ಚಿತ್ರದುರ್ಗ: ನಗರದ ಕೆಎಸ್‌ಆರ್‌ಟಿ ಬಸ್ ನಿಲ್ದಾಣದ ಅವ್ಯವಸ್ಥೆ ವೀಕ್ಷಿಸಿ ಗರಂ ಆದ ಉಪ ಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ಅವರು ನಿಗಮದ ವಿಭಾಗೀಯ ನಿಯತ್ರಣಾಧಿಕಾರಿ ಸಿ.ಇ. ಶ್ರೀನಿವಾಸಮೂರ್ತಿ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಲು ಆದೇಶಿಸಿದರು.
ನಿಲ್ದಾಣಕ್ಕೆ ಗುರುವಾರ ಬೆಳಗ್ಗೆ ಹಠಾತ್ ಭೇಟಿ ನೀಡಿದ ಅವರು, ಗಲೀಜು, ಚರಂಡಿಗಳಲ್ಲಿ ಶುಚಿತ್ವ ಇಲ್ಲದಿರುವುದು, ಶುದ್ಧ ಕುಡಿವ ನೀರಿನ ಘಟಕ ಕೆಟ್ಟಿರುವುದು, ಮಾತೃಮನೆ ದುಸ್ಥಿತಿ ಇತ್ಯಾದಿ ಕುಂದು ಕೊರತೆಗಳನ್ನು ಗಮನಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
‘ತಮಗೆ ನಾಚಿಕೆಯಾಗಲ್ವೇ? ಮನೆಯನ್ನೂ ಹೀಗೆ ಇಟ್ಟುಕೊಳ್ಳುತ್ತೀರಾ? ಪೇಪರ್ ಓದಲ್ವಾ? ನಾನು ನಗರದಲ್ಲಿದ್ದೇನೆ ಎಂದು ಗೊತ್ತಿದ್ದರೂ ಕನಿಷ್ಠ ಸ್ವಚ್ಛತೆಗೆ ಗಮನ ಹರಿಸಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಪ್ರತಿ ವಾರ ನಿಲ್ದಾಣಕ್ಕೆ ಭೇಟಿ ನೀಡಿ ಜನರ ಕುಂದು ಕೊರತೆ ಆಲಿಸಿ ವರದಿ ನೀಡುವಂತೆ ಲೋಕಾಯುಕ್ತ ಎಸ್‌ಪಿ ಎನ್. ವಾಸುದೇವರಾಮ ಅವರಿಗೆ ತಾಕೀತು ಮಾಡಿದರು.
ಹೋಟೆಲ್, ನಿಗಮದ ಡಿಸಿ ಕಚೇರಿಗೂ ಭೇಟಿ ನೀಡಿ ಹಾಜರಾತಿ ಪುಸ್ತಕದಲ್ಲಿ ಅವರ ಸಹಿ ಇಲ್ಲದನ್ನು ಕಂಡು ಕೆಂಡವಾದರು. ಮೂವ್‌ಮೆಂಟ್‌ರಿಜಿಸ್ಟ್ರರ್ ಏನೆಂದು ಗೊತ್ತಿಲ್ಲವೇ? ಕ್ಯಾಶ್‌ಬುಕ್ ಎಲ್ಲಿ…ಇತ್ಯಾದಿ ಪ್ರಶ್ನೆಗಳ ಸುರಿಮಳೆ ಗರೆದರು.
ಈ ಹಂತದಲ್ಲಿ ನಿಗಮದ ಜಿಲ್ಲಾ ಅಧಿಕಾರಿ ಶ್ರೀನಿವಾಸಮೂರ್ತಿ ಪ್ರತಿಕ್ರಿಯಿಸಿ ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ಆನ್‌ಲೈನ್‌ಹಾಜರಾತಿ ಇದೆ. ಇಲ್ಲಿಗೆ ಯಾರೂ ಬರಲು ಸಿದ್ಧರಿರಲಿಲ್ಲ ಇತ್ಯಾದಿ ಸಮಜಾಯಿಷಿಗೆ ಮುಂದಾದಾಗ ಲಂಚ ಪಡೆದರಷ್ಟೇ ಭ್ರಷ್ಟರೆಂದಾಗದು, ಕೆಲಸದ ನಿರ್ಲಕ್ಷೃವೂ ಅಪ್ರಾಮಾಣಿಕತೆಯಾಗುತ್ತದೆ ಎಂದು ಎಚ್ಚರಿಸಿದರು.
