ಕೆಚಪ್ ಸಾಕಾಗದ್ದಕ್ಕೆ ಕಿರಿಕ್!

ಒಂದು ‘ಫುಲ್​ವಿುೕಲ್ಸ್’ ಕೂಪನ್ ತಗೊಂಡು ಖಾನಾವಳಿ ಸಪ್ಲೈಯರ್​ಗೆ ಏಮಾರಿಸಿ ನಾಲ್ಕು ಜನ ಗಡದ್ದಾಗಿ ಊಟ ಮಾಡಿ, ಕೊನೆಗೆ ಅನ್ನ ಸಾಕಾಗಲಿಲ್ಲವೆಂದು ಖಾನಾವಳಿ ಮಾಲೀಕನಿಗೇ ರೋಪು ಹಾಕುವ ಸಂಗಡಿಗರ ದೃಶ್ಯಾವಳಿಯನ್ನು ‘ಬೂತಯ್ಯನ ಮಗ ಅಯ್ಯು’ ಚಿತ್ರದಲ್ಲಿ ವೀಕ್ಷಿಸಿ ಆನಂದಿಸಿದ್ದೀರಲ್ಲವೇ? ಕ್ಯಾಲಿಫೋರ್ನಿಯಾದಿಂದ ವರದಿಯಾಗಿರುವ ಘಟನೆ ಇದನ್ನು ನೆನಪಿಸಿದ್ದರಿಂದ ಈ ಉಲ್ಲೇಖವಷ್ಟೇ.

ಮೈರಾ ಬೆರೆನಿಸಿ ಗ್ಯಾಲೊ ಎಂಬ 24ರ ಹರೆಯದಾಕೆ ಕ್ಯಾಲಿಫೋರ್ನಿಯಾದ ಸಾಂಟಾ ಆನಾ ಪಟ್ಟಣದ ರೆಸ್ಟೋರಂಟ್ ಒಂದರಲ್ಲಿ ತಿಂಡಿಗೆ ಆರ್ಡರ್ ಮಾಡಿದ್ದಳಂತೆ. ಆದರೆ, ಕಳಿಸಲಾದ ತಿಂಡಿ ಪೊಟ್ಟಣದ ಜತೆಗೆ ನೀಡಲಾದ ಕೆಚಪ್ ಸಾಕಷ್ಟು ಪ್ರಮಾಣದಲ್ಲಿರಲಿಲ್ಲ ಎಂಬ ಕಾರಣಕ್ಕೆ ಆ ಪುಣ್ಯಾತ್ಗಿತ್ತಿಗೆ ವಿಪರೀತ ಕೋಪ ಬಂತು. ಅದ್ಯಾಕೆ ಅಂಥ ಆಲೋಚನೆ ಬಂತೋ ಗೊತ್ತಿಲ್ಲ, ರೆಸ್ಟೋರಂಟ್ ಬಳಿ ಧಾವಿಸಿದವಳೇ ಹಿಂದಿನ ಬಾಗಿಲಿನಿಂದ ಒಳ ಪ್ರವೇಶಿಸಿ ಅಲ್ಲಿನ ಮ್ಯಾನೇಜರ್​ಗೆ ಹಿಗ್ಗಾಮುಗ್ಗ ಅಪ್ಪಳಿಸಿ ಕೈಕಾಲು ಆಡದಂತೆ ಮಾಡಿಬಿಟ್ಟಳಂತೆ. ಕೊನೆಗೆ, ಅವಳ ಜತೆ ಬಂದಿದ್ದವರೇ ಅವಳನ್ನು ಹಿಂದಕ್ಕೆಳೆದುಕೊಂಡರಂತೆ. ಘಟನೆ ಬಗ್ಗೆ ತಿಳಿದ ಪೊಲೀಸರು ದುರುದ್ದೇಶದಿಂದ ವ್ಯಕ್ತಿಯೊಬ್ಬನ ಮೇಲೆ ದೈಹಿಕ ಹಲ್ಲೆ ನಡೆಸಿದ ಆರೋಪದ ಮೇಲೆ ಅವಳನ್ನು ಬಂಧಿಸಿ ಸೆರೆಮನೆಯಲ್ಲಿ ಅತಿಥಿಯಾಗಿಟ್ಟುಕೊಂಡರಂತೆ!

ಖರೀದಿ ಬಳಿಕ ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಾವತಿಸಲು ಸಾಧ್ಯವಾಗದಿರುವುದಕ್ಕೆ ಗ್ರಾಹಕನೊಬ್ಬ ಇಡೀ ಮಳಿಗೆಯನ್ನೇ ಧ್ವಂಸಗೊಳಿಸಿದ ಘಟನೆ ಇನ್ನೊಂದು ಮಳಿಗೆಯಲ್ಲಿ ನಡೆದಿತ್ತು. ಹೀಗಾಗಿ ಕ್ಷುಲ್ಲಕ ಕಾರಣಗಳಿಗಾಗಿ ಮಳಿಗೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸುತ್ತಿರುವ ನಿದರ್ಶನಗಳು ಹೆಚ್ಚುತ್ತಿರುವುದು ಸಹಜವಾಗಿಯೇ ಕಳವಳಕ್ಕೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *