ಕೆಜಿಎಫ್ ಆಸ್ಪತ್ರೆಯಲ್ಲಿ ಗರ್ಭಿಣಿ ನರಳಾಟ

ಕೆಜಿಎಫ್: ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಗರ್ಭಿಣಿಯೊಬ್ಬರು ಸಂಕಷ್ಟ ಅನುಭವಿಸಿದ ಘಟನೆ ಕೆಜಿಎಫ್ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ನಡೆದಿದ್ದು, ಪ್ರಕರಣ ಸಂಬಂಧ ವೈದ್ಯಾಧಿಕಾರಿ ಅಮಾನತಿಗೆ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಆದೇಶಿಸಿದ್ದಾರೆ.

ಕೆಜಿಎಫ್​ನ ರಾಬರ್ಟ್​ಸನ್​ಪೇಟೆ ನಿವಾಸಿ ರಿಯಾಜ್ ಅವರ ಪತ್ನಿ ಸಮೀನಾ ಚಿಕಿತ್ಸೆ ಸಿಗದೆ ನರಳಾಡಿದ್ದು, ವೈದ್ಯರ ಶಿಫಾರಸಿನ ಮೇರೆಗೆ ಎಸ್ಸೆನ್ನಾರ್ ಜಿಲ್ಲಾ ಆಸ್ಪತ್ರೆಯಿಂದ ಕೋಲಾರದ ಖಾಸಗಿ ಆಸ್ಪತ್ರೆಗೆ ಹೆರಿಗೆಗೆಂದು ಕಳುಹಿಸಲಾಯಿತಾದರೂ ಮಗುವನ್ನು ಉಳಿಸಿಕೊಳ್ಳಲಾಗಲಿಲ್ಲ.

ಸಮೀನಾ ಹೆರಿಗೆಗೆಂದು ಸರ್ಕಾರಿ ಆಸ್ಪತ್ರೆಗೆ ಮಧ್ಯಾಹ್ನ 2.45ಕ್ಕೆ ಬಂದು ಆಸ್ಪತ್ರೆ ಮುಂಭಾಗ ಕುಳಿತಿದ್ದರು. ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಡಾ.ಶಿವಕುಮಾರ್ ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು. ಆಸ್ಪತ್ರೆಯಲ್ಲಿದ್ದ ಕರ್ತವ್ಯ ನಿರತ ವೈದ್ಯರು ಹೊರಗಡೆ ಸ್ಕಾ್ಯನಿಂಗ್ ಮಾಡಿಸಿಕೊಂಡು ಬರುವಂತೆ ಸೂಚಿಸಿದ್ದರಿಂದ ಖಾಸಗಿ ಆಸ್ಪತ್ರೆಯಲ್ಲಿ ಸ್ಯಾ್ಕನ್ ಮಾಡಿಸಿಕೊಂಡು ಬಂದಿದ್ದಾರೆ.

ಸಂಜೆ ಆಸ್ಪತ್ರೆಗೆ ಆಗಮಿಸಿದ ವೈದ್ಯಾಧಿಕಾರಿ ಡಾ.ಶಿವಕುಮಾರ್ ಸ್ಕಾ್ಯನಿಂಗ್ ವರದಿ ಪರಿಶೀಲಿಸಿ ಮಗುವಿನ ಚಲನವಲನ ಕಂಡುಬರದಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಹೋಗಿ ಎಂದು ಶಿಫಾರಸು ಮಾಡಿದ್ದಾರೆ.

ನಂತರ ಎಸ್​ಎನ್​ಆರ್ ಆಸ್ಪತ್ರೆಯಲ್ಲಿ ವೈದ್ಯರು ತಪಾಸಣೆ ಮಾಡಿ ಹಿಮೋಗ್ಲೋಬಿನ್ ಮತ್ತು ಪ್ಲೇಟ್​ಲೆಟ್ ಅಂಶ ಕಡಿಮೆ ಇದ್ದುದರಿಂದ ಶಸ್ತ್ರ ಚಿಕಿತ್ಸೆ ನಡೆಸಲು ರಕ್ತದ ಕೊರತೆ ಮನಗಂಡು ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ಕಳುಹಿಸಿದ್ದಾರೆ.

ವೈದ್ಯರು ತಪಾಸಣೆ ಮಾಡಿದಾಗ ಗರ್ಭದಲ್ಲೇ ಮಗು ಮೃತ ಪಟ್ಟಿತ್ತು. ತಕ್ಷಣ ಶಸ್ತ್ರ ಚಿಕಿತ್ಸೆ ನಡೆಸದಿದ್ದರೆ ತಾಯಿಯ ಜೀವಕ್ಕೂ ಅಪಾಯವಿದ್ದುದ್ದರಿಂದ ಶಸ್ತ್ರಚಿಕಿತ್ಸೆ ನಡೆಸಿ ಮಗು ಹೊರತೆಗೆದು ತಾಯಿಯನ್ನು ರಕ್ಷಿಸಲಾಗಿದೆ. ಪ್ರಸ್ತುತ ಗರ್ಭಿಣಿ ಚೇತರಿಸಿಕೊಳ್ಳುತ್ತಿದ್ದಾರೆ. ಆರೋಗ್ಯ ಕರ್ನಾಟಕ ಯೋಜನೆಯನ್ವಯ ವೈದ್ಯಕೀಯ ವೆಚ್ಚ ಭರಿಸಲಾಗುತ್ತಿದೆ.