ಸ್ವಚ್ಛತೆಯ ಗುತ್ತಿಗೆ ಏಜನ್ಸಿ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ? ನೀವು ಕಣ್ಣುಮುಚ್ಚಿ ಕುಳಿತ್ತಿದ್ದೀರಿ, ಮೆಲ್ನೋಟಕ್ಕೆ ಕರ್ತವ್ಯ ಲೋಪ ಎದ್ದು ಕಾಣುತ್ತಿದೆ. ಶುಕ್ರವಾರ ಮತ್ತೆ ನಿಲ್ದಾಣಕ್ಕೆ ಬರುತ್ತೇನೆ. ಪರಿಸ್ಥಿತಿ ಹೀಗೆ ಇದ್ದರೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡುವುದಾಗಿ ನಿಗಮದ ಡಿಸಿಯನ್ನು ಎಚ್ಚರಿಸಿದರು. ಹಾಜರಾತಿ ಪುಸ್ತಕ, ಕ್ಯಾಶ್‌ಬುಕ್ ಇತ್ಯಾದಿ ಪರಿಶೀಲಿಸುವಂತೆ ಲೋಕಾಯುಕ್ತ ಡಿವೈಎಸ್‌ಪಿ ಮೃತ್ಯುಂಜಯಗೆ ಸೂಚಿಸಿದರು.
ಪ್ರಯಾಣಿಕರ ದೂರು
ನಿಲ್ದಾಣ, ಬಸ್‌ಗಳ ಸಂಚಾರ ನಿರ್ವಹಣೆಯಲ್ಲಿನ ಲೋಪದ ಬಗ್ಗೆ ಪ್ರಯಾಣಿಕರು ದೂರಿದರು. ಕೆಲವು ಬಸ್‌ಗಳು ಸರಿಯಾದ ಸಮಯಕ್ಕೆ ಬರುವುದಿಲ್ಲ. ನಾವು ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗದಿದ್ದರೆ ವೇತನ ಕಡಿತವಾಗುತ್ತದೆ. ಈ ಬಗ್ಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಮನವಿ ಮಾಡಿದರೆ ಉಡಾಫೆ ಉತ್ತರ ನೀಡುತ್ತಾರೆ ಎಂದು ನಿತ್ಯ ಬಸ್‌ಗಳಲ್ಲಿ ಸಂಚರಿಸುವ ನೌಕರರು ತಿಳಿಸಿದರು.
ಬಸ್‌ಗಳ ಕೊರತೆ, ನಿಲ್ದಾಣಗಳಲ್ಲಿ ಮೊಬೈಲ್ ಕಳ್ಳತನ, ಪಾರ್ಕಿಂಗ್ ಸಮಸ್ಯೆ, ಭರಮಸಾಗರದಲ್ಲಿ ಬಸ್ ನಿಲುಗಡೆ ಸಹಿತ ನಾನಾ ಸಮಸ್ಯೆಗಳ ಬಗ್ಗೆ ಪ್ರಯಾಣಿಕರು ಗಮನ ಸೆಳೆದರು. ರಾತ್ರಿವೇಳೆ ಪೊಲೀಸರು ಅಂಗಡಿ, ಹೋಟೆಲ್ ಮುಚ್ಚಿಸುತ್ತಾರೆ ಎಂದು ನಿಲ್ದಾಣದ ಅಂಗಡಿ ಮುಂಗಟ್ಟುಗಳ ಬಾಡಿಗೆದಾರರು ದೂರಿದರು. ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗದಂತೆ ವಹಿವಾಟಿಗೆ ಅವಕಾಶ ನೀಡುವಂತೆ ಎಎಸ್‌ಪಿಗೆ ದರು. ನ್ಯಾಯಮೂರ್ತಿ ಸೂಚಿಸಿದರು.
