದಲೇ ಶುಭಾಶಯ ಕೋರಿದ್ದಾರೆ. ಅಷ್ಟೆ ಅಲ್ಲದೆ ಉತ್ತರಭಾರತದ ಹಲವಾರು ಯೂಟ್ಯೂಬ್ ಚಾನಲ್ ಬಳಕೆದಾರರು ‘ಕೆ.ಜಿ.ಎಫ್’ ಚಿತ್ರದ ಟೀಸರ್ ವಿಮರ್ಶೆ ಮಾಡಿದ್ದಾರೆ. ಬರೀ ಭಾರತೀಯರಷ್ಟೇ ಅಲ್ಲದೆ, ವಿದೇಶಿಗರೂ ‘ಕೆಜಿಎಫ್’ಗೆ ಫಿದಾ ಆಗಿದ್ದಾರೆ.

Leave a Reply

Your email address will not be published. Required fields are marked *