ಸಂಸದ, ಡಿಸಿ, ಸಿಇಒ ಭೇಟಿ: ಪ್ರಕರಣ ಸಂಬಂಧ ಜಿಲ್ಲಾಧಿಕಾರಿ ಜೆ.ಮಂಜುನಾಥ್, ಜಿಪಂ ಸಿಇಒ ಜಿ. ಜಗದೀಶ್ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ಭೇಟಿ ನೀಡಿ ಬಾಣಂತಿ ಸಮೀನಾ ಅವರ ಆರೋಗ್ಯ ವಿಚಾರಿಸಿದರಲ್ಲದೆ ಕುಟುಂಬಸ್ಥರ ಜತೆ ಮಾತುಕತೆ ನಡೆಸಿದ್ದಾರೆ. ಸಂಸದ ಎಸ್.ಮುನಿಸ್ವಾಮಿ ಆಸ್ಪತ್ರೆಗೆ ಭೇಟಿ ನೀಡಿ ಬಾಣಂತಿ ಆರೋಗ್ಯ ವಿಚಾರಿಸಿ ವೈದ್ಯಕೀಯ ವೆಚ್ಚ ಭರಿಸುವ ಭರವಸೆ ನೀಡಿದ್ದಾರೆ.

ಶೋಕಾಸ್ ನೋಟಿಸ್ ಜಾರಿ: ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿ ನರಳಾಟ ಪ್ರಕರಣ ವರದಿಯಾಗುತ್ತಿದ್ದಂತೆ ಆರೋಗ್ಯ ಸಚಿವ ಶಿವಾನಂದ ಪಾಟೀಲ ವೈದ್ಯಾಧಿಕಾರಿ ಅಮಾನತಿಗೆ ಸೂಚನೆ ನೀಡಿದ್ದಾರೆ. ಘಟನೆ ನಡೆದು ಹಲವು ಗಂಟೆ ಕಳೆದಿದ್ದರೂ ವೈದ್ಯರ ವಿರುದ್ಧ ಶಿಸ್ತು ಕ್ರಮ ಜರುಗಿಸದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ನಿರ್ದೇಶಕರಿಗೂ ಕಾರಣ ಕೇಳಿ ಶೋಕಾಸ್ ನೋಟಿಸ್ ಜಾರಿ ಮಾಡಿರುವ ಬಗ್ಗೆ ಸಚಿವರ ಆಪ್ತ ಕಾರ್ಯದರ್ಶಿ ಎಲ್.ಸಿ. ವೀರೇಶ್ ಪತ್ರದಲ್ಲಿ ತಿಳಿಸಿದ್ದಾರೆ.

ಆಸ್ಪತ್ರೆಗೆ ಶಾಸಕಿ ಭೇಟಿ: ಮಂಗಳವಾರ ಬೆಳಗ್ಗೆ ಶಾಸಕಿ ಎಂ. ರೂಪಕಲಾ ಆಸ್ಪತ್ರೆಗೆ ಭೇಟಿ ನೀಡಿ ಘಟನೆ ಮಾಹಿತಿ ಪಡೆದರು.

ನಂತರ ವೈದ್ಯರ ಹಾಗೂ ಶುಶ್ರೂಷಕಿಯರ ಮತ್ತು ಸಿಬ್ಬಂದಿ ಸಭೆ ನಡೆಸಿ ಇತ್ತೀಚಿನ ಎರಡು ದಿನಗಳಿಂದ ನಡೆದಿರುವ ಪ್ರಕರಣ ಗಮನಿಸಿದರೆ ವೈದ್ಯ ಸಿಬ್ಬಂದಿ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

 ಸಮೀನಾ ಹೊರಗಿನ ಖಾಸಗಿ ಆಸ್ಪತ್ರೆಯಲ್ಲಿ ಸ್ಕಾ್ಯನಿಂಗ್ ಮಾಡಿಸಿಕೊಂಡಿದ್ದು, ಮಗು ಹೊಟ್ಟೆಯಲ್ಲಿ ಮೃತಪಟ್ಟಿರುವ ಬಗ್ಗೆ ವರದಿಯಲ್ಲಿ ತಿಳಿದು ಬಂದಿದೆ. ನಂತರ ಸರ್ಕಾರಿ ಆಸ್ಪತ್ರೆಗೆ ಬಂದಾಗ ತುರ್ತು ವಾಹನದ ಮೂಲಕ ಕೋಲಾರ ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡಿದರೂ ಅವರು ಹೋಗಲು ನಿರಾಕರಿಸಿದ್ದರು.

| ಡಾ.ಶಿವಕುಮಾರ್, ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ 

Leave a Reply

Your email address will not be published. Required fields are marked *