ತ್ಯಾಜ್ಯ ವಿಲೇ ಘಟಕಕ್ಕೆ ಭೇಟಿ: ಹಂಪಯ್ಯನಮಾಳಿಗೆ ಸಮೀಪದ ನಗರಸಭೆ ತ್ಯಾಜ್ಯವಿಲೇವಾರಿ ಮತ್ತು ಸಂಸ್ಕರಣಾ ಘಟಕಕ್ಕೆ ನ್ಯಾಯಮೂರ್ತಿ ಭೇಟಿ ನೀಡಿ, ಘಟಕದ ನಿರ್ವಹಣೆಗೆ ಅಸಮಾಧಾನ ವ್ಯಕ್ತಪಡಿಸಿದರು. ದುರ್ವಾಸನೆ, ಸೊಳ್ಳೆ, ನೊಣಗಳ ಹರಡುವಿಕೆ ತಡೆಗೆ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಬೇಕು ಎಂದು ಸೂಚಿಸಿದರು.
ಸೊಳ್ಳೆ, ನಾಯಿ, ಕೆಟ್ಟ ವಾಸನೆ, ಮಾಂಸದಗಂಡಿ ತ್ಯಾಜದಿಂದ ನಾವು ಸಂಕಷ್ಟಲ್ಲಿದ್ದೇವೆ ಎಂದು ಗ್ರಾಮಸ್ಥರು ದೂರಿದರು. ಘಟಕಕ್ಕೆ ಎಂದಾದರೂ ಭೇಟಿ ನೀಡಿ ಸೂಚನೆ ಕೊಟ್ಟಿದ್ದೀರಾ ಎಂದು ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ ಆಸೀಫ್ ಖಾನ್ ಅವರನ್ನು ಪ್ರಶ್ನಿಸಿದರು. ಪರಿಶೀಲನೆ ನಡೆಸಿ ವರದಿ ನೀಡುವಂತೆ ನ್ಯಾಯಮೂರ್ತಿ ಸೂಚಿಸಿದರು.
ನಾಯಿಗಳ ಹಾವಳಿ ಇದೆ. ಕೊಳವೆ ಬಾವಿ ನೀರು ಕಲುಷಿತಗೊಂಡಿದೆ. ಮಕ್ಕಳು, ವೃದ್ಧರು ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು. ಹಸಿ ಕಸ ಮತ್ತು ತ್ಯಾಜ್ಯ ನೀರು ಹರಿಯುವ ಚರಂಡಿಯನ್ನು ಸೂಕ್ತ ರೀತಿಯಲ್ಲಿ ಮುಚ್ಚಲು ಕ್ರಮ ಕೈಗೊಳ್ಳಬೇಕು. ತಜ್ಞರ ಸಲಹೆಯೊಂದಿಗೆ ಪರಿಸ್ಥಿತಿ ಸುಧಾರಣೆಗೆ ನಗರಸಭೆ ಅಧಿಕಾರಿಗಳಿಗೆ ಒಂದು ತಿಂಗಳ ಗಡುವು ನೀಡಿದರು. ಘಟಕದ ನೌಕರರಿಗೆ ಸುರಕ್ಷಾ ಸಾಮಗ್ರಿ ಒದಗಿಸ ಬೇಕು ಎಂದು ನ್ಯಾಯಮೂರ್ತಿ ಸೂಚಿಸಿದರು.
ಅರಸನಕೆರೆಗೆ ಭೇಟಿ:
ನಗರದ ಎಂಕೆಹಟ್ಟಿ ಮುರುಘಾಮಠ ಎದುರಿನ ಅರಸನಕೆರೆಗೆ ಭೇಟಿ ನೀಡಿ, ನಗರಾಭಿವೃದ್ಧಿ ಪ್ರಾಧಿಕಾರದಿಂದ ಕೈಗೊಂಡಿರುವ ಅಂದಾಜು 5 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಪರಿಶೀಲಿಸಿದರು.
