ಕಡೂರು: ತಾಪಂನಲ್ಲಿ ಗುರುವಾರ ಆಯೋಜಿಸಿದ್ದ ರಾಜ್ಯ ಸರ್ಕಾರದ ಪಂಚಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೆಎಸ್‌ಆರ್‌ಟಿಸಿ ವಿರುದ್ಧವೇ ಹಲವು ದೂರುಗಳು ಕೇಳಿಬಂದವು. ಬಸ್ ಕೊರತೆ, ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಾರೆ ಎಂದು ದೂರಿದರು.

ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಆಸಂದಿ ಕಲ್ಲೇಶ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅನುಷ್ಠಾನ ಸಮಿತಿ ಸದಸ್ಯ ಸಪ್ತಕೋಟಿ ಧನಂಜಯ್ ಮಾತನಾಡಿ, ಶಕ್ತಿ ಯೋಜನೆಯ ಮಾಹಿತಿ ನೀಡುವ ಸಾರಿಗೆ ಇಲಾಖೆ ಅಧಿಕಾರಿಗಳು ಪ್ರತಿ ಸಭೆಗೂ ಇಲಾಖೆಯ ಬೇರೆ ಬೇರೆ ಸಿಬ್ಬಂದಿಯನ್ನು ಕಳುಹಿಸುತ್ತಿರುವುದರಿಂದ ಸಮರ್ಪಕ ಮಾಹಿತಿ ಸಭೆಗೆ ಲಭ್ಯವಾಗುತ್ತಿಲ್ಲ. ಒಬ್ಬರನ್ನು ನೇಮಕ ಮಾಡಿದರೆ ಹಿಂದಿನ ಸಭೆಯ ಪ್ರಶ್ನೆಗಳಿಗೆ ಉತ್ತರ ಪಡೆಯಲು ಸಾಧ ಎಂದರು.
ಕಡೂರು ಬಸ್ ನಿಲ್ದಾಣದಲ್ಲಿ ಗ್ರಾಮೀಣ ಭಾಗಕ್ಕೆ ತೆರಳುವ ಮಹಿಳಾ ಪ್ರಯಾಣಿಕರು ಬಸ್ ಮಾರ್ಗದ ಬಗ್ಗೆ ಸಾರಿಗೆ ಅಧಿಕಾರಿಗಳನ್ನು ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಅಂಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕಿದೆ. ಮಹಿಳೆಯರಿಗಾಗಿಯೇ ಮೀಸಲಾದ ಯೋಜನೆಯಲ್ಲಿ ಸಾರಿಗೆ ಅಧಿಕಾರಿಗಳೇ ಬೇಜವಾಬ್ದಾರಿತನ ಪ್ರದರ್ಶಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು.
ಸದಸ್ಯ ತೌಸಿಬ್ ಮಾತನಾಡಿ, ಬೀರೂರು ಬಸ್ ನಿಲ್ದಾಣದಲ್ಲಿ ಸಮರ್ಪಕ ವ್ಯವಸ್ಥೆ ಇಲ್ಲ. ರಾತ್ರಿ ವಿದ್ಯುತ್ ದೀಪವಿಲ್ಲದೆ ಕತ್ತಲು ಆವರಿಸಿಕೊಳ್ಳುತ್ತದೆ. ಸಂಜೆಯಿಂದ ನಿಲ್ದಾಣದ ಒಳಗೆ ಬಸ್‌ಗಳು ಬಾರದೆ ಇರುವುದರಿಂದ ಪ್ರಯಾಣಿಕರು ಅಸಮಾಧಾನಗೊಂಡಿದ್ದಾರೆ. ಮುಂದಿನ ಸಭೆಯೊಳಗೆ ಬೀರೂರು ಬಸ್ ನಿಲ್ದಾಣದ ದೋಷಗಳನ್ನು ಅಧಿಕಾರಿಗಳು ಸರಿಪಡಿಸುವಂತೆ ಒತ್ತಾಯಿಸಿದರು. ಸಾರಿಗೆ ಅಧಿಕಾರಿ ಗಿರೀಶ್ ಮಾತನಾಡಿ, ಮುಂದಿನ ಸಭೆಯ ವೇಳೆಗೆ ಲೋಪಗಳನ್ನು ಸರಿಪಡಿಸುವುದಾಗಿ ಹೇಳಿದರು.
ಕೆಲವು ಸದಸ್ಯರು ಗ್ಯಾರಂಟಿ ಯೋಜನೆಯ ಸಮರ್ಪಕ ನಿರ್ವಹಣೆ ಬಗ್ಗೆ ಕೇಳುವುದನ್ನು ಬಿಟ್ಟು ವಿದ್ಯುತ್ ನಿಲುಗಡೆ, ಅಂಗನವಾಡಿ ದುರಸ್ತಿ, ಸ್ವಚ್ಛತೆ, ಖಾಲಿ ಇರುವ ಅಂಗನವಾಡಿ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಪ್ರಸ್ತಾಪಿಸಿದಾಗ ಅಧಿಕಾರಿಗಳಿಗೆ ಉತ್ತರ ನೀಡುವಲ್ಲಿ ಇರಿಸುಮುರಿಸು ಉಂಟಾಯಿತು. ಇಲಾಖೆಯ ಇತರ ಕಾರ್ಯಗಳ ಬಗ್ಗೆ ಕಚೇರಿಗೆ ಆಗಮಿಸಿ ಮಾಹಿತಿ ಪಡೆದುಕೊಳ್ಳಬೇಕಿದೆ ಎಂದು ಅಧಿಕಾರಿಗಳು ತಿಳಿಸಿದರು.
ಯುವನಿಧಿ ಯೋಜನೆ ಕುರಿತು ಇನ್ನೂ ಹೆಚ್ಚು ಪ್ರಚಾರಮಾಡಬೇಕು. ತಾಲೂಕಿನಲ್ಲಿ ಈ ಯೋಜನೆಯ ಮಾಹಿತಿಯೇ ಇಲ್ಲ ಎಂದು ಅಧಿಕಾರಿಗಳಿಗೆ ಸದಸ್ಯ ಧನಂಜಯ ತಿಳಿಸಿದರು. ಜಿಲ್ಲೆಯಲ್ಲಿ ನಾನೊಬ್ಬನೇ ಓಡಾಡಬೇಕಾಗಿದೆ ಎಂಬ ಅಸಮಧಾನದ ಉತ್ತರ ವ್ಯಕ್ತಪಡಿಸಿದರು.
ತಾಪಂ ಇಒ ಸಿ.ಆರ್.ಪ್ರವೀಣ್, ಗಿರೀಶ್‌ನಾಯ್ಕ, ಮಧು ಸಿಂಗಟಗೆರೆ, ರಮೇಶ್ ದಳವಾಯಿ, ಸಂತೋಷ್, ಮಚ್ಚೇರಿ ಚನ್ನಣ್ಣ, ಕುಪ್ಪಾಳು ಶೋಭಾ, ಸುಜಾತಾ ಚಂದ್ರಶೇಖರ್, ಪುಷ್ಪಾ, ಮೂರ್ತಿ, ರೋಹನ್ ಫರ್ನಾಂಡಿಸ್, ಮನು, ಅಧಿಕಾರಿಗಳು ಇದ್ದರು.