ಇದನ್ನು ಒಳ್ಳೆಯ ಪ್ರವಾಸಿ ತಾಣವನ್ನಾಗಿ ಮಾಡಬಹುದು. ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಯೋಜನೆ ವಿವರದ ಫಲಕ ಹಾಕಬೇಕು ಎಂದರು.
ಕುಡಾ ಆಯುಕ್ತ ಸೋಮಶೇಖರ್ ಮಾಹಿತಿ ನೀಡಿದರು. ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಜಿಪಂ ಸಿಇಒ ಎಸ್.ಜೆ. ಸೋಮಶೇಖರ್, ಲೋಕಾಯುಕ್ತ ಅಪರ ನಿಬಂಧಕರಾದ ಪೃಥ್ವಿರಾಜ್ ವರ್ಣೇಕರ್, ಜಿ.ವಿ. ವಿಜಯಾನಂದ, ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್ ಪಿ.ಎಂ. ಪಾಟೀಲ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಎಂ. ವಿಜಯ್, ಎಡಿಸಿ ಬಿ.ಟಿ. ಕುಮಾರಸ್ವಾಮಿ, ಎಎಸ್‌ಪಿ ಎಸ್.ಜೆ. ಕುಮಾರಸ್ವಾಮಿ, ಎಸಿ ವೆಂಕಟೇಶ್‌ನಾಯಕ್, ತಹಸೀಲ್ದಾರ್ ಡಾ. ನಾಗವೇಣಿ, ನಗರಸಭೆ ಆಯುಕ್ತೆ ಎಂ. ರೇಣುಕಾ ಇನ್ನಿತರ ಅಧಿಕಾರಿಗಳು ಇದ್ದರು.
ಕೆಎಸ್ಸಾರ್ಟಿಸಿ ನಿಲ್ದಾಣದ ಅವ್ಯವಸ್ಥೆಗೆ ತೀವ್ರ ಅಸಮಾಧಾನ

ಹೋಟೆಲ್ ಸ್ಟೈಲ್ ಪನೀರ್ ಅಮೃತಸರಿ ಮಾಡುವ ವಿಧಾನ ಇಲ್ಲಿದೆ; ನೀವೊಮ್ಮೆ ಟ್ರೈ ಮಾಡಿ | Recipe
ಹಲವು ಬಾರಿ ಒಂದೇ ರೀತಿಯ ಆಹಾರ ತಿಂದು ಬೇಸರವಾಗುತ್ತದೆ. ಆಗ ಹೋಟೆಲ್‌ಗೆ ಹೋಗಿ ಊಟ ಮಾಡಲು…
ಚಿನ್ನದ ಮೇಲೆ ಲೋನ್ ತಗೋತ್ತಿದ್ದೀರಾ? ಹಾಗಿದ್ರೆ ಈ ತಪ್ಪುಗಳಿಂದ ಮೊದಲು ದೂರವಿರಿ, ಇಲ್ಲದಿದ್ರೆ ನಷ್ಟ ಖಚಿತ | Gold Loan
Gold Loan: ಮನೆಯಲ್ಲಿದ್ದರೆ ಚಿನ್ನ ಚಿಂತೆಯೂ ಏತಕೇ ಇನ್ನಾ? ಎಂಬ ಮಾತನ್ನು ಇಂದಿಗೂ ನಮ್ಮ ಜನ…
ತಣ್ಣೀರಿನಲ್ಲಿ ಈಜುವುದರಿಂದಾಗುವ ಪ್ರಯೋಜನಗಳನ್ನು ನೀವು ತಿಳಿದುಕೊಳ್ಳಲೇಬೇಕು; ನಿಮಗಾಗಿಯೇ ಈ ಮಾಹಿತಿ | Health Tips
ತಣ್ಣೀರಿನಲ್ಲಿ ಈಜುವುದು ಕೇವಲ ಸಾಹಸ ಕ್ರೀಡೆ ಅಥವಾ ಹವ್ಯಾಸವಲ್ಲ. ಆದರೆ ಇದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು…